Ad imageAd image

ಶಿಸ್ತುಬದ್ಧ ಜೀವನ ಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು : ಡಾ.ಆಶಾಚೌದ್ರಿ

Bharath Vaibhav
ಶಿಸ್ತುಬದ್ಧ ಜೀವನ ಶೈಲಿಯಿಂದ ಕ್ಯಾನ್ಸರ್ ತಡೆಗಟ್ಟಬಹುದು : ಡಾ.ಆಶಾಚೌದ್ರಿ
WhatsApp Group Join Now
Telegram Group Join Now

ತುರುವೇಕೆರೆ : ಆರೋಗ್ಯಕರ, ಶಿಸ್ತುಬದ್ಧ ಜೀವನ ಶೈಲಿಯಿಂದ ಕ್ಯಾನ್ಸರ್ ರೋಗ ಹರಡುವುದನ್ನು ತಡೆಗಟ್ಟಬಹುದಾಗಿದೆ ಎಂದು ವೈದ್ಯೆ ಡಾ.ಆಶಾ ಚೌದ್ರಿ ತಿಳಿಸಿದರು.

ಪಟ್ಟಣದ ಲಯನ್ಸ್ ಕ್ಲಬ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್, ಬೆಂಗಳೂರಿನ ಲಯನ್ಸ್ ಕ್ಲಬ್ ಆಫ್ ಸಂಕಲ್ಪ, ಕರ್ನಾಟಕ ಕ್ಯಾನ್ಸರ್ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಮಹಿಳೆಯರಿಗಾಗಿ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರು ಕೌಟುಂಬಿಕ ಕೆಲಸ ಕಾರ್ಯಗಳ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹಾಗೂ ಗರ್ಭಕಂಠದ ಕ್ಯಾನ್ಸರ್ ಹೆಚ್ಚು ಕಂಡುಬರುತ್ತದೆ.

ಈ ಕ್ಯಾನ್ಸರ್ ರೋಗ ಉಂಟಾಗಲು ಶಿಸ್ತಿಲ್ಲದ ಜೀವನಶೈಲಿ, ಅಪೌಷ್ಟಿಕ ಆಹಾರ ಸೇವನೆ, ಧೂಮಪಾನ ಸೇರಿದಂತೆ ದುಶ್ಚಟಗಳು ಕಾರಣವಾಗಿದೆ. ಮಗುವಿಗೆ ಸ್ತನ್ಯಪಾನ ಮಾಡಿಸುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಸ್ತನಕ್ಯಾನ್ಸರ್ ಬರದಂತೆ ತಮ್ಮನ್ನು ತಾವು ಕಾಪಾಡಿಕೊಳ್ಳಬಹುದಾಗಿದೆ. ಮಹಿಳೆಯರು ಸ್ವತಃ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳಬಹುದಾಗಿದೆ. ಅಲ್ಲದೆ ಈ ರೀತಿಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಪರೀಕ್ಷೆಗೆ ಒಳಪಟ್ಟಲ್ಲಿ ಕ್ಯಾನ್ಸರ್ ರೋಗ ತಡೆಗಟ್ಟಬಹುದಾಗಿದೆ ಎಂದರು.

ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ವೈದ್ಯೆ ಡಾ.ದೀಪಶ್ರೀ ಮಾತನಾಡಿ, ಕ್ಯಾನ್ಸರ್ ಈಗ ಮಾರಣಾಂತಿಕ ಕಾಯಿಲೆಯಾಗಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಚಿಕಿತ್ಸೆಗಳಿವೆ. ಆದರೆ ರೋಗ ಬರುವುದಕ್ಕಿಂತ ಮೊದಲು ರೋಗ ಹರಡದಂತೆ ತಡೆಗಟ್ಟುವುದು ನಮ್ಮ ಆದ್ಯತೆಯಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ದುಶ್ಚಟಗಳಿಂದ ದೂರವಿದ್ದು, ಉತ್ತಮ ಜೀವನಶೈಲಿಯನ್ನು ಅಳವಡಿಸಿಕೊಂಡು ರೋಗ ಬರದಂತೆ ಎಚ್ಚರವಹಿಸಬೇಕಿದೆ ಎಂದರು.

