ಕನ್ನಡ ನಾಡಿನ ಚರಿತ್ರೆಯಿಂದ ಗತಕಾಲದ ನೆನಪುಗಳನ್ನು ಕೆದಕಿದರೆ ಅಮೂಲ್ಯವಾದ ಅನರ್ಘ್ಯ ರತ್ನವೊಂದು ಕಾಣ ಸಿಗುತ್ತದೆ. ಅದುವೇ ಬೆಳವಡಿಯ ರಾಣಿ ಮಲ್ಲಮ್ಮ. ಹೆಣ್ಣು ಮಗುವನ್ನು ಗಂಡು ಮಗುವಂತೆ ಬೆಳೆಸಿದ ಸೋದೆಯ ಅರಸು, ಅವಳಿಗೆದುರಾಗೋ ಸಂಕಟಗಳಿಗೆಲ್ಲ ರಣಚಂಡಿಯಾಗಿ ನಿಂತ ಅವಳ ಆ ಪರಾಕ್ರಮ, ಕೊನೆಗೆ ಹೂಲಿ ಶ್ರೀಗಳ ಮಾತಿಗೆ ಕರಗಿ ದಯಾಮಯಿಯಾಗಿ ಛತ್ರಪತಿ ಶಿವಾಜಿಗೆ ಪ್ರಾಣಭಿಕ್ಷೆ ನೀಡಿದ ಕನ್ನಡ ನಾಡಿನ ಕರುಣಾಮಯಿ ತಾಯಿಯೇ ಬೆಳವಡಿಯ ರಾಣಿ ಮಲ್ಲಮ್ಮ. ಪ್ರತಿ ಕನ್ನಡತಿಯು ಹೆಮ್ಮೆಯಿಂದ ತಾನು ಕನ್ನಡತಿ ಎಂದು ಜಗತ್ತಿಗೆ ಸಾರಿ ಸಾರಿ ಕೂಗಿ ಹೇಳಲು ವೀರ ವನಿತೆ ಮಲ್ಲಮ್ಮಳನ್ನು ಉದಾಹರಣೆ ಮಾಡಬಹುದಾಗಿದೆ.
ಸ್ವಾಭಿಮಾನ ಬೆರೆತ ವೀರ ಶೌರ್ಯದ ಭಾಗ್ಯದಾತೆ ಬೆಳವಡಿಯ ಪುಣ್ಯದೇವತೆ ಮಲ್ಲಮ್ಮಳ ಇತಿಹಾಸವನ್ನು ಓದುತ್ತಿದ್ದರೆ ಪ್ರತಿ ವ್ಯಕ್ತಿಯು ನಿಬ್ಬೆರಗಾಗಿ ಹುಬ್ಬೇರಿಸುವಂತಾಗುತ್ತದೆ. ಬೆಳವಡಿಯ ದೇಸಾಯಿ ಮನೆತನ, ಆ ಚತುರ ಗೂಢಾಚಾರರು, ಆ ಸ್ವಾಭಿಮಾನ ತುಂಬಿದ ಸೈನ್ಯ, ಅದರ ಮುಂದಾಳತ್ವ ವಹಿಸಿದ ಸೇನಾಧಿಪತಿಗಳು, ಇನ್ನೂ ಆ ಮಹಿಳಾ ಸೈನ್ಯದ ಪರಾಕ್ರಮಗಳ ಕುರಿತು ಓದುತ್ತಿದ್ದರೆ ಕನ್ನಡಿಗರ ಆ ಶೌರ್ಯಕ್ಕೆ ಇನ್ನೊಂದು ಕಳಶವಿಟ್ಟಂತೆ.

ರಾಣಿ ಮಲ್ಲಮ್ಮಳ ತವರೂರು ಸೋದೆಯ ರಾಜ ಮಧುಲಿಂಗ ನಾಯಕರ ರಾಜಸಭೆಯಲ್ಲಿ ಬ್ರಿಟಿಷ್ ವರ್ತಕರ ನಿಯೋಗವೊಂದು ತಮಗೆ ಕನ್ನಡ ನಾಡಿನಲ್ಲಿ ವ್ಯಾಪಾರ ಮಾಡಲು ಅನುಮತಿ ಕೋರಿ ಮಾತನಾಡಲು ಬಂದಾಗ, ಯುವರಾಣಿ ಮಲ್ಲಮ್ಮ ಬ್ರಿಟಿಷ್ ವರ್ತಕರನ್ನು ತಬ್ಬಿಬ್ಬುಗೊಳಿಸಿದ ಪ್ರಸಂಗವನ್ನು ಮಲ್ಲಮ್ಮಳ ಗುರುಗಳಾಗಿದ್ದ ಶಂಕರ ಭಟ್ಟರು ಸಂಸ್ಕೃತದಲ್ಲಿ ಬರೆದ “ಶಿವವಂಶ ಸುದರ್ವ”ದಲ್ಲಿ ನಾವು ಸೂಕ್ಷ್ಮವಾಗಿ ಗಮನಿಸಬಹುದಾದ ಅಂಶವಾಗಿದೆ.
