ಬೆಂಗಳೂರು: ಮಕ್ಕಳನ್ನು ಸುಧಾರಿಸಿ, ತಿದ್ದಿ ತೀಡಿ ಸಮಾಜಕ್ಕೆ ಒಂದು ಶಕ್ತಿಯನ್ನಾಗಿ ರೂಪಿಸುವಲ್ಲಿ ಅಂಗನವಾಡಿ ಶಿಕ್ಷಕಿಯರ ಪಾತ್ರ ಶ್ಲಾಘನೀಯ’ ಎಂದು ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು ತಿಳಿಸಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಾಗಲಗುಂಟೆಯ ಶ್ರೀ ಸಾಯಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಲಾದ ಅಂಗನವಾಡಿಗಳಿಗೆ ಟಿವಿ, ಮೆಡಿಕಲ್ ಕಿಟ್ ಮತ್ತು ನೋಟ್ ಬುಕ್ಸ್ ವಿತರಿಸಿ ಮಾತನಾಡಿದರು.
ಸಿಡಿಪಿಓ( ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ) ಕೆ.ಎಸ್. ಶಕುಂತಲಾ ದೇವಿ ಮಾತನಾಡಿ,’ ಅಂಗನವಾಡಿ ಕೇಂದ್ರಗಳಿಗೆ ಕಲಿಕೆಗೆ ಪೂರಕವಾದ ಪೀಠೋಪಕರಣ, ಆಟಿಕೆ ಸಾಮಗ್ರಿ ಮತ್ತು ನೋಟ್ ಬುಕ್ ಸಾಮಗ್ರಿಗಳನ್ನು ಉದ್ಯಮಿಗಳು ಮತ್ತು ದಾನಿಗಳಿಂದ ಶಾಸಕರು ಈಗಾಗಲೇ ಕೊಡಿಸಿದ್ದಾರೆ. ಅವರ ಸೇವೆ ಮರೆಯುವಂತಿಲ್ಲ’ ಎಂದರು.
ಶಾಸಕ ಎಸ್. ಮುನಿರಾಜು ಮಾತನಾಡಿ,’ ಮಕ್ಕಳಲ್ಲಿ ಬೌದ್ಧಿಕ ಮತ್ತು ಮಾನಸಿಕ ಶಕ್ತಿ ಬೆಳವಣಿಗೆಗೆ ಪಠ್ಯದ ಜೊತೆಗೆ ವಿವಿಧ ಆಟಿಕೆ ಸಾಮಗ್ರಿ, ಟಿವಿ, ಆರೋಗ್ಯಕ್ಕಾಗಿ ಮೆಡಿಕಲ್ ಕಿಟ್ ಸಹ ನೀಡಲಾಗುತ್ತಿದೆ’
ಕ್ಷೇತ್ರದ ಅನೇಕ ಭಾಗಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ಕಟ್ಟಡದ ಕೊರತೆ ಇದೆ, ಮುಂದೆ ಅದನ್ನೆಲ್ಲ ಸರಿಪಡಿಸಿ ನನ್ನ ಕ್ಷೇತ್ರದ ಅಂಗನವಾಡಿ ಕೇಂದ್ರಗಳು ಮಾದರಿಯಾಗುವಂತೆ ಮಾಡಲಾಗುತ್ತದೆ’ಎಂದು ತಿಳಿಸಿದರು.
ಸಮಾರಂಭದಲ್ಲಿ ಸರ್ಕಾರಿ ಕಟ್ಟಡದ ಅಂಗನವಾಡಿ ಕೇಂದ್ರಗಳಿಗೆ ಟಿವಿ, ಇತರೆ ಅಂಗನವಾಡಿಗಳಿಗೆ ಮೆಡಿಕಲ್ ಕಿಟ್, ಸೂರಜ್ ಫೌಂಡೇಶನ್ ವತಿಯಿಂದ ಉಚಿತ ನೋಟ್ ಬುಕ್ಸ್ ನೀಡಲಾಯಿತು.
ಶಿಶು ಅಭಿವೃದ್ಧಿ ಯೋಜನ ಸಹಾಯಕ ಅಧಿಕಾರಿ ತೇಜಸ್ವಿನಿ, ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಎಸ್ ಮುನಿರಾಜು, ಶಿಕ್ಷಕಿಯರು ಮತ್ತು ಮೇಲ್ವಿಚಾರಕಿಯರು ಇದ್ದರು.
ವರದಿ: ಅಯ್ಯಣ್ಣ ಮಾಸ್ಟರ್