ಭಾರತ ದೇಶದಲ್ಲಿ ಕ್ಯಾನ್ಸರ್ ಬಗ್ಗೆ ಅರಿವು ಕಡಿಮೆ ಇದೆ. ಆದರೆ ಮುಂದುವರೆದ ರಾಷ್ಟ್ರಗಳಲ್ಲಿ ಹೆಣ್ಣು ಮಕ್ಕಳಿಗೆ 9 ರಿಂದ 15 ವರ್ಷವಿದ್ದಾಗಲೇ ಕ್ಯಾನ್ಸರ್ ತಪಾಸಣೆಗೆ ಒಳಪಡಿಸುವುದು, ಕ್ಯಾನ್ಸರ್ ಬರದಂತೆ ಲಸಿಕೆ ನೀಡುವುದು ಜಾರಿಯಲ್ಲಿದೆ. ಪ್ರಸ್ತುತ ಭಾರತದಲ್ಲೂ ಲಸಿಕೆ ಲಭ್ಯವಿದ್ದು, ಕ್ಯಾನ್ಸರ್ ತಡೆಗಟ್ಟಲು ಲಸಿಕೆ ಪಡೆಯುವುದು ಬಹಳ ಒಳ್ಳೆಯದು. ಕ್ಯಾನ್ಸರ್ ರೋಗ ಜ್ವರ, ಕೆಮ್ಮಿನ ರೀತಿ ಬಂದ ತಕ್ಷಣ ಗೋಚರವಾಗುವುದಿಲ್ಲ. ಅದು ಬಂದ 10 ವರ್ಷದ ನಂತರ ನಿಮಗೆ ದೇಹದಲ್ಲಿ ಸಮಸ್ಯೆಯಿರುವುದು ಅರಿವಾಗುತ್ತದೆ. ಆದ್ದರಿಂದ ಕ್ಯಾನ್ಸರ್ ಶಿಬಿರದಲ್ಲಿ ಪಾಲ್ಗೊಂಡು ತಪಾಸಣೆಗೆ ಒಳಪಡುವುದರಿಂದ ಪ್ರಾರಂಭಿಕ ಹಂತದಲ್ಲೇ ರೋಗ ಇದೆಯೇ? ಇಲ್ಲವೇ ಪತ್ತೆ ಮಾಡಲು, ಇದ್ದರೆ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ ಎಂದರು.

ಕರ್ನಾಟಕ ಕ್ಯಾನ್ಸರ್ ಸೊಸೈಟಿಯ ವೆಂಕಟೇಶ್ ಮಾತನಾಡಿ, ಶೀಘ್ರ ಪತ್ತೆ, ಕ್ಯಾನ್ಸರ್ ನಾಪತ್ತೆ ಎಂಬ ಮಾತಿನಂತೆ ಕಳೆದ 57 ವರ್ಷದಿಂದ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಉಂಟು ಮಾಡುವ ಕೆಲಸವನ್ನು ಕ್ಯಾನ್ಸರ್ ಸೊಸೈಟಿ ಮಾಡುತ್ತಿದೆ. ಇದಲ್ಲದೆ ಪ್ರತಿ ತಿಂಗಳ ಎರಡನೇ ಶನಿವಾರ ಬೆಂಗಳೂರಿನ ವೈಯಾಲಿಕಾವಲ್ ಅಲ್ಲಿರುವ ಕಛೇರಿಯಲ್ಲಿ ಉಚಿತವಾಗಿ ಕ್ಯಾನ್ಸರ್ ಗೆ ಸಂಬಂಧಿಸಿದ ಸ್ತನ ಪರೀಕ್ಷೆ, ಗರ್ಭಕಂಠ ಪರೀಕ್ಷೆ ನಡೆಸಲಾಗುತ್ತಿದೆ. ಈ ಅವಕಾಶವನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕೆಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಹೆಚ್.ಎನ್. ಪರಮೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಸ್ಥಾಪಕ ಮೆಲ್ವಿನ್ ಜೋನ್ಸ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು. ಸುಮಾರು ೫೦ಕ್ಕೂ ಅಧಿಕ ಮಹಿಳೆಯರು ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡರು. ಲಯನ್ಸ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷ ಎನ್.ಎಸ್.ಸತೀಶ್, ಕಾರ್ಯದರ್ಶಿ ಸಂತೋಷ್, ವಲಯಾಧ್ಯಕ್ಷರಾದ ರಂಗನಾಥ್, ರಾಜೇಶ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್, ಕಲ್ಪತರು ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ಲಯನ್ಸ್ ಕಾರ್ಯದರ್ಶಿ ಡಾ.ಎ.ನಾಗರಾಜ್, ಖಜಾಂಚಿ ಸುನಿಲ್ ಕುಮಾರ್,. ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆಯ ಡಾ.ರಿಶಿತ, ಕ್ಯಾನ್ಸರ್ ಸೊಸೈಟಿಯ ಹೆಚ್.ಆರ್.ರಾಮಪ್ರಸಾದ್, ಪಲ್ಲವಿ, ಲಕ್ಷ್ಮೀ ಸೇರಿದಂತೆ ಲಯನ್ಸ್ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!