ಬರೀ ಕರ್ನಾಟಕವಲ್ಲ ಭಾರತದಾದ್ಯಂತ ಬ್ರಿಟಿಷರಿಗೆ ವ್ಯಾಪಾರಕ್ಕೆ ನಿಷೇಧ ಹೇರಬೇಕು ಎಂಬ ರಾಣಿಯ ವಾದದ ಕಥೆ ಕೇಳಿದರೆ ಕನ್ನಡಿಗರು ಹೆಮ್ಮೆಯಿಂದ ಎದೆ ಸೆಟಿಸಿ ಬೀಗುತ್ತಾರೆ. ಕೇವಲ 16 ವರ್ಷದ ಹೆಣ್ಣು ಮಗಳೊಬ್ಬಳು ವಿಶ್ವದಲ್ಲಿಯೇ ಮೊದಲ ಬಾರಿಗೆ ಎರಡು ಸಾವಿರಕ್ಕೂ ಅಧಿಕ ಮಹಿಳಾ ಸೈನಿಕರ ಪಡೆಕಟ್ಟಿ, ಸೇನೆಗೆ ಉತ್ಕೃಷ್ಟ ತರಬೇತಿ ನೀಡಿದ ಹೆಗ್ಗಳಿಕೆ ಏನಾದರೂ ಇದ್ದರೆ ಅದುವೇ ಬೆಳವಡಿಯ ರಾಣಿ ಮಲ್ಲಮ್ಮ. ಇದನ್ನು ಕನ್ನಡ ನಾಡು ಮಾತ್ರವಲ್ಲ ವಿಶ್ವದ ಸೈನಿಕ ಇತಿಹಾಸವೇ ಎಂದಿಗೂ ಮರೆಯಲಾಗದು. ಯಾರ ಹೆಸರು ಕೇಳಿದರೆ ಮೊಘಲ್ ಸಾಮ್ರಾಜ್ಯವು ಬೆಚ್ಚಿ ಬೀಳುತ್ತಿತ್ತೋ! ಯಾರ ಹೆಸರು ಕೇಳಿದರೆ ರಜಫೂತ ಯೋಧರು ಭಯಗೊಳ್ಳುತ್ತಿದ್ದರೋ!! ಯಾರ ಹೆಸರು ಕೇಳಿದರೆ ಬ್ರಿಟಿಷ್ ವರ್ತಕರು ಮಾತ್ರವಲ್ಲ ಛತ್ರಪತಿ ಶಿವಾಜಿಯ ಒಂದೂವರೆ ಲಕ್ಷ ಸೈನಿಕರು ಗಡಗಡನೆ ನಡುಗುತ್ತಿದ್ದರೋ!!! ಅಷ್ಟೇ ಅಲ್ಲ, ಯಾರ ಹೆಸರು ಕೇಳಿದರೆ ಎಂಟೆದೆಯ ಗುಂಡಿಗೆಯ ಗಂಡು ಕೂಡ ನೀರ್ವಿರ್ಯನಾಗುತ್ತಿದ್ದನೋ!!! ಅಂತಹ ಪರಾಕ್ರಮವನ್ನು ಮೆರೆದ ಕನ್ನಡ ನಾಡಿನ ಮಾಣಿಕ್ಯವೇ ವೀರನಾರಿ ಮಲ್ಲಮ್ಮ. ಮರಾಠರೊಂದಿಗಿನ ಯುದ್ಧದ ಸಂದರ್ಭದಲ್ಲಿ ರಾಣಿ ಮಲ್ಲಮ್ಮಳ ಪತಿ ಈಶಪ್ರಭು ಧರಾಶಾಹಿಯಾಗಿ ಕೊನೆಯುಸಿರೆಳೆದಾಗ ಇಡೀ ಬೆಳವಡಿ ಸೂತಕದ ಸಮುದ್ರದಲ್ಲಿ ಮಿಂದು ಕುಳಿತಂತಾಗಿತ್ತು.
ಆ ಹೊತ್ತಿಗಾಗಲೇ ಮಲ್ಲಮ್ಮಳ ಮನದಲ್ಲಿ ರಣಚಂಡಿಯ ಆವಾಹನೆಯಾಗಿದ್ದಳು. ಅವಳ ಮುಖದಲ್ಲಿ ದುಃಖ ಕಣ್ಣಲ್ಲಿ ನೀರಿದ್ದರೂ ಮನಸ್ಸಿನಲ್ಲಂತೂ ಶಿವಾಜಿಯನ್ನು ಮಟ್ಟ ಹಾಕಲೇಬೇಕೆಂಬ ರಣೋತ್ಸಾಹ ನೂರ್ಮುಡಿಯಾಯಿತು. ಸಖೂಜಿಯನ್ನು ಹೆಡೆಮುರಿ ಕಟ್ಟಿ ಶಿವಾಜಿಯ ಶಿರಸ್ಸನ್ನು ಪತಿಯ ಖಡ್ಗದಿಂದಲೇ ಚಂಡಾಡಬೇಕು. ಇನ್ನು ಸಹನೆ ಒಳ್ಳೆಯದಲ್ಲ, ಬೆಳವಡಿಯ ತಾಳ್ಮೆ ಈಶಪ್ರಭುವಿನ ಸಾವಿನೊಂದಿಗೆ ಸಮಾಪ್ತಿಯಾಗಬೇಕು. ಇನ್ನೇನಿದ್ದರೂ ಖಡ್ಗವೇ ಉತ್ತರ ನೀಡುತ್ತದೆ. ಬೆಳವಡಿಯ ರಾಜ ಈಶಪ್ರಭುವಿನ ಪಾರ್ಥಿವ ಶರೀರದ ಪಾದಗಳನ್ನು ಮುಟ್ಟಿ ನಮಸ್ಕರಿಸಿ, “ಪ್ರಭು ಶಿವಾಜಿಯನ್ನು ಸೋಲಿಸಿ ಬಂದಲ್ಲದೆ ನಿಮ್ಮ ಅಂತ್ಯಕ್ರಿಯೆ ಮಾಡಲಾರೆ.
