ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ದಾನಿಯ ಅಂಗಾಂಗವನ್ನು ಸಾಗಣೆ ಮಾಡಿ ಸೂಕ್ತ ಸಮಯಕ್ಕೆ ಅಂಗಾಂಗ ಕಸಿಯನ್ನು ಯುವಕನೋರ್ವನಿಗೆ ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನೆರವೇರಿಸಿ ರೋಗಿಗೆ ಜೀವದಾನ ನೀಡಲಾಗಿದೆ.
ಬೆಂಗಳೂರು ನಗರದ ಸಂಚಾರ ದಟ್ಟಣೆ ನಡುವೆ ಅಂಗಾಂಗ ಸಾಗಾಟ ತ್ವರಿತವಾಗಿ ಮಾಡುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಕೈ ಜೋಡಿಸಿದ್ದು ಶುಕ್ರವಾರ ರಾತ್ರಿ ಬೆಂಗಳೂರಿನ ವೈಟ್‌ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಿಂದ ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣಕ್ಕೆ ಯಕೃತ್‌ನ್ನು ಮೆಟ್ರೋ ಬೋಗಿಯ ಮೂಲಕ ತಂದು ಯಕೃತ್ ಕಸಿ ನೆರವೇರಿಸಲಾಯಿತು.
ವಾರಾಂತ್ಯದ ಸಂಚಾರ ದಟ್ಟಣೆ ಮತ್ತು ಅಂಗಾಂಗವು ಕೆಡದಂತೆ ಕೆಲವೇ ಗಂಟೆಗಳಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಯಕೃತ್ ಕಸಿ ನೆರವೇರಿಸಬೇಕಾಗಿದ್ದ ಹಿನ್ನೆಲೆಯಲ್ಲಿ ಯಕೃತ್ ಸಾಗಾಟಕ್ಕೆ ನಮ್ಮ ಮೆಟ್ರೋ ನೆರವು ಕೋರಲಾಗಿತ್ತು.
ತಕ್ಷಣವೇ ಕಾರ್ಯಪ್ರವೃತ್ತವಾದ ಮೆಟ್ರೋ ಸುರಕ್ಷತಾ ಸಿಬ್ಬಂದಿ ಯಕೃತ್ ಸಾಗಾಟ ಪ್ರಕ್ರಿಯೆಯನ್ನು ಸುಗಮವಾಗಿ ಮಾಡುವಲ್ಲಿ ಎಲ್ಲ ರೀತಿಯ ನೆರವನ್ನೂ ನೀಡಿದ್ದರು. 31 ಕಿಮೀನ ಈ ಪ್ರಯಾಣದಲ್ಲಿ ಮೆಟ್ರೋ ರೈಲು ಎಂದಿನಂತೆ 55 ನಿಮಿಷಗಳಲ್ಲಿ 32 ನಿಲ್ದಾಣಗಳನ್ನು ದಾಟಿ ರಾಜರಾಜೇಶ್ವರಿ ನಗರ ತಲುಪಿತ್ತು.
ಅಪಘಾತಕ್ಕೊಳಗಾಗಿ ಮೃತಪಟ್ಟಿದ್ದ 24 ವರ್ಷದ ಯುವಕನ ಹೃದಯ, ಯಕೃತ್ ಮತ್ತಿತರ ಅಂಗಾಂಗ ದಾನಕ್ಕೆ ಯುವಕನ ಕುಟುಂಬ ಶ್ರೇಷ್ಟ ನಿರ್ಧಾರ ಕೈಗೊಂಡು ಸಮ್ಮತಿ ಸೂಚಿಸಿತ್ತು.
ರಾಜರಾಜೇಶ್ವರಿ ನಗರದ ಸ್ಪರ್ಶ್ ಆಸ್ಪತ್ರೆಯ 30 ವರ್ಷದ ರೋಗಿಯೊಬ್ಬರು ತೀವ್ರ ಪ್ರಮಾಣದ ಹೆಪಟೈಟಿಸ್‌ನಿಂದಾಗಿ ಯಕೃತ್ ವೈಫಲ್ಯದಿಂದ ಯಕೃತ್ ಕಸಿಗಾಗಿ ಕಳೆದ ಎರಡು ತಿಂಗಳಿನಿಂದ ನಿರೀಕ್ಷೆಯಲ್ಲಿದ್ದರು.
ದಾನಿಯ ಯಕೃತ್ ಮತ್ತು ರೋಗಿಯ ಯಕೃತ್ ಹೊಂದಾಣಿಕೆಯಾಗುತ್ತಿದ್ದುದರಿಂದ ತಕ್ಷಣ ಕಾರ್ಯಪ್ರವೃತ್ತವಾದ ಸ್ಪರ್ಶ್ ವೈದ್ಯರ ತಂಡ ಯಕೃತ್ ಅಂಗಾಗ ಕಸಿ ಹಿರಿಯ ಸಮಾಲೋಚಕ ಡಾ.ಮಹೇಶ್ ಗೋಪಸೆಟ್ಟಿ ನೇತೃತ್ವದಲ್ಲಿ ಶುಕ್ರವಾರ ರಾತ್ರಿ ಯಕೃತ್ ಕಸಿ ನೆರವೇರಿಸಿದ್ದು ಇದೀಗ ರೋಗಿಯು ಐಸಿಯುನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ನಮ್ಮ ಮೆಟ್ರೋ, ಕರ್ನಾಟಕ ಅಂಗಾಂಗ ಕಸಿ ಪ್ರಾಧಿಕಾರ ಸೊಟ್ಟೋ ಹಾಗೂ ಸ್ಪರ್ಶ್ ಆಸ್ಪತ್ರೆಯ ನುರಿತ ವೈದ್ಯರು ಹಾಗೂ ತಂಡದ ಸಮನ್ವಯದಿಂದ ಇದು ಸಾಧ್ಯವಾಗಿದೆ.




