ತುರುವೇಕೆರೆ: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ದೇಶಾಭಿಮಾನವನ್ನು ಮೂಡಿಸಿಕೊಳ್ಳಬೇಕು ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್ ತಿಳಿಸಿದರು.
ಪಟ್ಟಣದ ದೇವರಮನೆ ಶಿಕ್ಷಣ ಟ್ರಸ್ಟ್ ವತಿಯಿಂದ ಎಇಎಸ್ ಹಾಗೂ ಗ್ಲೋಬಲ್ ಎಂಬಸ್ಸಿ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶದ ಭವಿಷ್ಯವಾದ ಪುಟಾಣಿ ಮಕ್ಕಳು ಪೋಷಕರು, ಶಿಕ್ಷಕರು ಹೇಳಿಕೊಟ್ಟ ಪಾಠವನ್ನು ಶ್ರದ್ಧೆಯಿಂದ ಕಲಿಯಬೇಕು. ತಂದೆ, ತಾಯಿ, ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ನಮ್ಮನ್ನು ಹೆತ್ತ ತಾಯಿಗೆ ತೋರಿಸುವಷ್ಟೇ ಪ್ರೀತಿ, ಗೌರವ, ಅಭಿಮಾನ ಉಸಿರು ಇರುವವರೆಗೂ ನಮ್ಮನ್ನು ಕಾಪಾಡುವ ಈ ದೇಶದ ಮೇಲೆ ಇರಬೇಕು ಎಂದರು.
ಮಹಾತ್ಮಾ ಗಾಂಧೀಜಿ, ಜವಹರ್ ಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಲಾಲ್ ಬಹದ್ದೂರ್ ಶಾಸ್ತ್ರೀ ಅವರಂತಹ ಸಹಸ್ರಾರು ಮಹನೀಯರ ತ್ಯಾಗ, ಬಲಿದಾನದಿಂದ ದೊರೆತಿರುವ ಸ್ವಾತಂತ್ರ್ಯದ ರಕ್ಷಣೆ ದೇಶದ ಪ್ರತಿಯೊಬ್ಬ ನಾಗರೀಕರದ್ದಾಗಿದೆ. ಇಂದಿನ ಮಕ್ಕಳೇ ಮುಂದಿನ ದೇಶದ ಪ್ರಜೆಗಳು ಎಂಬ ಮಾತಿನಂತೆ ನೀವೆಲ್ಲರೂ ಉತ್ತಮವಾಗಿ ಅಧ್ಯಯನ ಮಾಡಿ, ಸಮಾಜದ ಸತ್ಪ್ರಜೆಗಳಾಗಿ ದೇಶಕ್ಕೆ ಕೊಡುಗೆ ನೀಡುವಂತವರಾಗಬೇಕು. ನಿಮ್ಮ ತಂದೆ, ತಾಯಿ, ಗುರುಗಳಿಗೆ ಒಳ್ಳೆಯ ಹೆಸರು ತರುವಂತಹ ಮಕ್ಕಳು ನೀವಾಗಬೇಕು ಎಂದರು.
ಈ ಸಂದರ್ಭದಲ್ಲಿ ಎಇಎಸ್ ಹಾಗೂ ಗ್ಲೋಬಲ್ ಎಂಬಸ್ಸಿ ಶಾಲೆಯ ಪ್ರಾಂಶುಪಾಲೆ ಶರಿತಾ ದೇವರಮನೆ, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಕಾರ್ಯದರ್ಶಿ ಮಮತಾ ಅಶೋಕ್, ಪದಾಧಿಕಾರಿಗಳಾದ ಮಧುಶ್ರೀ, ಕಾವ್ಯ, ಆಶಾರಾಜಶೇಖರ್, ಶೋಭಾ, ಸುಗುಣ, ಉಮಾಕುಮಾರ್, ಶಿವಗಂಗಾ ಸೇರಿದಂತೆ ಶಾಲೆಯ ಶಿಕ್ಷಕಿಯರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