ಇಲ್ಲವಾದರೆ ಈ ಬೆಳವಡಿಯ ಜನತೆ ಇಬ್ಬರನ್ನು ಒಂದೇ ಚಿತೆಯಲ್ಲಿ ನೋಡಲಿ. ಗೆಲುವು ಇಲ್ಲವೇ ವೀರ ಸ್ವರ್ಗ, ವೀರಭದ್ರನೆ ನಿರ್ಧರಿಸಲಿ” ಎಂದು ಹೇಳಿ ರಣಚಂಡಿ ಅವತಾರ ತಾಳಿದಳು. ವೀರಗಚ್ಚೆ ಹಾಕಿ ತನ್ನ ನೆಚ್ಚಿನ ಕುದುರೆಯನ್ನೇರಿ ಚಾಮುಂಡಿ ಸೈನ್ಯವನ್ನು ಬೆನ್ನಿಗೆ ಇಟ್ಟುಕೊಂಡು, ಕೋಟೆಯ ಬಾಗಿಲನ್ನು ತೆರೆಯಿಸಿ, ಮರಾಠರ ಸೈನ್ಯವನ್ನು ಎದುರಿಸಲು ಕಾಳಿಯಂತೆ ಮುನ್ನುಗ್ಗಿದಳು. ಮಲ್ಲಮ್ಮಳ ರಣೋತ್ಸಾಹ ಮುಖದಲ್ಲಿನ ರೌದ್ರತೆ ಕಣ್ಣುಗಳಲ್ಲಿನ ಬೆಂಕಿ ಎದುರಾಳಿಯ ಸೈನ್ಯವನ್ನು ಧೂಳಿಪಟ ಮಾಡಿತು. ಅವಳಿಗೆದುರಾಗಿ ನಿಂತು ಯುದ್ಧ ಮಾಡಲಾಗದೆ ಶತ್ರು ಸೈನಿಕರು ರಣರಂಗದಿಂದ ಪಲಾಯನ ಮಾಡತೊಡಗಿದರು. ರಾಣಿ ಮಲ್ಲಮ್ಮಳ ಚಾಮುಂಡಿ ಎಂಬ ಮಹಿಳಾ ಸೈನ್ಯದ ಮುಂದೆ ಶಿವಾಜಿಯ ಸೈನ್ಯ ತರಗೆಲೆಯಂತೆ ತೂರಾಡತೊಡಗಿತು. ಸೂತ್ರದ ದಾರ ತಪ್ಪಿದ ಗಾಳಿಪಟದಂತೆ ನಿಶ್ಚಿತವಿಲ್ಲದ ಗುರಿಯಿಲ್ಲದೆ ನೇತೃತ್ವ ವಹಿಸಿಕೊಳ್ಳುವ ನಾಯಕನಿಲ್ಲದೆ ಸ್ವತಃ ಶಿವಾಜಿಯ ದಂಡನಾಯಕ ಸಖೂಜಿಯೇ ರಣರಂಗದಿಂದ ಪಲಾಯನ ಮಾಡಿದನು.
ಕುದುರೆಯ ಮೇಲೆ ವೀರಗಚ್ಚೆ ಹಾಕಿ ಕುಳಿತ ಮಲ್ಲಮ್ಮಳ ಎರಡು ಕೈಗಳಲ್ಲಿನ ಖಡ್ಗಗಳು ಸಮನಾದ ವೇಗದಲ್ಲಿ ಮಿಂಚಿನಂತೆ ಹರಿದಾಡುತ್ತಿದ್ದರೆ ಮರಾಠ ಸೈನಿಕರ ದೇಹಗಳಿಂದ ರಕ್ತ ಚಿಲ್ಲನೆ ಚಿಮ್ಮಿ ರಕ್ತದ ಓಕುಳಿಯನ್ನೇ ಹರಿಸತೊಡಗಿತ್ತು. ಚಾಮುಂಡಿ ಸೈನ್ಯ ಮುಗಿಬಿದ್ದು ದಾಳಿ ಮಾಡುತ್ತಿದ್ದರೆ ಎದುರಾಳಿ ಸೈನಿಕರು ಅಂಗಾಂಗ ವಿಹೀನರಾಗಿ ಭಯಂಕರವಾಗಿ ಅರಚುತ್ತ ನೆಲಕ್ಕುರುಳುತ್ತಿದ್ದರು. ಅವರಿಗೆ ಬೀಳುತ್ತಿದ್ದ ಏಟುಗಳು ಹೇಗಿದ್ದವೆಂದರೆ ಏಳೇಳು ಜನ್ಮವನ್ನು ನೆನಪಿಸಿಕೊಳ್ಳುವಂತಹ ಮರ್ಮಾಘಾತಗಳು.
