———————————————-ಮೂರು ದಶಕಗಳ ಸತತ ಹೋರಾಟಕ್ಕೆ ಸಂದ ಸಮಾನತೆಯ ನಿರ್ಣಯ
ಮೈಸೂರು: ಪರಿಶಿಷ್ಟ ಜಾತಿ ಒಳಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಆಯೋಗವು ನೀಡಿದ್ದ ಆನ್ಲೈನ್ ವಿಧಾನದ ಸಮೀಕ್ಷೆಯ ವರದಿಯಲ್ಲಿ ಬಲಗೈ ಮತ್ತು ಎಡಗೈ ಸಮುದಾಯಗಳಿಗೆ ಸೇರಿದ ಉಪಜಾತಿಗಳ ಅವೈಜ್ಞಾನಿಕ ವರ್ಗೀಕರಣ ಮತ್ತು ಅವುಗಳ ಜನಸಂಖ್ಯೆ ಅಂಕಿ ಅಂಶಗಳಲ್ಲಿ ಬಹಳಷ್ಟು ವ್ಯತ್ಯಯಗಳಿದ್ದ ಕಾರಣ ಮೀಸಲಾತಿ ಹಂಚಿಕೆಯಲ್ಲಿ ಅನ್ಯಾಯವಾಗುತ್ತದೆಂಬ ಉದ್ದೇಶದಿಂದ ರಾಜ್ಯದಲ್ಲಿ ಬಲಗೈ ಸಮುದಾಯದಿಂದ ಬಹಳಷ್ಟು ಆಕ್ರೋಶ ವ್ಯಕ್ತವಾಗಿತ್ತು ಈ ಹಿನ್ನಲೆಯಲ್ಲಿ ಉರಿಲಿಂಗಪೆದ್ದಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆಯನ್ನು ನಡೆಸಿ ಅವೈಜ್ಞಾನಿಕ ಮತ್ತು ಅಸ್ಪಷ್ಟತೆಯಿಂದ ಕೂಡಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳ ಮೀಸಲಾತಿ ಏಕ ಸದಸ್ಯ ಆಯೋಗದ ವರದಿ ತಿರಸ್ಕಾರಕ್ಕೆ ಮತ್ತು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು.
ಇದನ್ನು ಮನಗಂಡ ರಾಜ್ಯ ಸರ್ಕಾರ ವಿಶೇಷ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಿ ರಾಜ್ಯ ಸರ್ಕಾರಕ್ಕೆ ಬಹುದೊಡ್ಡ ವಿಪತ್ತಾಗಿದ್ದ ಒಳ ಮೀಸಲಾತಿಯ ವಿಚಾರದಲ್ಲಿ ಸಮಾನತೆಯ ಸೂತ್ರವನ್ನು ಬಳಸುವ ಮೂಲಕ ಪರಿಶಿಷ್ಟ ಜಾತಿಯ ಬಲಗೈ ಮತ್ತು ಎಡಗೈ ಎರಡೂ ಸಮುದಾಯಕ್ಕೂ ತಲಾ ಶೇ.6ರಷ್ಟು ಸಮಾನ ಮೀಸಲಾತಿಯನ್ನು ನೀಡಿ ಇನ್ನುಳಿದ ಸ್ಪೃಷ್ಯ ಸಮುದಾಯಗಳಿಗೆ ಶೇ.5ರಷ್ಟು ಮೀಸಲಾತಿಯನ್ನು ಘೋಷಿಸಿದೆ.
