ಸಿರುಗುಪ್ಪ : ನಗರದ ಶ್ರೀಶೈಲ ಪೀಠದ ಶಿವಶಕ್ತಿ ಸಾಂಸ್ಕೃತಿಕ ಭವನದಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯಿಂದ ಸಿರುಗುಪ್ಪ, ಸಿಂಧನೂರು ಮಾರ್ಗವಾಗಿ ನೂತನ ರೈಲ್ವೆ ಮಾರ್ಗ ನಿರ್ಮಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮನವಿ ಸಲ್ಲಿಸಲು ವಿವಿಧ ಪಕ್ಷ, ಹಾಗೂ ಸಂಘಟನೆಗಳ ಮುಖಂಡರ ನಿಯೋಗ ತೆರಳಲು ಪೂರ್ವಭಾವಿ ಸಭೆ ನಡೆಯಿತು.

ಕರ್ನಾಟಕ ರೈಲು ಕ್ರಿಯಾ ಸಮಿತಿ ಬಳ್ಳಾರಿಯ ಅಧ್ಯಕ್ಷ ಕೆ.ಎಮ್.ಮಹೇಶ್ವರಪ್ಪ ಅವರು ಮಾತನಾಡಿ ನಮ್ಮ ಕೋರಿಕೆ ಮೇರೆಗೆ 2013ರಲ್ಲಿ ರೈಲ್ವೆ ಮಂತ್ರಿಗಳಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ರೈಲ್ವೆ ಬಜೆಟ್‌ನಲ್ಲಿ ಮಂಡಿಸಿದ್ದರು.
2014ರಲ್ಲಿ ಪ್ರಧಾನಿಯಾದ ಶ್ರೀ ನರೇಂದ್ರ ಮೋದೀಜಿಯ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ರೈಲ್ವೆ ಮಂತ್ರಿಗಳಾಗಿದ್ದ ಸದಾನಂದಗೌಡರು ಈ ಮಾರ್ಗದ ಪ್ರಸ್ತಾವನೆ ತಮ್ಮ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು.
ರೈಲ್ವೆ ಇಲಾಖೆ ಸರ್ವೆ ಕೆಲಸವನ್ನು ಮುಗಿಸಿ ಇಂದಿಗೆ ಹತ್ತು ವರ್ಷಗಳಾದರೂ ಕಾಮಗಾರಿ ಕೆಲಸ ಆರಂಭವಾಗಿಲ್ಲ.
ಆದ್ದರಿಂದ ಈ ಭಾಗದಲ್ಲಿನ ಹಾಲಿ ಮತ್ತು ಮಾಜಿ ಸಂಸದರು, ಶಾಸಕರು, ಸಂಘ ಸಂಸ್ಥೆಗಳ ಮುಖಂಡರಾದ ನಾವೆಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ದೆಹಲಿಗೆ ನಿಯೋಗ ಹೋಗಿ ರೈಲ್ವೆ ಮಂತ್ರಿಗಳಾದ ವಿ.ಸೋಮಣ್ಣ ಅವರ ಗಮನಹರಿಸಬೇಕಿದೆ.
ಇದರಿಂದಾಗಿ ಈ ಭಾಗದ ಜನರು ಹಲವಾರು ವರ್ಷಗಳಿಂದ ಕಂಡ ಕನಸು ನನಸಾಗಿ ಮುಂದಿನ ಪೀಳಿಗೆಗಾದರೂ ಉತ್ತಮ ಸೌಲಭ್ಯಗಳು ದೊರೆಯಲಿವೆ. ಆದ್ದರಿಂದ ಎಲ್ಲರ ಸಹಕಾರ ಅತ್ಯಗತ್ಯ ಎಂದರು.
ಮಾಜಿ ಶಾಸಕರಾದ ಟಿ.ಎಮ್.ಚಂದ್ರಶೇಖರಯ್ಯ ಸ್ವಾಮಿ, ಎಮ್.ಎಸ್.ಸೋಮಲಿಂಗಪ್ಪ ಅವರು ಮಾತನಾಡಿ ಉತ್ತರ ಕರ್ನಾಟಕ ಜಿಲ್ಲೆಗಳಿಂದ ರಾಜಧಾನಿಗೆ ಪ್ರಯಾಣಿಸಲು ಈ ಭಾಗದಲ್ಲಿ ರೈಲು ಸೇವೆಯ ಅಗತ್ಯತೆ ಇದೆ.
ಅಂತಹ ಕೆಲಸಕ್ಕಾಗಿ ಎಲ್ಲರನ್ನೂ ಒಗ್ಗೂಡಿಸುವಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷರು ಶ್ರಮಿಸುತ್ತಿದ್ದು ನಾವೆಲ್ಲರೂ ಅವರಿಗೆ ಬೆನ್ನೆಲುಬಾಗಿ ಇರಬೇಕಾಗಿದೆ ಎಂದರು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಮಾತನಾಡಿ ರೈಲು ಸಂಚಾರದಿಂದಾಗಿ ಇಲ್ಲಿನ ಜನರ ಪ್ರಯಾಣ ವೆಚ್ಚ ಕಡಿಮೆಯಾಗಲಿದೆ ಎಂದರು.
ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ಪುರಷೋತ್ತಮ ಗೌಡ ಅವರು ಮಾತನಾಡಿ ನಾವೆಲ್ಲರೂ ಬೆಳೆಯುವ ಭತ್ತವನ್ನು ಸಾಗಾಣಿಕೆಗೆ ರೈಲು ಅವಶ್ಯಕವಾಗಿದೆಂದರು.
ಅಕ್ಕಿಗಿರಣಿಗಳ ಮಾಲಿಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ ಅವರು ಮಾತನಾಡಿ ರೈಲು ಸೇವೆಯಿಲ್ಲದ ಕಾರಣ ರಸ್ತೆ ಸಂಚಾರದ ವಾಹನಗಳಲ್ಲಿ ಅಕ್ಕಿಯನ್ನು ಸಾಗಿಸುವ ದುಬಾರಿ ವೆಚ್ಚವನ್ನು ಕಡಿತಗೊಳಿಸಿ ಅದನ್ನು ರೈತರಿಗೆ ನೀಡಬಹುದಾಗಿದೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ ವೆಂಕಟೇಶ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಆನಂದಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಮದುಸೂಧನ ಕಾರಿಗನೂರು, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ, ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎಮ್.ಸತೀಶ ಸೇರಿದಂತೆ ವಿದ್ಯಾಸಂಸ್ಥೆಗಳು, ಇನ್ನಿತರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