ಈ ಯುದ್ಧವನ್ನು ಬ್ರಿಟಿಷ್ ವರ್ತಕರು ಬೆರಗು ಗಣ್ಣುಗಳಿಂದ ವೀಕ್ಷಿಸುತ್ತಿದ್ದರು. ಮಲ್ಲಮ್ಮಳ ಶೌರ್ಯ ಪರಾಕ್ರಮ ಮತ್ತು ಅನುಪಮ ಸಾಹಸವನ್ನು ತಮ್ಮ ತವರು ದೇಶ ಇಂಗ್ಲೆಂಡಿನಲ್ಲಿನ ಮೇಲಾಧಿಕಾರಿಗಳಿಗೆ ಪತ್ರದ ಮುಖಾಂತರ ಬರೆದು ತಿಳಿಸಿದರು. ಬ್ರಿಟಿಷ್ ವರ್ತಕರು ಬರೆದ ಪತ್ರಗಳಲ್ಲಿ ಯುದ್ಧದ ಕುರಿತಂತೆ ಈ ರೀತಿ ಒಕ್ಕಣೆಯಿತ್ತು. (Hi (Shivaji) is at present besieging a front where by relation of their own people come from him.
He has suffered more disgrace than even he did from all power of the Mogull or the Decans (Bijapuris). he who hath conquered so many kingdoms is not able to reduce this woman Desai.) ಯುದ್ಧದಲ್ಲಿ ಶಿವಾಜಿಯ ಸೈನ್ಯವು ಬೆಳವಡಿಯ ಮಲ್ಲಮ್ಮಳ ಕೋಟೆಯನ್ನು ಮುತ್ತಿಗೆ ಹಾಕಲು ಯತ್ನಿಸಿತು. ಈ ಪ್ರಯತ್ನದಲ್ಲಿ ಎಲ್ಲಾ ಮೊಘಲರ ಮತ್ತು ಎಲ್ಲಾ ದಕ್ಕನ್ನಿನ ಅರಸರಿಂದ ಅನುಭವಿಸಿದ್ದಕ್ಕಿಂತ ಹೆಚ್ಚು ಮುಖಭಂಗವನ್ನು ಮಲ್ಲಮ್ಮಳಿಂದ ಶಿವಾಜಿಯ ಸೈನ್ಯ ಅನುಭವಿಸಿತು. ಇದರಿಂದ ಶಿವಾಜಿಗೆ ಮರ್ಮಾಘಾತವಾಯಿತು.
ಮಲ್ಲಮ್ಮಳ ದಾಳಿಗೆ ತತ್ತರಿಸಿ ಹೋಗುತ್ತಿದ್ದ ಶಿವಾಜಿಯ ಸೈನ್ಯ ತಾವು ಹೀಗೆ ಹಿಂದಕ್ಕೆ ಎಷ್ಟು ದೂರ ಓಡಿ ಹೋಗಬೇಕು? ಮತ್ತು ರಾಣಿ ತಮ್ಮನ್ನು ಎಲ್ಲಿಯವರೆಗೆ ಹೀಗೆ ಅಟ್ಟಾಡಿಸಿಕೊಂಡು ಬರುತ್ತಾಳೆ? ಎಂಬುದು ತಿಳಿಯದೆ ಮಾನಸಿಕ ಸ್ಥಿತಿ ಕಳೆದುಕೊಂಡ ವ್ಯಕ್ತಿಗಳಂತೆ ಓಡುತ್ತಿರುವುದೊಂದೇ ಕೆಲಸವಾಗಿತ್ತು. ಮರಾಠಾ ಸೈನ್ಯ ಹೈರಾಣವಾಗಿತ್ತು, ಯಾತನಾಮಯದಿಂದ ಕೂಡಿತ್ತು. ಎತ್ತ ಹೋಗಬೇಕೆಂದು ತಿಳಿಯದೆ, ಬೀಳುತ್ತಿರುವ ಏಟನ್ನೂ ತಡೆಯಲಾರದೆ ಸಿಕ್ಕ ಸಿಕ್ಕಲ್ಲಿ ಓಡುತ್ತಿದ್ದರು. ಎತ್ತ ಓಡಿದರೂ ಮಲ್ಲಮ್ಮಳ ಚಾಮುಂಡಿ ಸೈನ್ಯದ ಆರ್ಭಟವೇ ಕೇಳಿ ಬರುತ್ತಿತ್ತು.
