ಕಾಶ್ಮೀರ: ಭಾರತೀಯ ಸೇನೆಯ ಮಿಲಿಟರಿ ವಾಹನದ ಮೇಲೆ ಬೃಹದಾಕಾರದ ಬಂಡೆ ಉರುಳಿಬಿದ್ದ ಪರಿಣಾಮ ಇಬ್ಬರು ಯೋಧರು ಹುತಾತ್ಮರಾದ ಘಟನೆ ಜಮ್ಮು ಕಾಶ್ಮೀರದ ಲಡಾಖ್ ಬಳಿ ಸಂಭವಿಸಿದೆ.
ಸೇನಾ ಬೆಂಗಾವಲು ವಾಹನದಲ್ಲಿ ಯೋಧರು ತೆರಳುವ ವೇಳೆ ಈ ದುರಂತ ಸಂಭವಿಸಿದ್ದು, ಓರ್ವ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಒಟ್ಟು ಇಬ್ಬರು ಯೋಧರು ಮೃತಪಟ್ಟಿದ್ದು, ಇನ್ನೂ ಮೂವರು ಯೋಧರಿಗೆ ಗಾಯಗಳಾಗಿದೆ.
ಇಂದು (ಜು.30) ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಲಡಾಖ್ ನ ಲೇಹ್ ಪ್ರದೇಶದಿಂದ 200 ಕಿ.ಮೀ ದೂರದ ಗಾಲ್ವಾನ್ ದರ್ಬುಕ್ ಸಮೀಪದ ಚಾರ್ ಬಾಗ್ ನಲ್ಲಿ ಈ ದುರಂತ ಸಂಭವಿಸಿದೆ ಎಂದು ಭಾರತೆಯ ಸೇನೆ ಹೇಳಿದೆ. ಇನ್ನು ಈ ಅಪಘಾತದಲ್ಲಿ ಮೃತಪಟ್ಟವರನ್ನು ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮಂಕೋಟಿಯ ಮತ್ತು ಲ್ಯಾನ್ಸ್ ದಫಾದಾರ್ ದಲ್ಜಿತ್ ಸಿಂಗ್ ಎನ್ನಲಾಗಿದೆ.
ಇನ್ನು ಈ ಅಪಘಾತದಲ್ಲಿ ಗಾಯಗೊಂಡಿರುವ ಯೋಧರನ್ನು ಮೇಜರ್ ಮಯಾಂಕ್ ಶುಭಮ್, ಕ್ಯಾಪ್ಟನ್ ಗೌರವ್ ಮತ್ತು ಮೇಜರ್ ಅಜಿತ್ ದೀಕ್ಷಿತ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೋಸ್ಟ್ ಮಾಡಿರುವ ಸೇನಾಧಿಕಾರಿಗಳು ಕರ್ತವ್ಯದ ವೇಳೆ ಪ್ರಾಣ ತ್ಯಾಗ ಮಾಡಿದ ಧೈರ್ಯಶಾಲಿಗಳಾದ ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮಂಕೋಟಿಯಾ ಮತ್ತು ಲ್ಯಾನ್ಸ್ ದಫೇದಾರ್ ದಲ್ಜಿತ್ ಸಿಂಗ್ ಅವರಿಗೆ ಗೌರವ ಸಲ್ಲಿಸುತ್ತವೆ ಎಂದು ಹೇಳಿದ್ದಾರೆ.
ನಮ್ಮ ವೀರ ಯೋಧರನ್ನು ಕಳೆದುಕೊಂಡ ದುಃಖದಲ್ಲಿರುವ ನಾರ್ದರ್ನ್ ಕಮಾಂಡ್ ಅವರ ಕುಟುಂಬದೊಂದಿಗೆ ನಾವು ಅತ್ಯಂತ ದೃಢವಾಗಿ ನಿಲ್ಲುತ್ತದೆ ಎಂದು ನಾರ್ದರ್ನ್ ಕಮಾಂಡ್ ತನ್ನ X ಖಾತೆ ಫೈರ್ & ಫ್ಯೂರಿಯಲ್ಲಿ ಪೋಸ್ಟ್ ಮಾಡಿದೆ.
ಇದಲ್ಲದೇ ಇಂದು ITBP ಯೋಧರಿದ್ದ ಬಸ್ ನದಿಗೆ ಬಿದ್ದಿದ್ದು, ಹಲವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಯೋಧರನ್ನು ಹೊತ್ತೊಯ್ಯುತ್ತಿದ್ದ ಬಸ್ ಕುಲ್ಲನ್ ಸೇತುವೆಯಿಂದ ಹೊರಬಂದು ಸಿಂದ್ ನದಿಗೆ ಬಿದ್ದಿದೆ.
ಕಾಶ್ಮೀರದ ಗಂಡರ್ಬಾಲ್ನ ಕುಲ್ಲನ್ ಪ್ರದೇಶದಲ್ಲಿ ಜಂಟಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು,ಸಿಬ್ಬಂದಿಯನ್ನು ಪತ್ತೆಹಚ್ಚಲು ದೊಡ್ಡ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಬಸ್ ನಿಂದ ಕೆಲವು ಶಸ್ತ್ರಾಸ್ತ್ರಗಳನ್ನು ಹೊರತೆಗೆಯೋ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇಲ್ಲಿಯವರೆಗೆ, ನದಿಯಿಂದ ಮೂರು ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ವಶಪಡಿಸಿಕೊಳ್ಳಲಾಗಿದೆ.




