ತುರುವೇಕೆರೆ : ಪಟ್ಟಣದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ತಾಲೂಕಿನ ಮಾಯಸಂದ್ರದ ಸೌರಭ ಕಾನ್ವೆಂಟಿನ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿ ಕಛೇರಿಯಲ್ಲಿ ನಡೆದ ದೇಶಭಕ್ತಿ ಗೀತೆ ಸ್ಪರ್ಧೆ ಹಾಗೂ ಶಿಕ್ಷಕರ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್, ರಾಷ್ಟ್ರೀಯ ಸೇವಾ ಯೋಜನೆ, ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಚಟುವಟಿಕೆಗಳಲ್ಲಿ ಕಲಿಯುವ ಶಿಸ್ತು, ದೇಶಪ್ರೇಮ, ಸೃಜನಶೀಲತೆ, ಸಂಸ್ಕಾರ, ಸಾಮಾಜಿಕ ನಡವಳಿಕೆಗಳು ವಿದ್ಯಾರ್ಥಿಗಳ ಜೀವನವನ್ನು ಅರ್ಥಪೂರ್ಣವಾಗಿಸುವುದಲ್ಲದೆ ಅವರ ಬದುಕನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಪ್ರತಿಯೊಬ್ಬರ ಬದುಕಿನಲ್ಲಿ ವಿದ್ಯಾರ್ಥಿ ಹಂತ ಬಹಳ ಮುಖ್ಯವಾದ ಘಟ್ಟವಾಗಿದೆ. ಈ ಹಂತದಲ್ಲಿ ಮೈಮರೆತರೆ ಬದುಕು ಕಷ್ಟದೆಡೆಗೆ ದಾಪುಗಾಲಿಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕನ್ನು ಶಿಸ್ತುಬದ್ಧಗೊಳಿಸಿ, ಸ್ವಾಭಿಮಾನವನ್ನು ಎದೆಯಲ್ಲಿ ತುಂಬಿ ದೇಶಕ್ಕೆ ಸತ್ಪ್ರಜೆಗಳನ್ನು ನೀಡುವಲ್ಲಿ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.
ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಪೋಷಕರಷ್ಟೇ ಶಿಕ್ಷಕರ ಪಾತ್ರವೂ ಮುಖ್ಯವಾದುದು. ಶಿಕ್ಷಕರು ತಮ್ಮಲ್ಲಿರುವ ವಿದ್ಯೆಯನ್ನು ಪರಿಪೂರ್ಣವಾಗಿ ಧಾರೆ ಎರೆದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಭವಿಷ್ಯದ ಪ್ರಜೆಗಳನ್ನು ಕಾಣಬಹುದಾಗಿದೆ. ಪಠ್ಯದ ಚಟುವಟಿಕೆ ಅಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳು, ತಮ್ಮಲ್ಲಿರುವ ಪ್ರತಿಭೆಯನ್ನು ಮಕ್ಕಳಿಗೆ ಕಲಿಸುವಲ್ಲಿ ಹಿಂದಡಿಯಿಡಬಾರದು. ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಆಸಕ್ತಿ ಬರುವಂತೆ ಪ್ರೋತ್ಸಾಹಿಸಬೇಕು ಹಾಗೂ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರತಿಭೆ ಹೊರ ಜಗತ್ತಿಗೆ ಕಾಣುವಂತೆ ಮಾಡಬೇಕು. ಮಕ್ಕಳಲ್ಲಿ ಕಲೆ, ಸಾಹಿತ್ಯ, ಸಂಗೀತ, ನಾಟಕ, ಚಿತ್ರ ಬರೆಯುವುದು, ಹಾಡು ಹೇಳುವುದು, ಭಾವಗೀತೆ, ಜನಪದ ಗೀತೆ ಮುಂತಾದ ಕಲೆಗಳು ತಮ್ಮ ಪೋಷಕರಿಂದ, ಹಿರಿಯರಿಂದ ನೋಡಿ ಕಲಿತಿರುತ್ತಾರೆ, ಆ ಕಲೆಗೆ ಮತ್ತಷ್ಟು ನೀರೆರೆದು ಪೋಷಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಅಧ್ಯಕ್ಷ ಧನಪಾಲ್ ವಹಿಸಿದ್ದರು. ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ತಾಲೂಕಿನ ಮಾಯಸಂದ್ರದ ಸೌರಭ ಕಾನ್ವೆಂಟಿನ ಸ್ಕೌಟ್ಸ್, ಗೈಡ್ಸ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು. ಜಿಲ್ಲಾ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಎಡಿಸಿ ನವೀನ್, ತರಬೇತುದಾರ ಗಂಗಾಧರ್, ಮಣೆಚೆಂಡೂರು ಪ್ರೌಢಶಾಲೆಯ ರಂಗಸ್ವಾಮಿ, ಸ್ಕೌಟ್ ಮಾಸ್ಟರ್ ಮುನಿರಾಜು, ಗೈಡ್ ಕ್ಯಾಫ್ಟನ್ ಗುರುಸಿದ್ದಮ್ಮ, ಕಲ್ಪನಾ, ಲಲಿತಾ ಭಟ್, ಇಸಿಒ ಶಿವಕುಮಾರ್, ಕಮಲ್ ರಾಜು, ದಂಡಿನಶಿವರ ಕೃಷ್ಣಮೂರ್ತಿ ಸೇರಿದಂತೆ ವಿವಿಧ ಶಾಲೆಯ ಸ್ಕೌಟ್ಸ್, ಗೈಡ್ಸ್ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