ಎಲ್ಲೆಲ್ಲೂ ಶತ್ರು ಸೈನಿಕರ ಅರ್ತನಾದ ಹಾಹಾಕಾರ ಭಯಂಕರ ಕಿರುಚಾಟಗಳೇ ಕೇಳಿ ಬರುತ್ತಿದ್ದವು. ಮರಾಠಾ ಸೈನಿಕರು ಬೆಳವಡಿಯ ಸೈನ್ಯದ ಮರ್ಮಾಘಾತದ ಏಟುಗಳನ್ನು ತಾಳಲಾರದೆ ಯುದ್ಧಕ್ಕೆ ಬೆನ್ನು ತೋರಿಸಿ ಕಾಲಿಗೆ ಬುದ್ಧಿ ಹೇಳಿದರು. ಎಲ್ಲರೂ ತಮ್ಮ ಪಾಳೆಯದ ಶಿಬಿರದತ್ತ ಓಡಿ ತಲೆಮೆರೆಸಿಕೊಳ್ಳುವುದೊಂದೇ ಅವರಿಗೆ ಉಳಿದಿದ್ದ ಮಾರ್ಗ ಮತ್ತು ಕೊನೆಯ ಮಾರ್ಗವಾಗಿತ್ತು. ಅವರು ಅದನ್ನೇ ಮಾಡಿದರು ಕೂಡ. ರಣರಂಗದಲ್ಲಿ ಕಂದೀಲು ಹಚ್ಚಿಕೊಂಡು ಹುಡುಕಿದರೂ ಒಬ್ಬೇ ಒಬ್ಬ ಶತ್ರು ಸೈನಿಕ ಕಣ್ಣಿಗೆ ಬೀಳುತ್ತಿರಲಿಲ್ಲ. “ರಣಹೇಡಿ ಮರಾಠಿಗರು, ಮರಾಠ ಸೈನಿಕರೆಲ್ಲ ಹೆಣ್ಣು ನಾಯಿಗೆ ಅಂಬಲಿ ಹೊರುವವರು ಅಷ್ಟೇ. ಕಾದಾಡಿ ಗೆಲ್ಲುವ ಕಲಿ ವೀರರು ಅವರಲ್ಲೆಲ್ಲಿದ್ದಾರೆ? ಬನ್ನಿ ನಾಳೆ ಬೆಳಕು ಹರಿದ ಮೇಲೆ ನೋಡಿಕೊಳ್ಳೋಣ” ಎಂದು ಮಲ್ಲಮ್ಮ ತನ್ನ ಸೈನ್ಯವನ್ನು ಬೆಳವಡಿಯ ಜನರನ್ನು ಯುದ್ಧ ಭೂಮಿಯಿಂದ ಮರಳಿ ಕರೆ ತಂದಳು.
ಈ ವರ್ಷದ ಆಗಸ್ಟ್ 18ಕ್ಕೆ ಬೆಳವಡಿಯ ವೀರರಾಣಿ ಮಲ್ಲಮ್ಮಳ 366 ನೇ ಜನ್ಮದಿನ. ಇಂದಿಗೆ 366 ವರ್ಷಗಳ ಹಿಂದೆ ಶ್ರಾವಣ ಮಾಸ ಕೃಷ್ಣ ಪಕ್ಷದ ಅಷ್ಟಮಿಯ ದಿನದಂದು ಸೋದೆಯ ಅರಸು ಮಧುಲಿಂಗ ನಾಯಕನ ಮಗಳಾಗಿ ಜನಿಸಿದ ಕನ್ನಡ ನಾಡಿನ ರತ್ನವೇ ಬೆಳವಡಿಯ ರಾಣಿ ಮಲ್ಲಮ್ಮ. ಬೆಳವಡಿಯ ರಾಜ ಈಶಪ್ರಭುವನ್ನು ವಿವಾಹವಾಗಿದ್ದ ಮಲ್ಲಮ್ಮ 64 ಕ್ಷತ್ರಿಯ ವಿದ್ಯೆಗಳಲ್ಲೂ ಪ್ರವೀಣೆ. ಶೌರ್ಯ ಪರಾಕ್ರಮಗಳಲ್ಲಿ ಅವಳಿಗವಳೆ ಸಾಟಿ. ಯುದ್ಧದಲ್ಲಿ ರಣಚಂಡಿ, ಸಮರದಲ್ಲಿ ಕಾಳಿ, ಮಲ್ಲಮ್ಮಳೆದರು ನಿಂತು ಯುದ್ಧ ಮಾಡುವ ಗಂಡಸು ಅವಳ ಶೌರ್ಯದ ಮುಂದೆ, ಅವಳು ಕೊಡುವ ಕದನದ ಮರ್ಮಾಘಾತಗಳು ಎಂತಹ ಗಂಡಸನ್ನು ನಿರ್ವಿರ್ಯನನ್ನಾಗಿ ಮಾಡುತ್ತಿದ್ದವು.
