ಸಿರುಗುಪ್ಪ : ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಡಶಾಲಾ ಆವರಣದಲ್ಲಿ ಕರುನಾಡು ಸಾಹಿತ್ಯ ಪರಿಷತ್ತು(ರಿ) ಕರ್ನಾಟಕ ತಾಲೂಕು ಘಟಕದ ವತಿಯಿಂದ ನಡೆದ “ಸಾಮಾಜಿಕ ಜಾಲತಾಣಗಳ ಭರಾಟೆಯಲ್ಲಿ ನಲುಗಿತೇ ಪುಸ್ತಕದಲ್ಲಿನ ಸಾಹಿತ್ಯ” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯರಾದ ನಾಗೇಶ್ವರರಾವ್ ಅವರು ಉದ್ಘಾಟಿಸಿದರು.
ಕರುನಾಡು ಸಾಹಿತ್ಯ ಪರಿಷತ್ತು ತಾಲೂಕು ಘಟಕದ ಅಧ್ಯಕ್ಷರು ಹಾಗೂ ಲೇಖಕರಾದ ಲಕ್ಷಣ ನಿಟ್ರುವಟ್ಟಿ ಅವರು ತಮ್ಮ ಉಪನ್ಯಾಸದಲ್ಲಿ ಸಾಮಾಜಿಕ ಜಾಲತಾಣಗಳು ವಿದ್ಯಾಭ್ಯಾಸಕ್ಕೆ ಮಾರಕವಾಗುತ್ತಿವೆ.
ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳು ದೂರವಿದ್ದು, ಪುಸ್ತಕಗಳಲ್ಲಿನ ಸಾಹಿತ್ಯವನ್ನು ಓದಬೇಕು. ಮೊಬೈಲ್ ಚಟಕ್ಕೆ ಬಿದ್ದು ಹಾಳಾಗದೇ ಅಗತ್ಯವಿರುವಷ್ಟು ಮಾತ್ರ ಉಪಯೋಗಿಸಬೇಕು.
ಅತಿಯಾದ ಬಳಕೆಯು ಭವಿಷ್ಯದಲ್ಲಿ ಕೇಡನ್ನು ತರುತ್ತದೆ. ಶಾಲಾ ಪಠ್ಯಪುಸ್ತಕಗಳನ್ನು ಗ್ರಂಥಾಲಯಗಳಲ್ಲಿನ ಪುಸ್ತಕದ ಸಾಹಿತ್ಯವನ್ನು ಓದುವುದರಿಂದಾಗುವ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿದೆಂದು ತಿಳಿಸಿದರು.

ಉಪ ಪ್ರಾಚಾರ್ಯರಾದ ರಾಧಾ ಮಲ್ಲಪ್ಪ ಸಾಲಿಮನಿ ಮಾತನಾಡಿ ಸಾಮಾಜಿಕ ಜಾಲತಾಣಗಳು ಮಾದಕ ವಸ್ತುಗಳಂತಿದ್ದು, ಅವುಗಳು ನಮ್ಮನ್ನು ಕೆಲವೊಮ್ಮೆ ದಾರಿ ತಪ್ಪಿಸುತ್ತವೆ. ವಿದ್ಯಾರ್ಥಿಗಳಿಗೆ ಪಠ್ಯ ಸಾಹಿತ್ಯವು ಹೆತ್ತ ತಾಯಿ ಇದ್ದಂತೆ.
ಆದಕಾರಣ ಜಾಲತಾಣಗಳ ಸಾಧನಗಳಾದ ಮೊಬೈಲ್, ದೂರದರ್ಶನಗಳ ದಾಸರಾಗದೇ ಅವುಗಳಿಂದ ದೂರವಾಗುವ ಸಂಕಲ್ಪ ಮಾಡಿ ವಿದ್ಯಾರ್ಥಿ ದೆಸೆಯಿಂದಲೇ ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ನಿವೃತ್ತ ಶಿಕ್ಷಕರು ಅಬ್ದುಲ್, ಶಿಕ್ಷಕರಾದ ವೈ.ಮಲ್ಲಯ್ಯ, ಹುಚ್ಚೀರಪ್ಪ, ರಾಮಕೃಷ್ಣ, ಕರುನಾಡು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಪ್ರಥಮ ದರ್ಜೆ ಸಹಾಯಕ ಸುನೀಲ್, ಹಾಗೂ ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ : ಶ್ರೀನಿವಾಸ ನಾಯ್ಕ




