ಕಾರವಾರ : ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಆರ್.ವಿ. ದೇಶಪಾಂಡೆ ವಿವಾದಾಸ್ಪದ ಹೇಳಿಕೆಯೊಂದನ್ನು ನೀಡಿದ್ದಾರೆ.
ಇಡೀ ಜಿಲ್ಲೆಯಲ್ಲಿ ಒಂದು ಉತ್ತಮ ಆಸ್ಪತ್ರೆ ಇಲ್ಲ. ಜಿಲ್ಲೆಗೆ ಒಂದು ಆಸ್ಪತ್ರೆ ಕೊಡಿ ಸರ್ ಎಂದು ಪತ್ರಕರ್ತೆ ಮನವಿ ಮಾಡಿದಾಗ, ನಿನ್ನ ಹೆರಿಗೆ ಆಗಲಿ.ಆಗ ನೋಡೋಣ. ಬೇರೆ ಆಸ್ಪತ್ರೆಗೆ ಸೇರಿಸೋಣ ಎಂದು ಉದ್ದಟತನ , ಅಸಂಬದ್ಧ ಉತ್ತರ ನೀಡಿದ್ದಾರೆ.
ಉತ್ತರ ಕನ್ನಡದ ಜೋಯಿಡಾ ತಾಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದೆ. ಇಲ್ಲಿ ಇದುವರೆಗೂ ಒಂದು ಉತ್ತಮ ಆಸ್ಪತ್ರೆ ವ್ಯವಸ್ಥೆಯಿಲ್ಲದಿರುವುದರಿಂದ ಸಾರ್ವಜನಿಕರು ದಶಕಗಳಿಂದ ಯಾತನೆ ಅನುಭವಿಸುತ್ತಿದ್ದಾರೆ.
ಶಾಸಕರು ಜೋಯಿಡಾಗೆ ಬಂದಿದ್ದಾಗ ಅಲ್ಲಿದ್ದ ಸ್ಥಳೀಯ ಪತ್ರಕರ್ತರು ಸಂದರ್ಶಿಸಿದ್ದರು. ನಿಮ್ಮ ಕಾಲಾವಧಿಯಲ್ಲಿಯೇ ಒಂದು ಉತ್ತಮ ಆಸ್ಪತ್ರೆ ನಿರ್ಮಿಸಿ ಕೊಡಿ ಎಂದು ಪತ್ರಕರ್ತೆಯೊಬ್ಬರು ಮನವಿ ಮಾಡಿಕೊಂಡಿದ್ದರು.
ಆದರೆ ಇದಕ್ಕೆ ತೀವ್ರ ಅಶ್ಲೀಲ ರೀತಿಯಲ್ಲಿ ಪತ್ರಕರ್ತೆಯ ಕಡೆ ನೋಡಿ ಕಣ್ಣು ಮಿಟುಕಿಸುತ್ತಾ ಉತ್ತರಿಸಿದ ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಚಿಂತಿಸಬೇಡ. ನಿನ್ನ ಹೆರಿಗೆಯನ್ನು ನಾವು ಬೇರೆ ಕಡೆ ಮಾಡಿಸುತ್ತೇವೆ ಎಂದು ನುಡಿದಿದ್ದಾರೆ.
ಈ ಉತ್ತರದಿಂದ ದಿಘ್ಮೂಢಳಾದ ಪತ್ರಕರ್ತೆ ತಮ್ಮೂರಿನ ಸಮಸ್ಯೆಯನ್ನು ವಿವರಿಸಲು ಮುಂದಾದರೂ ಉಡಾಫೆಯಿಂದ ಹುಬ್ಬು ಹಾರಿಸುತ್ತಾ ಆರ್. ವಿ ದೇಶಪಾಂಡೆ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.ಆರ್.ವಿ.ದೇಶಪಾಂಡೆ ವರ್ತನೆಗೆ ಈಗ ಎಲ್ಲಾ ಕಡೆಯಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.