ಕನ್ನಡ ನಾಡು ಮತ್ತು ಇತಿಹಾಸಕಾರರು ಮರೆತಿರುವ ಮಲ್ಲಮ್ಮಳ ಪರಾಕ್ರಮದ ಪರಂಪರೆ ಇಡೀ ಭಾರತದ ವೀರ ವನಿತೆಯರಿಗೆ ಸ್ಪೂರ್ತಿ. 350 ವರ್ಷಗಳ ಹಿಂದೆಯೇ ಬೆಳವಡಿಯ ರಾಣಿ ಮಲ್ಲಮ್ಮ ಬ್ರಿಟಿಷರನ್ನು ಭಾರತದೊಳಗೆ ಬಿಟ್ಟು ಕೊಳ್ಳಬಾರದು ಎಂಬ ಕಹಳೆಯನ್ನು ಮೊಳಗಿಸಿದ್ದು ಇಂದು ಇತಿಹಾಸದಲ್ಲಿ ದಾಖಲಾಗಿ ಉಳಿದಿದೆ. ಕನ್ನಡ ನಾಡಿಗೆ ಸೌಭಾಗ್ಯ ತಂದುಕೊಟ್ಟವಳು ಮತ್ತು ಕನ್ನಡ ನಾಡಿನ ಹೆಮ್ಮೆ ಸಂಸ್ಕೃತಿ ಪರಂಪರೆಯನ್ನು ಆಚಂದ್ರಾರ್ಕವಾಗಿ ಉಳಿಯುವಂತೆ ಮಾಡಿದ ಮಲ್ಲಮ್ಮಳ ಶೌರ್ಯ ಪರಾಕ್ರಮಗಳಿಗೆ ಛತ್ರಪತಿ ಶಿವಾಜಿ ಕೂಡ ಸೋತಿದ್ದ! ಎಂಬುದು ನಮಗೆಲ್ಲ ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯು ಕೂಡ ಮಲ್ಲಮ್ಮಳಿಂದ ಪ್ರೇರೇಪಿತಳಾಗಿದ್ದಳು!!
ಎಂಬುದು ಇಲ್ಲಿ ನಾವು ಮನಗಾಣಬಹುದಾಗಿದೆ. ಯುದ್ಧದಲ್ಲಿ ವೀರ ವಿಹಾರ ಮಾಡಿದ ರಾಣಿ ಮಲ್ಲಮ್ಮ ಇತಿಹಾಸದಲ್ಲಿ ಬಂಗಾರದ ಪುಟದಲ್ಲಿ ರಾರಾಜಿಸುವಂತಹವಳು.
ಮರಾಠರನ್ನು ಗೆದ್ದ ನಂತರ ಮಹಾರಾಣಿ ಮಲ್ಲಮ್ಮ ಒಂದು ಶುಭದಿನ ಬೆಳವಡಿಯ ಸಿಂಹಾಸನದಲ್ಲಿ ವಿರಾಜಮಾನವಾಗುವ ದಿನವೂ ಬಂದಿತು. ಹೂಲಿ ಶ್ರೀಗಳ ಆಶೀರ್ವಾದದೊಂದಿಗೆ ಛತ್ರಪತಿ ಶಿವಾಜಿಯ ಉಪಸ್ಥಿತಿಯಲ್ಲಿ ಸಿಂಹಾಸನಾರೋಹಣ ಮಾಡಿದ ಮಲ್ಲಮ್ಮ ಆಡಳಿತದ ಚುಕ್ಕಾಣಿ ಹಿಡಿದು ಸಮರ್ಥವಾಗಿ ಸುವ್ಯವಸ್ಥಿತ ಆಡಳಿತ ನಡೆಸುತ್ತಿದ್ದರೆ ಸಂಸ್ಥಾನಕ್ಕೆ ಒಳಪಟ್ಟ ನಾಡಿನ ಎಲ್ಲರನ್ನು ಸೌಖ್ಯವಾಗಿ ಇಟ್ಟಿದ್ದು ನಾಡು ಸಮೃದ್ಧಿಯಿಂದ ಕೂಡಿತ್ತು.
ಎಲ್ಲರೂ ಸುಖದಿಂದ ನೆಮ್ಮದಿಯಿಂದ ಇದ್ದರು. ಮಲ್ಲಮ್ಮಳ ಲೋಕಹಿತ ಕಾರ್ಯಗಳು ಅವಳನ್ನು ಮತ್ತಷ್ಟು ಜನಾನುರಾಗಿಯನ್ನಾಗಿ ಮಾಡಿದವು. ಯುದ್ಧದ ನಂತರ ಸೈನಿಕರಿಗೆ ಬಹುಮಾನ ಮತ್ತು ಉಡುಗೊರೆ ಹಾಗೂ ಬಕ್ಷೀಸುಗಳನ್ನು ಬರಪೂರ ನೀಡಿದಳು. ಅದೇ ರೀತಿ ಬಡಬಗ್ಗರಿಗೆ ಕೊಡಗೈ ದಾನಿಯಾಗಿದ್ದಳು. ಗುರುಮಠಗಳಿಗಂತೂ ಯಾವುದೇ ರೀತಿಯ ಕೈಹಿಡಿತವಿಲ್ಲದ ಹೇರಳವಾಗಿ ದಾನ ಮಾಡುತ್ತಿದ್ದಳು. ಆದ್ದರಿಂದಲೇ ಮಲ್ಲಮ್ಮಳನ್ನು ದಾನದಲ್ಲಿ ಕಲ್ಪವೃಕ್ಷೆ ಎಂದು ಅವಳನ್ನು ಹೊಗಳಲಾಗುತ್ತಿತ್ತು . ಹೀಗೆ ದಾನ ಧರ್ಮಗಳಲ್ಲಿ ತಲ್ಲಿನಳಾಗಿದ್ದವಳ ಆಡಳಿತದಲ್ಲಿ ರಾಜ್ಯ ಸುಭೀಕ್ಷವಾಗಿತ್ತು. ರೈತರು ತೆರಿಗೆಯಿಂದ ಮುಕ್ತರಾಗಿರುವಂತೆ ಮಾಡಿದ್ದಳು.
