ತುರುವೇಕೆರೆ : ಅಧಿಕಾರವಿದ್ದಾಗ ಸಮಾಜಕ್ಕೆ ಅನುಕೂಲವಾಗುವಂತಹ ಶಾಶ್ವತ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಟಾನಗೊಳಿಸಬೇಕು, ಈ ನಿಟ್ಟಿನಲ್ಲಿ ತುರುವೇಕೆರೆ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪ ಶಾಶ್ವತ ಯೋಜನೆಗಳನ್ನು ತಾಲೂಕಿಗೆ ಕೊಡುಗೆಯಾಗಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಛೇರ್ಮನ್ ರಜನಿಗೌಡ ಪ್ರಶಂಶಿಸಿದರು.

ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಜೆ.ಕೆ.ಕಂಫರ್ಟ್ಸ್ ನಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು, ಕಳೆದ 2020-21 ರಲ್ಲಿ ತುರುವೇಕೆರೆಯಲ್ಲಿ ಸುಮಾರು 30 ರಿಂದ 40 ಮಹಿಳಾಮಣಿಗಳ ತಂಡದೊಂದಿಗೆ ಪ್ರಾರಂಭವಾದ ಸಂಸ್ಥೆ ಇಂದು ಸೇವಾ ಮನೋಭಾವವುಳ್ಳ ಮತ್ತಷ್ಟು ಮಹಿಳಾಮಣಿಗಳನ್ನು ನೂತನ ಸದಸ್ಯರನ್ನಾಗಿ ಸೇರ್ಪಡೆ ಮಾಡಿಕೊಂಡು ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಇದಲ್ಲದೆ ಸಂಸ್ಥಾಪಕ ಅಧ್ಯಕ್ಷರಿಂದ ಇಲ್ಲಿಯವರೆಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಎಲ್ಲರೂ ತಾಲೂಕಿಗೆ ವಿವಿಧ ಆಯಾಮಗಳಲ್ಲಿ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಇನ್ನರ್ ವೀಲ್ ಸಂಸ್ಥೆಯ ಬ್ರಾಂಡನ್ನು ಗಟ್ಟಿಯಾಗಿ ನೆಲೆಯೂರುವಂತಹ ತಂಗುದಾಣ ನಿರ್ಮಾಣ, ವಸ್ತ್ರ ಬದಲಾವಣೆಗೆ ಕುಠೀರ ನಿರ್ಮಾಣ, ಪಟ್ಟಣಕ್ಕೆ ಪ್ರವೇಶಿಸುವ ದ್ವಾರದಲ್ಲಿ ಸ್ವಾಗತ ಫಲಕಗಳ ನಿರ್ಮಾಣದಂತ ಶಾಶ್ವತ ಕಾರ್ಯಕ್ರಮ ಮಾಡಿರುವುದು ಬಹಳ ಹೆಮ್ಮೆ ಪಡುವಂತಹ ಸಂಗತಿಯಾಗಿದೆ. ಇದಲ್ಲದೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅನುಕೂಲ, ಧನಸಹಾಯ ಒದಗಿಸುವುದು, ಮಹಿಳೆಯರಿಗೆ ಸ್ವ ಉದ್ಯೋಗ ತರಬೇತಿಯಂತಹ ಕಾರ್ಯಕ್ರಮ ಆಯೋಜನೆ ನಡೆಸಿದ್ದು ಸಂಸ್ಥೆಯ ಪದಾಧಿಕಾರಿಗಳ ಸಮಾಜಮುಖಿ ಚಿಂತನೆಯ ಮಟ್ಟ ಎಷ್ಟಿದೆ ಎಂಬುದನ್ನು ಸಾರಿ ಹೇಳುತ್ತದೆ ಎಂದರು.

