ಸಿರುಗುಪ್ಪ : ತಾಲೂಕಿನ ಕೆಂಚನಗುಡ್ಡ ಗ್ರಾಮದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕೆಂಚನಗುಡ್ಡ, ಸಿರುಗುಪ್ಪ, ಇಬ್ರಾಹಿಂಪುರ ಗ್ರಾಮದವರೆಗೂ ನೀರಾವರಿ ಉದ್ದೇಶದಿಂದ ನಿರ್ಮಿಸಲಾದ ವಿಜಯನಗರ ಕಾಲುವೆಯು ನಗರದ ಚರಂಡಿ ನೀರಿನಿಂದ ಮಲಿನವಾಗುತ್ತಿದೆ.
ವ್ಯರ್ಥ ತ್ಯಾಜ್ಯಗಳಿಂದ ನಲುಗಿದ ಕಾಲುವೆ : ಐತಿಹಾಸಿಕತೆಯನ್ನು ಹೊಂದಿರುವ ಈ ಕಾಲುವೆಗೆ ಸಿರುಗುಪ್ಪ ನಗರದ ಚರಂಡಿ ನೀರು ಸಂಪರ್ಕಗೊಂಡು ಇಡೀ ಕಾಲುವೆಯೇ ಚರಂಡಿ ನೀರು ಹಾಗೂ ತ್ಯಾಜ್ಯಗಳಿಂದ ಕೂಡಿ ನಲುಗಿದೆಂದರೆ ತಪ್ಪಾಗಲಾರದು.
ಕಣ್ಮುಚ್ಚಿ ಕುಳಿತ ಸಂಬಂದಿಸಿದ ಅಧಿಕಾರಿಗಳು : ನಗರದ ಅಂಬಿಗರ ಚೌಡಯ್ಯ ರಸ್ತೆಯಿಂದ ಜಮೀನುಗಳಿಗೆ ಕಲ್ಪಿಸುವ ಸೇತುವೆ ಹತ್ತಿರ ತ್ಯಾಜ್ಯವು ಬೆಟ್ಟದಷ್ಟಿದ್ದು, ಇದಕ್ಕೆ ಸಂಬಂದಿಸಿದ ಇಲಾಖೆಗಳ ಅಧಿಕಾರಿಗಳು ಮಾತ್ರ ಇಲಾಖೆಗಳ ಇಲಾಖೆ ಮೇಲೆ ಬೆರಳು ಮಾಡುತ್ತಾ ಕಣ್ಮುಚ್ಚಿ ಕುಳಿತಂತೆ ಗೋಚರವಾಗುತ್ತದೆ.

ತ್ಯಾಜ್ಯ ವಿಲೇವಾರಿ ಮಾಡದ ನಗರಸಭೆ : ಈ ಬಗ್ಗೆ ಕಛೇರಿಗಳಿಗೆ ಅಲೆದು ಅಲೆದು ಸಾಕಾಗಿ ಹೋಗಿರುವ ರೈತರು ತಾವೇ ಸ್ವಂತ ಖರ್ಚಿನಲ್ಲಿ ಜೆ.ಸಿ.ಬಿಯಂತಹ ಮಿಷನ್‌ಗಳ ಮೂಲಕ ಹೂಳು ತೆಗೆದ ತ್ಯಾಜ್ಯವನ್ನಾದರೂ ನಗರಸಭೆ ವಿಲೇವಾರಿ ಮಾಡುತ್ತಿಲ್ಲವೆಂಬುದು ಇಲ್ಲಿನ ಅನ್ನದಾತರ ಆರೋಪವಾಗಿದೆ.
ಅಂದು ಮಂಗಳಕರವಾಗಿದ್ದ ಗಂಗೆ ಇಂದು ಮಲಿನ : ಕಳೆದ ಹತ್ತು ವರ್ಷಗಳ ಹಿಂದೆ ಈ ಕಾಲುವೆಯಲ್ಲೇ ದೇವತೆಗಳ ಗಂಗೆಸ್ಥಳ ಪೂಜೆಯನ್ನು, ಹಾಗೂ ಮನೆಯ ಮಂಗಳಕರ ಕಾರ್ಯಕ್ಕೆಂದು ಇಲ್ಲಿಂದಲೇ ಗಂಗೆಯ ನೀರು ತೆಗೆದುಕೊಂಡು ಹೋಗುವ ಸಂಪ್ರದಾಯವಿತ್ತು. ಅಂದು ಮಂಗಳಕರವಾಗಿದ್ದ ನೀರು ಈಗ ಮಲಿನವಾಗಿದೆ ಎಂಬುದು ಸ್ಥಳೀಯರ ಅಳಲಾಗಿದೆ.