ಸ್ವಭಾವತಹ ಭಾವನಾಜೀವಿ ಮತ್ತು ಸೂಕ್ಷ್ಮ ಮನಸ್ಸಿನವಳಾಗಿದ್ದ ರಾಣಿ ಮಲ್ಲಮ್ಮಳಿಗೆ 60 ವಸಂತಗಳನ್ನು ದಾಟಿದ ನಂತರ ಆಧ್ಯಾತ್ಮಿಕತೆಯಲ್ಲಿನ ಒಲವು ಇಮ್ಮಡಿಯಾಗಿತ್ತು. ರಾಮಾಯಣ ಮಹಾಭಾರತ ಭಗವದ್ಗೀತೆ ಭಾಗವತ ಹೀಗೆ ಗ್ರಂಥಗಳ ಪಾರಾಯಣ ಮಾಡತೊಡಗಿದ್ದಳು. ಬಾಲ್ಯದಲ್ಲಿಯೇ ಅವುಗಳನ್ನೆಲ್ಲ ಓದಿ ತಿಳಿದಿದ್ದಳಾದರೂ ಈಗಿನ ಓದು ಅವಳಲ್ಲಿ ಹೊಸ ಅರ್ಥವನ್ನು ಮೂಡಿಸುತ್ತಿತ್ತು. ಚತುರ್ಭಾಷಾ ಪಂಡಿತಳಾಗಿದ್ದ ರಾಣಿ ಮಲ್ಲಮ್ಮ ಬಾಲ್ಯದಿಂದಲೂ ಕವಿತ್ವ ರಚನೆಯ ಪ್ರೌಢಿಮೆಯಲ್ಲಿ ಎಲ್ಲರ ಮನಸ್ಸು ಸೂರೆಗೊಂಡಿದ್ದವಳು.
ಈಗ ಅವಳಲ್ಲಿನ ಕವಿ ಮನಸು ಹೊಸ ರೂಪ ಪಡೆಯಲು ಕಾತರಿಸುತ್ತಿತ್ತು. ಅವಳಲ್ಲಿನ ಕವಿ ಮನಸ್ಸಿನ ಒತ್ತಡಕ್ಕೆ ಮಣಿದು ಲೇಖನಿ ಕೈಗೆತ್ತಿಕೊಂಡ ಮಲ್ಲಮ್ಮ ಗ್ರಂಥ ರಚನೆಗೆ ತೊಡಗಿದಳು. ವಿಜಯನಗರದ ಗಂಗಾದೇವಿ ಮಹಾರಾಣಿಯು ಮಧುರ ವಿಜಯವೆಂಬ ಸಂಸ್ಕೃತ ಕಾವ್ಯವನ್ನು ಬರೆದು ತನ್ನ ಪತಿಯ ಗುಣ ವರ್ಣನೆಗಳನ್ನು ರಚನೆ ಮಾಡಿದಂತೆ ರಾಣಿ ಮಲ್ಲಮ್ಮ ತನ್ನ ಪತಿಯ ವಂಶದ ಚರಿತ್ರೆಯನ್ನು “ರಟ್ಟಾನ್ವಯ ಚರಿತಾಮೃತ” ಎಂಬ ಹೆಸರಿಟ್ಟು ಸಂಸ್ಕೃತ ಭಾಷೆಯಲ್ಲಿ ಬರೆದಳು.
ಅದರಲ್ಲಿ ಸವದತ್ತಿಯ ರಟ್ಟರ ಉದಯವಾದದ್ದು, ಅದರದೇ ಶಾಖೆಯಾಗಿ ಬೆಳವಡಿಯ ಸಂಸ್ಥಾನ ಸ್ಥಾಪಿತವಾಗಿ ಮುಂದುವರಿದುಕೊಂಡು ಬಂದದ್ದು, ವಂಶದ ಹಿಂದಿನ ಸಾಹಸ ಪರಾಕ್ರಮಗಳನ್ನು ಶೌರ್ಯ ಸಾಹಸಗಳನ್ನು ಒಳಗೊಂಡ ಗ್ರಂಥ ರಚನೆಗೆ ತೊಡಗಿದಳು. ರಾಣಿಯ ಲೇಖನಿಗೆ ಹಿಂದಿನದೆಲ್ಲವನ್ನು ಪುನರ್ ಸೃಷ್ಟಿಸಬಲ್ಲ ಮಹಾನ್ ಶಕ್ತಿ ಇತ್ತು.