2025-26 ನೇ ಸಾಲಿನ ನೂತನ ಅಧ್ಯಕ್ಷೆ ಇಂದಿರಾ ಪ್ರಭಾಕರ್ ಮಾತನಾಡಿ, ಅಂತರರಾಷ್ಟ್ರೀಯ ಸಂಸ್ಥೆಯಾದ ಇನ್ನರ್ ವೀಲ್ ಕ್ಲಬ್ ನ ತುರುವೇಕೆರೆ ತಾಲ್ಲೂಕಿನ ಸಂಸ್ಥೆಗೆ ಅಧ್ಯಕ್ಷಳಾಗಿ ಅವಿರೋಧವಾಗಿ ಒಮ್ಮತದಿಂದ ಆಯ್ಕೆ ಮಾಡಿದ ಕ್ಲಬ್ ನ ಎಲ್ಲಾ ಪದಾಧಿಕಾರಿಗಳಿಗೆ ಧನ್ಯವಾದಗಳು. ಕ್ಲಬ್ ನ ಎಲ್ಲಾ ಮಾಜಿ ಅಧ್ಯಕ್ಷರು, ಸದಸ್ಯರುಗಳ ಸಹಕಾರದೊಂದಿಗೆ ಮುಂದಿನ ಒಂದು ವರ್ಷ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯಕ್ರಮಗಳನ್ನು ನಡೆಸುವುದಾಗಿ ತಿಳಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪನವರ ಅನುದಾನ ಹಾಗೂ ಕ್ಲಬ್ ಗೌರವ ಸಲಹೆಗಾರರಾದ ಡಾ.ಆಶಾ ಚೌದ್ರಿ ಅವರ ಸಹಕಾರದಿಂದ ತಾಲೂಕಿನ ದಂಡಿನಶಿವರ ಗ್ರಾಮದಲ್ಲಿ ನೂತನ ಬಸ್ ನಿಲ್ದಾಣ (ತಂಗುದಾಣ) ನಿರ್ಮಾಣ ಹಾಗೂ ಅದೇ ಗ್ರಾಮದಲ್ಲಿರುವ ಹಳೇ ತಂಗುದಾಣದ ಪುನರುಜ್ಜೀವನ, ಗ್ರಾಮದೇವತೆ ಶ್ರೀ ಹೊನ್ನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಶೌಚಾಲಯ ನಿರ್ಮಾಣ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಮಹಿಳೆಯರಲ್ಲಿ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ವಿವಿಧ ಮನರಂಜನಾ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ಈ ವರ್ಷದಲ್ಲಿ ಮಾಡುವ ಗುರಿಯನ್ನು ಹೊಂದಿದ್ದೇನೆ ಎಂದರು.
ಸಮಾರಂಭದಲ್ಲಿ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾದ ಇಂದಿರಾಪ್ರಭಾಕರ್ ಅವರನ್ನು ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಕಸಾಪ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅಭಿಮಾನಿಗಳು, ಹಿತೈಷಿಗಳು ಮೈಸೂರು ಪೇಟ ತೊಡಿಸಿ, ಶಾಲು, ಪುಷ್ಪಾಹಾರ ಹಾಕಿ ಅಭಿನಂದಿಸಿದರು. ತುಮಕೂರು ವಿಶ್ವವಿದ್ಯಾನಿಲಯ ಮಟ್ಟದಲ್ಲಿ 6ನೇ ರ್ಯಾಂಕ್ ಪಡೆದ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮಹಾಲಕ್ಷ್ಮೀ, 10 ನೇ ತರಗತಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಹರ್ಷಿತ್ ಪಿ.ಸಿ. ಹಾಗೂ ಹೆಚ್ಚು ಅಂಕ ಪಡೆದ ಬಾಪೂಜಿ ಕೇಂದ್ರೀಯ ಪ್ರೌಢಶಾಲೆಯ ವಿದ್ಯಾರ್ಥಿ ದೊಡ್ಡೇನಹಳ್ಳಿಯ ರಾಹುಲ್ ನಾಯಕ್ ಅವರನ್ನು ಪುರಸ್ಕರಿಸಲಾಯಿತು.
ನಿಕಟಪೂರ್ವ ಅಧ್ಯಕ್ಷೆ ನೇತ್ರ ಸಿದ್ದಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಖಜಾಂಚಿ ಮೀರಾಸಂಸ್ಕೃತಿ, ಜಿಲ್ಲಾ ಐಎಸ್.ಒ. ಸುಧಾದಿನೇಶ್, ಜಿಲ್ಲಾ ಸಂಪಾದಕಿ ಮಮತಾಬಾಲಾಜಿ, ಸಂಸ್ಥಾಪಕ ಅಧ್ಯಕ್ಷೆ ಗೀತಾಸುರೇಶ್, ಸ್ವಾಗತ ಸಮಿತಿ ಅಧ್ಯಕ್ಷೆ ಲತಾಪ್ರಸನ್ನ, ನಿಕಟಪೂರ್ವ ಕಾರ್ಯದರ್ಶಿ ಆನಂದಜಲ, ನೂತನ ಕಾರ್ಯದರ್ಶಿ ಮಮತಾ ಅಶೋಕ್, ಐಎಸ್.ಒ ಆನಂದಮದನ್, ಸಂಪಾದಕಿ ರಾಧಾ ಸೇರಿದಂತೆ ಇನ್ನರ್ ವೀಲ್ ಕ್ಲಬ್ ಆಫ್ಲ ಸಂಕಲ್ಪದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




