ಗೋಕಾಕ: ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಶಿಂಧಿಕುರಬೇಟ ಗ್ರಾಮದಲ್ಲಿ ತೊಟ್ಟಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಆಸ್ತಿ ವರ್ಗಾವಣೆ ಮಾಡಿರುವ ಆರೋಪದ ಮೇಲೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಸೇರಿ 26 ಸದಸ್ಯರ ಸದಸ್ಯತ್ವ ರದ್ದುಗೊಳಿಸಿ, ಮುಂದಿನ 6 ವರ್ಷ ಚುನಾವಣೆಗೆ ಅನರ್ಹಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಆದೇಶ ಹೊರಡಿಸಿದ್ದಾರೆ.
2022 ಫೆಬ್ರವರಿ 25 ಮತ್ತು ಮಾರ್ಚ್ 25ರಂದು ಜರುಗಿದ್ದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗ್ರಾಮದ ಸರ್ವೇ ನಂ.661ರಕ್ಕೆ ಸಂಬಂಧಿಸಿ ಬೊಟ್ಟಿ ಹೆಸರಿನಲ್ಲಿರುವ ಆಸ್ತಿಯನ್ನು ರಾಮಚಂದ್ರ ದಾನಪ್ಪ ಪೋತದಾರ ಹೆಸರಿಗೆ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಿರುವುದು ಸಾಬೀತಾದ ಹಿನ್ನೆಲೆ ಗ್ರಾಪಂನ ಎಲ್ಲ ಸದಸ್ಯರ ಸದಸ್ಯತ್ವ ರದ್ದುಗೊಂಡಿದೆ.
ಕರ್ನಾಟಕ ರಾಜ್ಯ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 48 (4) ಮತ್ತು 48 (5) ಅಡಿಯಲ್ಲಿ ಗ್ರಾಪಂ ಅಧ್ಯಕ್ಷೆ ರೇಣುಕಾ ಪಾಟೀಲ, ಉಪಾಧ್ಯಕ್ಷ ಭೀಮಪ್ಪ ಬರನಾಳಿ, ಸದಸ್ಯರಾದ ಫಕೀರಪ್ಪ ಭೋವಿ, ಗಜಾನನ ಪಾಟೀಲ, ಶಾಂತವ್ವ ಕೌಜಲಗಿ, ಮಾರುತಿ ಜಾಧವ, ಅಮೃತ ಕಳ್ಯಾಗೋಳ, ರುಕ್ಸಾರ್ ಜಮಾದಾರ್, ರೂಪಾ ಕಂಬಾರ, ಶಾಂತವ್ವ ಬೋವಿ, ಸುರೇಖಾ ಪತ್ತಾರ, ಇಬ್ರಾಹೀಂ ಮುಲ್ಲಾ, ಚಾಂದವಿ ಸೌದಾಗರ, ರಾಮಪ್ಪ ಬೆಳಗಲಿ, ಶಮಶಾದ ಸೌದಾಗರ, ಮಂಜುಳಾ ಕರೋಶಿ, ಮಂಜುನಾಥ ಗುಡಕ್ಷೇತ್ರ, ರಾಮಕೃಷ್ಣ ಗಾಡಿವಡ್ಡರ, ಸುಮಿತ್ರಾ ಮಾಯಣ್ಣಿ, ಪಾರ್ವತಿ ಜೋತೆನ್ನವರ, ಅಡಿವೆಪ್ಪ ಬೆಕ್ಕಿನವರ, ಸಿದ್ದಪ್ಪ ಕಟ್ಟಿಕಾರ, ಬಸಲಿಂಗವ್ವ ಭಜಂತ್ರಿ, ಲಕ್ಷ್ಮೀಬಾಯಿ ಸೂರ್ಯವಂಶಿ, ನಿಸ್ಸಾರಹ್ಮದ್ ಜಕಾತಿ, ಅಶೋಕ ಮೇತ್ರಿ, ಸುರೇಖಾ ಗಾಡಿವಡ್ಡರ, ಶ್ರೀಕಾಂತ ಕಳ್ಯಾಗೋಳ ಅವರ ಸದಸ್ಯತ್ವ ಅನರ್ಹಗೊಳಿಸಲಾಗಿದೆ.