ಧಾರ್ಮಿಕ ಆಚರಣೆಗಳಿಗೆ ಅಡಚಣೆ : ಕಾಲುವೆಯು ಚರಂಡಿಯ ನೀರಿಂದ ಮಲಿನವಾಗಿದ್ದರಿಂದ ಸುತ್ತಮುತ್ತಲಿನ ಮನೆಯ ನೀರನ್ನು ತಂದಿಟ್ಟು ಪೂಜೆಗೈದು ಗಂಗಾಜಲವನ್ನು ಹೋಗಬೇಕಾದ ಪರಿಸ್ಥಿತಿ ಬಂದೊದಗಿದ್ದು ಧಾರ್ಮಿಕ ಆಚರಣೆಗಳಿಗೆ ಅಡಚಣೆಯಾಗಿದೆ ಎಂಬುದು ಇಲ್ಲಿನ ಸ್ಥಳೀಯರ ಅಳಲಾಗಿದೆ.
ಚರ್ಮಕ್ಕೆ ಸಂಬಂದಿಸಿದ ಕಾಯಿಲೆಗಳ ಭಯ : ಸಾವಿರಾರು ಎಕರೆ ಜಮೀನುಗಳಲ್ಲಿ ನಾಟಿ ಮಾಡುವ ಭತ್ತಕ್ಕೆ ಇದೇ ನೀರು ಅನಿವಾರ್ಯವಾಗಿದೆ.
ಇದರಿಂದ ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಚರ್ಮದ ಕಾಯಿಲೆಗಳು ಬರುತ್ತಿದ್ದು ಕೆಲವರು ಕೊಳವೆ ಬಾವಿ ಹಾಗೂ ನದಿನೀರಿನ ಪಂಪ್‌ಸೆಟ್ ಮೊರೆ ಹೋಗಿದ್ದಾರೆ.
ವಿಷಪೂರಿತ ನೀರಿನ ಆತಂಕ : ಯಾವುದೇ ತಂತ್ರಜ್ಞಾನವಿಲ್ಲದ ಕಾಲದಲ್ಲೇ ಶುಭ್ರವಾಗಿ ಹರಿದು ಈ ಭಾಗದ ಜಮೀನುಗಳಿಗೆ ನೀರು ಪೂರೈಸುತ್ತಿದ್ದ ಐತಿಹಾಸಿಕ ಕಾಲುವೆಯು ಇಂದಿನ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲೂ ವಿಷಪೂರಿತ ನೀರಾಗಿ ಪರಿವರ್ತನೆಯಾಗುತ್ತಿರುವ ಆತಂಕವನ್ನುಂಟು ಮಾಡುತ್ತಿದೆ.

ರೈತರು ಮತ್ತು ಸಾರ್ವಜನಿಕರ ಆಕ್ರೋಶ : ನೀರಾವರಿ ಇಲಾಖೆ ಹಾಗೂ ನಗರಸಭೆಯ ಇಲಾಖೆಗಳ ನಿರ್ಲಕ್ಷ್ಯತೆಯ ಬಗ್ಗೆ ಈ ಭಾಗದ ಜಮೀನು ಹೊಂದಿರುವ ರೈತರು ಹಾಗೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ದಿನೇ ದಿನೇ ಕಾಲುವೆ ಜಾಗ ಒತ್ತುವರಿ : ಕಳೆದ ಕೆಲವು ವರ್ಷಗಳ ಹಿಂದೆಯಷ್ಟೇ ಕಾಂಕ್ರೀಟ್ ಕಾಲುವೆಯನ್ನಾಗಿಸಿದ್ದು, ನಗರ ಭಾಗದಲ್ಲಿ ಮಾತ್ರ ಕೆಲವು ಖಾಸಗಿ ವ್ಯಕ್ತಿಗಳ ಕಾಲುವೆಯ ದಡವನ್ನು ಅತಿಕ್ರಮಣ ಮಾಡುತ್ತಿದ್ದರೂ ನೀರಾವರಿ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಇನ್ನು ಮುಂದಾದರೂ ಸಂಬಂದಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನವಹಿಸಿ ಐತಿಹಾಸಿಕ ಕಾಲುವಗೆ ಸೇರುವ ಮಲಿನತೆ ತಡೆದು ಕಾಲುವೆಯ ಶುಭ್ರತೆ ಹಾಗೂ ಅತಿಕ್ರಮಣ ತೆರವುಗೊಳಿಸಿ ಸೂಕ್ತ ನಿರ್ವಹಣೆಗೆ ಮುಂದಾಗಬೇಕೆಂಬುದು ಕಾಲುವೆ ನೀರು ಬಳಕೆದಾರರ ಒತ್ತಾಯವಾಗಿದೆ.
ವರದಿ : ಶ್ರೀನಿವಾಸ ನಾಯ್ಕ




