ಅಥಣಿ: ಮಾಜಿ ಮುಖ್ಯಮಂತ್ರಿ, ನಾಡು ಕಂಡ ಧೀಮಂತ ನಾಯಕ, ಹಿಂದುಳಿದ ವರ್ಗಗಳ ಅಭಿವೃದ್ಧಿ ಹರಿಕಾರರಾದ ಡಿ. ದೇವರಾಜು ಅರಸು ಅವರು ಶೋಷಿತ ವರ್ಗಗಳಿಗೆ ಧ್ವನಿ ನೀಡಿದ, ಭೂಮಿಯ ಹಕ್ಕು ಕೊಟ್ಟ, ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ನಾಯಕರಾಗಿದ್ದಾರೆ. ಅವರ ವಿಚಾರಧಾರೆಗಳನ್ನು ಯುವಪೀಳಿಗೆ ಅಳವಡಿಸಿಕೊಳ್ಳಬೇಕು ಎಂದು ಅಥಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಥಣಿ ತಾಲೂಕಾಧ್ಯಕ್ಷರಾದ ಸಿದ್ಧಾರ್ಥ ಸಿಂಗೆ ಹೇಳಿದರು.

ಅವರು ಬುಧವಾರ ತಾಲೂಕು ಪಂಚಾಯತ ಸಭಾಭವನದಲ್ಲಿ ತಾಲೂಕು ಆಡಳಿತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ನಡೆದ ಮಾಜಿ ಮುಖ್ಯಮಂತ್ರಿ, ಸಾಮಾಜಿಕ ಕ್ರಾಂತಿಯ ಹರಿಕಾರ ಡಿ. ದೇವರಾಜ ಅರಸು ಅವರ 110ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇವರಾಜ ಅರಸು ಅವರು ಸಿಎಂ ಆಗಿದ್ದಾಗ ಹಾವನೂರು ಆಯೋಗ ರಚನೆ ಮಾಡಿದರು. ಉಳುವವನೇ ಭೂ ಒಡೆಯ ಎಂಬ ಯೋಜನೆ ತಂದರು. ಅರಸು ಬರುವವರೆಗೆ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹಾವನೂರು ಆಯೋಗ ಮಾಡಿ, ವರದಿ ತರಿಸಿ ಮೀಸಲಾತಿ ಜಾರಿ ಮಾಡಿದರು. ಕೇಂದ್ರದಲ್ಲಿ ಒಬಿಸಿಗೆ ಮೀಸಲಾತಿ ಇರಲಿಲ್ಲ. ಕರ್ನಾಟಕದಲ್ಲಿ ಕೊಟ್ಟ ಮೇಲೆ ಮಂಡಲ್ ಕಮಿಷನ್ ಜಾರಿ ಮಾಡಲು ಅನುಕೂಲ ಆಯಿತು. 1972ರಲ್ಲಿ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು. ಖಾಯಂ ಹಿಂದುಳಿದ ವರ್ಗಗಳ ಆಯೋಗ ರಚನೆ ಆಯಿತು. ಇದಕ್ಕೆ ದೇವರಾಜ್ ಅರಸು ಪ್ರಾಮಾಣಿಕ ಪ್ರಯತ್ನ ಮಾಡಿದರು ಎಂದರು.

ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ. ಪ್ರಿಯಂವದಾ ಹುಲಗಬಾಳಿ ಉಪನ್ಯಾಸಕರಾಗಿ ಮಾತನಾಡಿದರು ಬಡವರು, ಶೋಷಿತರ, ಅಲೆಮಾರಿ ಜನಾಂಗದ ಕಲ್ಯಾಣಕ್ಕಾಗಿ ಶ್ರಮಿಸಿದವರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಸುಧಾರಣೆಗಳನ್ನು ಮಾಡಿದ ರಾಜ್ಯ ಕಂಡ ಹೆಮ್ಮಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅವರು ಮಾಡಿದ ಶೈಕ್ಷಣಿಕ ಸುಧಾರಣೆಗಳು ಇಂದಿಗೂ ಸ್ಮರಿಸುವಂತಿವೆ. ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಅಗಮಿಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಮೂಲಭೂತ ಸೌಕರ್ಯ ಸೇರಿದಂತೆ ಹಾಸ್ಟೆಲ್‌ಗಳ ನಿರ್ಮಾಣ, ಮೀಸಲಾತಿ ನಿಯಮಗಳ ಮೂಲಕ ಹಿಂದುಳಿದ ವರ್ಗಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ.
ಕನ್ನಡ ನಾಡಿಗೆ ಮತ್ತೊಂದು ಮುಖ್ಯ ಕೊಡುಗೆ ಎಂದರೆ, ಮೈಸೂರು ರಾಜ್ಯವೆಂಬ ಹೆಸರನ್ನು 1973ನೇ ನವೆಂಬರ್ 1ರಂದು ಕರ್ನಾಟಕ ಎಂದು ನಾಮಕರಣ ಮಾಡಿದರು. ಬಡವರಿಗೆ ನ್ಯಾಯ ಬೆಲೆ ಅಂಗಡಿಗಳ ಮೂಲಕ ದವಸ ಧಾನ್ಯಗಳನ್ನು ಮತ್ತು ಕಡಿಮೆ ದರದಲ್ಲಿ ಬಟ್ಟೆಗಳನ್ನು ಒದಗಿಸಿದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿ ಶಿಕ್ಷಣ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ ವೆಂಕಟೇಶ ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವರದಿ: ರಾಜು ವಾಘಮಾರೆ