ಎಂತಹ ಜಟಿಲ ವಿಷಯವನ್ನಾದರೂ ನಿರರ್ಗಳವಾಗಿ ವಿವರಿಸಬಲ್ಲ ಜಾಣ್ಮೆ ಇತ್ತು. ಅವಳೇನು ಕಡಿಮೆ ವಾಗ್ಮಿಯಾಗಿರಲಿಲ್ಲವಾದ್ದರಿಂದ ಅವಳ ಲೇಖನಿ ಕೂಡ ಅದೇ ಓಘದಲ್ಲಿ ಪದಗಳ ಸಂಪತ್ತನ್ನು ಸೃಷ್ಟಿ ಮಾಡುತ್ತಿತ್ತು. ಸಂಸ್ಕೃತ ಭಾಷೆಯಲ್ಲಿ ರಚಿತವಾದ ರಟ್ಟಾನ್ವಯ ಚರಿತಾಮೃತ ಅವತ್ತಿನ ಸಾಹಿತ್ಯ ವಲಯದಲ್ಲಿ ಬಹು ದೊಡ್ಡ ಸಂಚಲನವನ್ನು ಉಂಟು ಮಾಡಿತು. ಪಂಡಿತ ಪಾಮರರಾಧಿಯಾಗಿ ಅದನ್ನು ಬಹುವಾಗಿ ಮೆಚ್ಚಿಕೊಂಡರು.
ಕನ್ನಡ ನಾಡಿನ ಹೆಮ್ಮೆಯ ಕೀರ್ತಿ ಕಳಶವಾಗಿದ್ದ ಬೆಳವಡಿಯ ರಾಣಿ ಮಲ್ಲಮ್ಮ ತನ್ನ 67ನೇ ವಯಸ್ಸಿನಲ್ಲಿ ದೇಹ ತ್ಯಾಗ ಮಾಡಿ ಅಮರಳಾದಳು. ಕನ್ನಡ ನಾಡಿನ ಪುಣ್ಯ ದೇವತೆ ಮರೆಯಾದಳು. ಬೆಳವಡಿಯ ಪುಣ್ಯಭೂಮಿಯು ರಾಣಿ ಮಲ್ಲಮ್ಮಳ ಅಗಾಧ ಸಾಹಸವನ್ನು ಪರಾಕ್ರಮವನ್ನು ತನ್ನ ಇತಿಹಾಸದ ಗರ್ಭದಲ್ಲಿ ಹುದುಗಿಸಿಕೊಂಡು ಇಂದಿಗೂ ಬೀಳದ ಬೆಳವಡಿಯಾಗಿ ವಿರಾಜಮಾನವಾಗಿ ಕನ್ನಡದ ಕಣ್ಮಣಿಯಾಗಿ ನಿಂತಿದೆ.
ಕನ್ನಡ ನಾಡು ಮತ್ತು ಇತಿಹಾಸಕಾರರು ರಾಣಿ ಮಲ್ಲಮ್ಮಳನ್ನು ಮರೆತಿರುವುದು ವಿಪರ್ಯಾಸವಷ್ಟೇ ಅಲ್ಲ ದುಃಖಕರ ಸಂಗತಿ. ಇನ್ನು ಮೇಲಾದರೂ ರಾಣಿ ಮಲ್ಲಮ್ಮ ಕನ್ನಡ ನಾಡಿನ ಮನೆ ಮನೆಗಳಲ್ಲಿ ಮನಸುಗಳಲ್ಲಿ ಕೆಚ್ಚೆದೆಯ ಹೃದಯಗಳಲ್ಲಿ ಅಜರಾಮರವಾಗಿ ರಾರಾಜಿಸಲಿ.
ರಾಮಣ್ಣ ತಟ್ಟಿ, ಸಾಹಿತಿಗಳು ಮೈಸೂರು
*ಮೊ- 9480982049*17ನೇ ಶತಮಾನದಲ್ಲಿ ವಿಶ್ವದಲ್ಲಿಯೇ ಪ್ರಪ್ರಥಮ 2000 ಮಹಿಳಾ ಸೈನ್ಯವನ್ನು ಸಂಘಟಿಸಿ ನಾಡಿಗಾಗಿ ಹೋರಾಡಿದ ವೀರರಾಣಿ ಬೆಳವಡಿ ಮಲ್ಲಮ್ಮಳ ಅಭಿವೃದ್ಧಿ ಪ್ರಾಧಿಕಾರ ಘೋಷಣೆಯನ್ನು ಸರ್ಕಾರ ಮಾಡಬೇಕು ರಾಷ್ಟ್ರೀಯ ಮಹಿಳಾ ಮೀಸಲುಪಡೆಗೆ ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರನ್ನು ಇಡಬೇಕು ಬೆಳಗಾವಿಯ ಸುವರ್ಣಸೌಧದ ಮುಂದೆ ಅಶ್ವರೂಢ ಮೂರ್ತಿಯನ್ನು ಸ್ಥಾಪಿಸಬೇಕು ಬೆಳಗಾವಿಯ ಬಸ್ ನಿಲ್ದಾಣಕ್ಕೆ ವೀರರಾಣಿ ಬೆಳವಡಿ ಮಲ್ಲಮ್ಮನ ಹೆಸರನ್ನು ಇಡಬೇಕೆಂದು ಗ್ರಾಮಸ್ಥರ ಪರವಾಗಿ ಸರ್ಕಾರಕ್ಕೆ ಮನವಿ ಮಾಡುತ್ತೇವೆ.
ಸಮಾಜ ಸೇವಕ ಪ್ರಕಾಶ್ ಅಪ್ಪಣ್ಣ ಹುಂಬಿ




