ಅಚಲಾಸಿಯಾ ಕಾರ್ಡಿಯಾಕ್ಕೆ ಗಾಯ ರಹಿತ ಶಸ್ತ್ರಚಿಕಿತ್ಸೆ
ಹುಬ್ಬಳ್ಳಿ : ನಗರದ ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯು, ಆಹಾರ ನುಂಗಲು ಕಷ್ಟಪಡುವ ಅಪರೂಪದ ಕಾಯಿಲೆಯಾದ ’ಅಚಲಾಸಿಯಾ ಕಾರ್ಡಿಯಾ’ ಕ್ಕೆ ‘ಪರ್‌ಓರಲ್ ಎಂಡೋಸ್ಕೋಪಿಕ್ ಮೈಯೋಟಮಿ’ ಎಂಬ ಗಾಯದ ಗುರುತು ರಹಿತ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಗೋವಿಂದ ಅಪ್ಪ (ಹೆಸರು ಬದಲಾಯಿಸಲಾಗಿದೆ) ಎಂಬ ೨೮ ವರ್ಷದ ಯುವಕ, ಕಳೆದ ಒಂದು ವರ್ಷದಿಂದ ಆಹಾರ ನುಂಗಲು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಇದರಿಂದಾಗಿ ಗಣನೀಯವಾಗಿ ತೂಕ ಕಳೆದುಕೊಂಡಿದ್ದರು. ಹಲವಾರು ಆಸ್ಪತ್ರೆಗಳಿಗೆ ಭೇಟಿ ನೀಡಿದರೂ ತಾತ್ಕಾಲಿಕ ಪರಿಹಾರವಷ್ಟೇ ದೊರೆತಿತ್ತು. ಕೊನೆಗೆ ಅವರು ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ತಜ್ಞರ ತಂಡವನ್ನು ಸಂಪರ್ಕಿಸಿದ್ದರು.
ಈ ಯಶಸ್ವಿ ಚಿಕಿತ್ಸೆಯ ನೇತೃತ್ವವನ್ನು ಅಡ್ವಾನ್ಸ್ಡ್ ಇಂಟರ್ವೆನ್ಷನಲ್ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಸಲಹೆಗಾರ ಡಾ. ಸಂದೀಪ್ ಕುಂಬಾರ ವಹಿಸಿದ್ದರು. ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಸಂಜೀವ್ ಚಟ್ನಿ ಮತ್ತು ಆಸ್ಪತ್ರೆಯ ವೈದ್ಯಕೀಯ ಮುಖ್ಯಸ್ಥ ಡಾ. ಪ್ರವೀಣಾ ಗಾಯತ್ರಿ ಕೆ. ಅವರನ್ನೊಳಗೊಂಡ ತಂಡವು ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾಗಿದೆ. ರೋಗಿಯನ್ನು ಪರೀಕ್ಷಿಸಿದಾಗ, ಅವರಿಗೆ ‘ಅಚಲಾಸಿಯಾ ಕಾರ್ಡಿಯಾ’ ಎಂಬ ಕಾಯಿಲೆ ಇರುವುದು ಪತ್ತೆಯಾಯಿತು.
ಈ ಸ್ಥಿತಿಯಲ್ಲಿ, ಅನ್ನನಾಳ ಮತ್ತು ಹೊಟ್ಟೆಯ ನಡುವಿನ ಸ್ನಾಯುಗಳು ಅಸಹಜವಾಗಿ ಬಿಗಿಗೊಂಡು ಆಹಾರವು ಸರಾಗವಾಗಿ ಸಾಗದಂತೆ ತಡೆಯುತ್ತಿತ್ತು. ಡಾ. ಸಂದೀಪ್ ಕುಂಬಾರ್ ಅವರು ರೋಗಿಗೆ ಲ್ಯಾಪರೋಸ್ಕೋಪಿಕ್ ಶಸ್ತ್ರಚಿಕಿತ್ಸೆ ಮತ್ತು ಪೋಯೆಮ್ (Pಇಒ) ಚಿಕಿತ್ಸೆಗಳ ಆಯ್ಕೆಯನ್ನು ನೀಡಿದರು. ಪೋಯೆಮ್ ಒಂದು ಕನಿಷ್ಠ ಆಕ್ರಮಣಕಾರಿ ಎಂಡೋಸ್ಕೋಪಿಕ್ ತಂತ್ರವಾಗಿದ್ದು, ಇದರಲ್ಲಿ ದೇಹದ ಮೇಲೆ ಯಾವುದೇ ಗಾಯ ಅಥವಾ ಕಡಿತ ಮಾಡಲಾಗುವುದಿಲ್ಲ ಮತ್ತು ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ.
ಸಾಮಾನ್ಯವಾಗಿ, ಈ ಚಿಕಿತ್ಸೆಯು ಹೈದರಾಬಾದ್ ಅಥವಾ ಬೆಂಗಳೂರಿನಂತಹ ಮೆಟ್ರೋ ನಗರಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಆದರೆ, ಹುಬ್ಬಳ್ಳಿಯ ರೋಗಿಗಳಿಗೂ ಈ ಅತ್ಯಾಧುನಿಕ ಚಿಕಿತ್ಸೆ ದೊರೆಯಬೇಕು ಎಂಬ ದೃಢ ಸಂಕಲ್ಪದೊಂದಿಗೆ, ಡಾ. ಕುಂಬಾರ್ ಅವರು ಸ್ಥಳೀಯವಾಗಿಯೇ ಉನ್ನತ ಮಟ್ಟದ ಉಪಕರಣಗಳನ್ನು ಮತ್ತು ವಿಶೇಷ ಪರಿಕರಗಳನ್ನು ಸಿದ್ಧಪಡಿಸಿಕೊಂಡರು. ಕೊಚ್ಚಿಯ ರಾಜಗಿರಿ ಆಸ್ಪತ್ರೆಯ ಡಾ. ರಿಜ್ವಾನ್ ಅವರ ಕಾರ್ಯವಿಧಾನದ ಬೆಂಬಲದೊಂದಿಗೆ ಈ ಪೋಯೆಮ್ ಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು.
ರೋಗಿಯು ಕೇವಲ ಎರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ, ಸಹಜವಾಗಿ ಆಹಾರ ಸೇವಿಸಲು ಪ್ರಾರಂಭಿಸಿದ್ದಾರೆ. ಇದು ಈ ಭಾಗದ ಗ್ಯಾಸ್ಟ್ರೋಎಂಟರಾಲಜಿ ಆರೈಕೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ ಎಂದು ಎಚ್‌ಸಿಜಿ ಸುಚಿರಾಯು ಆಸ್ಪತ್ರೆಯ ಡಾ. ಸಂದೀಪ ಕುಂಬಾರ, ಡಾ. ಸಂಜೀವ್ ಚಟ್ನಿ, ಸಿಇಒ ರಂಜಿತ್ ಶೆಟ್ಟಿ, ಮೆಡಿಕಲ್ ಸರ್ವಿಸ್ ಹೆಡ್ ಡಾ. ಪ್ರವೀಣಾ ಗಾಯತ್ರಿ ತಿಳಿಸಿದರು.
ವರದಿ : ಸುಧೀರ್ ಕುಲಕರ್ಣಿ




