ತುರುವೇಕೆರೆ : ಪಟ್ಟಣದ ವಿಶ್ವವಿಜಯ ವಿದ್ಯಾಶಾಲೆಯಲ್ಲಿ ಅದ್ದೂರಿಯಾಗಿ ಗಣಪತಿ ವಿಸರ್ಜನಾ ಮಹೋತ್ಸವವನ್ನು ನಡೆಸಲಾಯಿತು. ಭಾದ್ರಪದ ಶುಕ್ಲ ಚತುರ್ಥಿಯಂದು ಶಾಲೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಭಕ್ತಿ ಶ್ರದ್ಧೆಯಿಂದ ಸಾಂಪ್ರದಾಯಿಕವಾಗಿ ಪೂಜಾ ಕೈಂಕರ್ಯಗಳನ್ನು ನಡೆಸಲಾಗಿತ್ತು. ಮೂರು ದಿನದ ನಂತರ ಇಂದು ಗಣಪತಿಗೆ ವಿಶೇಷ ಪೂಜೆ ಮಂಗಳಾರತಿ ನೆರವೇರಿಸಿ ಶಾಲೆಯ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಪ್ರಸಾದ ವಿತರಿಸಲಾಯಿತು. ನಂತರ ಗಣಪತಿಯನ್ನು ಅಲಂಕರಿಸಿದ ಟ್ರಾಕ್ಟರ್ ನಲ್ಲಿ ಕೂರಿಸಿ ಮೆರವಣಿಗೆ ಮೂಲಕ ಕರೆದೊಯ್ದು ಅರೆಮಲ್ಲೇನಹಳ್ಳಿ ರಸ್ತೆಯಲ್ಲಿರುವ ಕೃಷಿಹೊಂಡದಲ್ಲಿ ವಿಸರ್ಜಿಸಲಾಯಿತು.

ಗಣಪತಿಯನ್ನು ವಾಹನಕ್ಕೆ ಕರೆತರುವ ಹಾಗೂ ಮೆರವಣಿಗೆ ವೇಳೆ ಶಾಲೆಯ ಮಕ್ಕಳು ನೃತ್ಯ ಮಾಡಿ ಕುಣಿದು ಕುಪ್ಪಳಿಸಿದರು. ಗಣಪತಿಗೆ ಜೈ, ವಿಘ್ನವಿನಾಯಕನಿಗೆ ಜೈ, ಲಂಬೋದರನಿಗೆ ಜೈ, ವಿದ್ಯಾಗಣಪತಿಗೆ ಜೈ ಎಂದು ಕೂಗುತ್ತಾ ಸಂಭ್ರಮಿಸಿದರು. ಮಕ್ಕಳೊಂದಿಗೆ ಕೆಲವು ಪೋಷಕರು, ಶಿಕ್ಷಕರು ಸಹ ಕುಣಿದು ಕುಪ್ಪಳಿಸಿ ಮಕ್ಕಳಲ್ಲಿನ ಸಂತೋಷವನ್ನು ಇಮ್ಮಡಿಗೊಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಶಾಲೆಯ ಕಾರ್ಯದರ್ಶಿ ಮತ್ತು ಪ್ರಾಂಶುಪಾಲೆ ವಿಜಯಲಕ್ಷ್ಮೀ ವಿಶ್ವೇಶ್ವರಯ್ಯ, ಪ್ರತಿವರ್ಷದಂತೆ ಈ ವರ್ಷವೂ ಶಾಲೆಯಲ್ಲಿ ಗಣಪತಿಯನ್ನು ಕೂರಿಸಿ ಪೂಜಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ವಿಘ್ನ ನಿವಾರಕ ಹಾಗೂ ಮಕ್ಕಳಲ್ಲಿ ಸಂಸ್ಕಾರ, ವಿದ್ಯೆ, ಸನ್ನಡತೆಗೆ ಪ್ರಥಮ ಪೂಜಿತನಾದ ಗಣಪತಿಯ ಆರ್ಶೀವಾದ ಬಹಳ ಮುಖ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ವಿದ್ಯೆ, ಬುದ್ದಿ, ಜ್ಞಾನ ಹೆಚ್ಚಿಸಲು ಹಾಗೂ ನಮ್ಮ ಸಂಸ್ಕೃತಿ ಸಂಪ್ರದಾಯದ ಅರಿವನ್ನು ಮಕ್ಕಳಲ್ಲಿ ಮೂಡಿಸುವ ಸಲುವಾಗಿ ಗಣಪತಿಯನ್ನು ಅಲಂಕರಿಸುವ, ಪೂಜಿಸುವ ಕೆಲಸವನ್ನು ಮಕ್ಕಳಿಗೆ ಬಿಡಲಾಗುತ್ತದೆ. ಮಕ್ಕಳು ಸಂಭ್ರಮದಿಂದ ಗಣಪತಿಯನ್ನು ವಿಶೇಷವಾದ ಮಂಟಪದಲ್ಲಿ ಕೂರಿಸಿ, ಅಲಂಕರಿಸಿ ಭಕ್ತಿ, ಶ್ರದ್ಧೆ ಹಾಗೂ ಸಂತೋಷದಿಂದ ಗಣಪತಿ ಹಬ್ಬವನ್ನು ಆಚರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷ ಪ್ರವೀಣ್ ಗೌಡ, ಆಡಳಿತಾಧಿಕಾರಿ ಪ್ರಶಾಂತ್, ನಿರ್ದೇಶಕಿ ಶೋಭಾಸುಬ್ರಮಣ್ಯ, ಶಾಲೆಯ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




