ಚಿಟಗುಪ್ಪ: ಬೀದರ ಜಿಲ್ಲೆಯ ಚಿಟಗುಪ್ಪ ತಾಲ್ಲೂಕಿನ ತಾಳಮಡಗಿ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಗಾಂಧಿನಗರ ಗ್ರಾಮದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ನಿತ್ಯ ನೂರು ವಿದ್ಯಾರ್ಥಿಗಳು ಹಾಗೂ ಸಾವಿರಾರು ರೈತರು ಈ ರಸ್ತೆ ಮೂಲಕ ಶಾಲೆಗೆ ಹಾಗೂ ಹೊಲಗಳಿಗೆ ಹೋಗುವ ಮುಖ್ಯ ರಸ್ತೆ ಇದಾಗಿದೆ. ಸತತವಾಗಿ ಎರಡು ದಿನಗಳಿಂದ ಸುರಿದ ಮಳೆಯಿಂದ ರಸ್ತೆ ಕೆಸರು ಗದ್ದೆಯಂತಾಗಿದ್ದು,ಸಂಚಾರಕ್ಕೆ ಅಡಚಣೆ ಆಗಿದೆ.

ರಸ್ತೆಯು ಸಂಪೂರ್ಣ ಹಾಳಾಗಿದ್ದು,ದ್ವಿಚಕ್ರ ವಾಹನಗಳ ಸಂಚಾರ ಪ್ರಯಾಸವಾಗಿದೆ. ನಿಯಂತ್ರಣ ಕಳೆದುಕೊಂಡು ಸವಾರರು ಕೆಳಗೆ ಬಿದ್ದಿರುವ ಉದಾಹರಣೆಯೂ ಬಹಳಷ್ಟಿವೆ. ಪ್ರತಿ ವರ್ಷ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಹರಸಾಹಸ ಪಡಬೇಕು.ಕಾಲುಗಳಿಗೆ ಕೆಸರು ಮೆತ್ತಿಕೊಂಡು, ಸಾಕಷ್ಟು ತೊಂದರೆ ಆಗಲಿದೆ.
ಶಾಲಾ ಮಕ್ಕಳು ಶಾಲೆಗೆ,ರೈತರು ತಮ್ಮ ಹೊಲಗಳಿಗೆ ಹೋಗಲು ಇದೊಂದೇ ರಸ್ತೆ ಇದೆ. ಹಾಗಾಗಿ ಅನಿವಾರ್ಯವಾಗಿ ಈ ರಸ್ತೆಯಲ್ಲಿ ಸಂಚರಿಸಬೇಕಿದೆ. ಈ ಭಾಗದ ಶಾಸಕರಿಗೆ ಹಾಗೂ ಗ್ರಾಮ ಪಂಚಾಯತ ಪಡಿಒ ಅವರ ಗಮನಕ್ಕೆ ಈ ಹಿಂದೆ ತರಲಾಗಿತ್ತು.ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಜಾರು ವ್ಯಕ್ತಪಡಿಸಿದ್ದಾರೆ.
ಈಗಲಾದರೂ ಪಂಚಾಯತಿ ಆಡಳಿತ,ಶಾಸಕರು ಹಾಗೂ ಸಂಬಂಧ ಪಟ್ಟ ಇಲಾಖೆಯವರು ಗಮನ ಹರಿಸಬೇಕು ಎಂದು ಗೋರಕ್ ಜೋಶಿ ಹಾಗೂ ಸುಧಾಕರ ಗಡ್ಡದೋರ ಶುಕ್ರವಾರ ಮಾಧ್ಯಮ ಮೂಲಕ ಆಗ್ರಹಿಸಿದ್ದಾರೆ.
ವರದಿ :ಸಜೀಶ ಲಂಬುನೋರ




