Ad imageAd image

ಸಾಮಾಜಿಕ ಸಮಸ್ಯೆಗಳ ವಿರುದ್ಧ ಮೂಡಿಬಂದ ಅಕ್ಷರ ರೂಪ ದಲಿತ ಸಾಹಿತ್ಯ : ಮಹದೇವ್

Bharath Vaibhav
ಸಾಮಾಜಿಕ ಸಮಸ್ಯೆಗಳ ವಿರುದ್ಧ ಮೂಡಿಬಂದ ಅಕ್ಷರ ರೂಪ ದಲಿತ ಸಾಹಿತ್ಯ : ಮಹದೇವ್
WhatsApp Group Join Now
Telegram Group Join Now

ತುರುವೇಕೆರೆ: ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯಗಳು ಎಪ್ಪತ್ತರ ದಶಕದಲ್ಲಿನ ಜಾತಿ ತಾರತಮ್ಯ, ಯಜಮಾನ ಸಂಸ್ಕೃತಿ, ಸಾಮಾಜಿಕ ಸಮಸ್ಯೆಗಳ ವಿರುದ್ಧ ಅಕ್ಷರ ರೂಪದಲ್ಲಿ ಮೂಡಿಬಂದ ಸಾಹಿತ್ಯ ಪ್ರಕಾರವಾಗಿದೆ ಎಂದು ದೊಡ್ಡಮಾರ್ಗೋನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಮಹದೇವ್ ತಿಳಿಸಿದರು.

ತಾಲ್ಲೂಕಿನ ಮಾಯಸಂದ್ರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕ ಆಯೋಜಿಸಿದ್ದ ಪ್ರಾಕ್ಷಿಕ ಸಾಹಿತ್ಯ ಕಾರ್ಯಕ್ರಮದಲ್ಲಿ ದಲಿತ ಸಾಹಿತ್ಯ, ಬಂಡಾಯ ಸಾಹಿತ್ಯದ ಬಗ್ಗೆ ಮಾತನಾಡಿದ ಅವರು, ಸಮಾಜದಲ್ಲಿನ ದೀನದಲಿತರ ಸಮಸ್ಯೆಗಳು, ಬಡತನ, ಹಸಿವು, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಬದುಕು ಬವಣೆಯಿಂದ ನೋವುಂಡವರನ್ನು ಆ ವ್ಯವಸ್ಥೆಯ ಚೌಕಟ್ಟಿನಿಂದ ಹೊರತರಬೇಕೆನ್ನುವ ಹಾಗೂ ಸೈದ್ಧಾಂತಿಕ ಚಿಂತನೆಯ ಬೆಳಕಿನೆಡೆಗೆ ಕರೆತಂದು ಬದುಕನ್ನು ಹಸನುಗೊಳಿಸುವ ನೆಲೆಗೆ ದಲಿತ, ಬಂಡಾಯ ಸಾಹಿತ್ಯಗಳು ಮುನ್ನುಡಿಯಿಟ್ಟಿತು ಎಂದರು.

ಬಡವ, ಶ್ರೀಮಂತರ ನಡುವಿನ ಆರ್ಥಿಕ, ರಾಜಕೀಯ, ಸಾಂಸ್ಕೃತಿಕ ಸಂಘರ್ಷಗಳನ್ನು ತೊಡೆದು ಸಮಾಜದಲ್ಲಿ ಸಮಾನತೆ ನೆಲೆ ಮೂಡಿಸಲು ಬರಗೂರು ರಾಮಚಂದ್ರಪ್ಪ, ಸಿದ್ದಲಿಂಗಯ್ಯ, ಕುಂ.ವೀರಭದ್ರಪ್ಪ, ದೇವನೂರು ಮಹದೇವ ಸೇರಿದಂತೆ ಅನೇಕ ದಲಿತ ಸಾಹಿತಿಗಳ ಬರವಣಿಗೆಗಳು, ಸಾಹಿತ್ಯಗಳ ಕೊಡುಗೆ ಅಪಾರವಾಗಿದೆ ಎಂದ ಅವರು, ಜನಪದ ಸಾಹಿತ್ಯ, ದಾಸ ಸಾಹಿತ್ಯದ ರೀತಿಯಲ್ಲಿ ದಲಿತ, ಬಂಡಾಯ ಸಾಹಿತ್ಯವೂ ಸಹ ನಾಡಿನ ಸಾಹಿತ್ಯ ಪರಂಪರೆಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ದಲಿತ, ಬಂಡಾಯ ಸಾಹಿತ್ಯ ದೀನದಲಿತರ, ಅಸ್ಪೃಶ್ಯರ, ಸಮಾಜದಲ್ಲಿ ಶೋಷಣೆಗೊಳಗಾದವರ ಪರವಾಗಿ ಮುಂಚೂಣೀಯಲ್ಲಿ ನಿಂತ ಸಾಹಿತ್ಯ ಪ್ರಕಾರ ಎಂದರೆ ತಪ್ಪಾಗಲಾರದು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಮಾಯಸಂದ್ರ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರಕಾಶ್, ಸದಸ್ಯರಾದ ಎಂ.ಕೆ.ಚಂದ್ರಶೇಖರ್, ಸಿ.ಎನ್.ನಂಜುಂಡಪ್ಪ, ಕಸಾಪ ನಗರ ಘಟಕ ಕಾರ್ಯದರ್ಶಿ ಗಿರೀಶ್ ಕೆ ಭಟ್, ಶಿಕ್ಷಕ ಅಶೋಕ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!