ನ್ಯಾಯಮೂರ್ತಿ ನಾಗಮೋಹನ್ ದಾಸ್ ಒಳ ಮೀಸಲಾತಿ ಏಕ ಸದಸ್ಯ ಆಯೋಗ ನೀಡಿದ್ದ ವರದಿಯಲ್ಲಿದ್ದ 5 ವಿಂಗಡಣೆಗಳನ್ನು ರಾಜ್ಯ ಸರ್ಕಾರವು ಪರಿಷ್ಕರಿಸಿದ ನಂತರ ಮೂರು ಗುಂಪುಗಳಾಗಿ ವಿಂಗಡಿಸಿ ಮೀಸಲಾತಿ ನೀಡಿರುವುದು ಬಲಗೈ ಸಮುದಾಯದ ತೀವ್ರ ಹೋರಾಟಕ್ಕೆ ನ್ಯಾಯ ದೊರೆತಂತಾಗಿದೆ ಆದರೆ ದೊರೆತ ನ್ಯಾಯ ಮೇಲ್ನೋಟಕ್ಕೆ ಸಮಾಧಾನ ಪಡಿಸುವಂತಿದೆ. ಕುಲಶಾಸ್ತ್ರೀಯ ಅಧ್ಯಯನವಿಲ್ಲದೆ ಅವೈಜ್ಞಾನಿಕತೆಯಿಂದ ಕೂಡಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಐತಿಹಾಸಿಕ ಅನ್ಯಾಯವನ್ನುಂಟು ಮಾಡುವ ಆಯೋಗದ ವರದಿಯನ್ನು ರಾಜ್ಯ ಸರ್ಕಾರವು ಪರಿಷ್ಕರಿಸಿ ಮೂರು ಗುಂಪುಗಳಾಗಿಸಿ ಬಿಕ್ಕಟ್ಟು ಸೃಷ್ಟಿಯಾಗದಂತೆ ಬುದ್ಧಿವಂತಿಕೆಯಿಂದ ಸಮಾನವಾಗಿ ಒಳಮೀಸಲಾತಿಯನ್ನು ನೀಡಿದೆ ಆದರೆ ಸಮೀಕ್ಷೆಯು ನಡೆದಿರುವ ರೀತಿಯಲ್ಲಿಯೇ ದೋಷವಿರುವುದರಿಂದ ಉಂಟಾಗಿರುವ ಅಜಗಜಾಂತರ ಜನಸಂಖ್ಯಾ ವ್ಯತ್ಯಯಗಳನ್ನು ಸೂಕ್ತ ಸಮೀಕ್ಷೆಯ ಮೂಲಕ ಸರಿಪಡಿಸಬೇಕು, ಸಮೀಕ್ಷೆಯೇ ಸರಿಯಿಲ್ಲದ ಮೇಲೆ ವರದಿ ಸರಿಯಿರಲು ಸಾಧ್ಯವಿಲ್ಲ ವರದಿಯೇ ಸರಿಯಿಲ್ಲದ ಮೇಲೆ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯವೇ ಇಲ್ಲ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕ್ರಮ ವಹಿಸಬೇಕು ಇಲ್ಲವಾದಲ್ಲಿ ಇದು ಮುಂದಿನ ದಿನಗಳಲ್ಲಿ ಮತ್ತಷ್ಟು ಒಡಕುಗಳಿಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರ ಮತಕ್ಕಾಗಿ ಮಣಿಯುವ ಬದಲು ಸಾಮಾಜಿಕ ನ್ಯಾಯಕ್ಕಾಗಿ ಮಣಿಯಬೇಕು.
ಬಲಗೈ ಮತ್ತು ಎಡಗೈ ಸಮುದಾಯಗಳು ಸಮೀಕ್ಷೆಯ ವರದಿಯಲ್ಲಿ ಎರಡೂ ಸಮುದಾಯದ ಜನಸಂಖ್ಯಾ ಅಂಕಿ ಅಂಶಗಳಲ್ಲಿ ಸ್ಪಷ್ಟತೆ ಇಲ್ಲ ತಪ್ಪಾಗಿದೆ ಎಂಬ ವಾಸ್ತವ ಸತ್ಯವನ್ನು ಅರಿಯಬೇಕು ಇಲ್ಲಿ ವಿರೋಧವೊಡ್ಡುವ, ದ್ವೇಷಿಸುವ ವಿಚಾರವೇ ಇಲ್ಲ ಸಾಮಾಜಿಕ ನ್ಯಾಯವಷ್ಟೇ ಮುಖ್ಯ ಬಲಗೈ ಎಡಗೈ ಎಂಬುದಲ್ಲ, ಸಂಘರ್ಷಕ್ಕಿಂತ ಸಾಮರಸ್ಯ ಮುಖ್ಯ. ಒಳಮೀಸಲಾತಿಯ ಕುರಿತು ಸಮಾನ ಹಂಚಿಕೆ ಸಮ್ಮತವಿದೆ ಆದರೆ ಅದು ಸ್ಪಷ್ಟ ಸಮೀಕ್ಷೆಯ ಆಧಾರದ ಮೇಲೆ ಏರ್ಪಟ್ಟಿಲ್ಲ ಅಸ್ಪಷ್ಟ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಆಯೋಗದ ಅಸ್ಪಷ್ಟ ಸಮೀಕ್ಷೆಯನ್ನು ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನಿಖರವಾದ ಅಂಕಿ ಅಂಶಗಳ ಆಧಾರದ ಮೇಲೆ ಬಲಗೈ ಸಮುದಾಯದ ಜನಸಂಖ್ಯೆ ಹೆಚ್ಚಾದಲ್ಲಿ ಮೀಸಲಾತಿಯನ್ನು ಸಹ ಹೆಚ್ಚಿಸಬೇಕು ಈ ಮೂಲಕ ಸಮರ್ಪಕ ಸಾಮಾಜಿಕ ನ್ಯಾಯ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅನುಷ. ಕೆ. ಎನ್ ವಕೀಲರು ಮತ್ತು ಯುವ ಬರಹಗಾರರು, ಮೈಸೂರು ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




