Ad imageAd image

ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಡಾ.ಜಿ.ಪರಮೇಶ್ವರ್

Bharath Vaibhav
ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ಡಾ.ಜಿ.ಪರಮೇಶ್ವರ್
WhatsApp Group Join Now
Telegram Group Join Now

ತುರುವೇಕೆರೆ : ಇಂದಿರಾ ಕ್ಯಾಂಟೀನ್ ಬಡವರ ಹಸಿವನ್ನು ನೀಗಿಸುವುದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಮಹತ್ತರ ಯೋಜನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಪಟ್ಟಣದ ಮಿನಿವಿಧಾನಸೌಧದ ಹಿಂಭಾಗದಲ್ಲಿ ನಿರ್ಮಿಸಲಾಗಿರುವ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾದ ಸರ್ಕಾರವಾಗಿದೆ. 2013-2018 ಹಾಗೂ 2023 ರ ಈ ಸರ್ಕಾರದ ಅವಧಿಯಲ್ಲಿ ಸರ್ಕಾರ ಬಡವರ ಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಬೆಂಗಳೂರಿನಲ್ಲಿನ ಲಕ್ಷಾಂತರ ವಿದ್ಯಾರ್ಥಿಗಳು, ಬಡವರು, ಕೂಲಿಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ಕ್ಯಾಂಟೀನಿನಲ್ಲಿ ಆಹಾರ ದೊರೆಯುವಂತೆ ಮಾಡಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಪ್ರಾರಂಭಿಸಿ, ರಾಹುಲ್ ಗಾಂಧಿಯವರಿಂದ ಚಾಲನೆ ದೊರಕಿಸಲಾಗಿತ್ತು. ತದನಂತರದಲ್ಲಿ ಶಾಸಕರುಗಳ ಮನವಿ ಮೇರೆಗೆ ರಾಜ್ಯಾದ್ಯಂತ ಈ ಯೋಜನೆಗೆ ಚಾಲನೆ ನೀಡಲಾಯಿತು. ಇಂದು ನಗರ ಸೇರಿದಂತೆ ಜಿಲ್ಲಾ, ತಾಲ್ಲೂಕು ಕೇಂದ್ರದಲ್ಲೂ ಇಂದಿರಾ ಕ್ಯಾಂಟೀನ್ ಸ್ಥಾಪಿತವಾಗಿ ಬಡವರ, ಕೂಲಿಕಾರ್ಮಿಕರ ಹಸಿವನ್ನು ನೀಗಿಸುತ್ತಿದೆ ಎಂದರು.

ತುರುವೇಕೆರೆಯಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭವಾಗಿ ಬಹಳ ವರ್ಷಗಳೇ ಆಗಬೇಕಿತ್ತು, ಆದರೆ ಹಲವಾರು ಕಾರಣಗಳಿಂದ ಆಗಿರಲಿಲ್ಲ. ಈಗ ಕಾಲಕೂಡಿಬಂದಿದ್ದು ಬಹಳ ಸಂತೋಷದಿಂದ ಕ್ಯಾಂಟೀನ್ ಉದ್ಘಾಟನೆ ಮಾಡಿದ್ದೇವೆ. ಕ್ಯಾಂಟೀನ್ ನಲ್ಲಿ ಅತಿ ಕಡಿಮೆ ದರದಲ್ಲಿ ತಿಂಡಿ, ಊಟ ನೀಡಲಾಗುವುದು. ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ತಲಾ 200 ಜನರಿಗೆ ಆಹಾರ ನೀಡುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಂಖ್ಯೆ ಸಾಕಾಗುವುದಿಲ್ಲ. ತುರುವೇಕೆರೆ ತಾಲ್ಲೂಕು ಕೇಂದ್ರವಾಗಿದ್ದು, ವಿವಿಧ ಹಳ್ಳಿಗಳಿಂದ ಗ್ರಾಮಸ್ಥರು ನಾನಾ ಕೆಲಸಗಳಿಗೆ ತಾಲೂಕು ಕೇಂದ್ರಕ್ಕೆ ಬರುತ್ತಾರೆ. ಅವರಿಗೆ ಹಾಗೂ ಇಲ್ಲಿನ ಬಡವರು, ಕೂಲಿಕಾರ್ಮಿಕರು, ಬೀದಿಬದಿ ವ್ಯಾಪಾರಸ್ಥರಿಗೆ ಕ್ಯಾಂಟೀನ್ ನಲ್ಲಿ ಆಹಾರ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಹೆಚ್ಚಿನ ಜನರಿಗೆ ಆಹಾರ ನೀಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಕಾರ್ಯಗತಗೊಳಿಸಲಾಗುವುದು ಎಂದರು.

2013-18 ರ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಬಹಳ ಉತ್ತಮ ರೀತಿಯಲ್ಲಿ ಬಡವರಿಗೆ ಹಸಿವನ್ನು ನೀಡುವ ಕೆಲಸವನ್ನು ಮಾಡುತ್ತಿತ್ತು. ತದನಂತರದಲ್ಲಿ ಬಂದ ಸರ್ಕಾರಗಳು ಕೆಲವು ವರ್ಷಗಳ ಕಾಲ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆದರೆ 2023 ರಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಬಡವರಿಗಾಗಿ, ಕೂಲಿಕಾರ್ಮಿಕರಿಗಾಗಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಚಾಲನೆ ನೀಡಲಾಗಿದೆ ಎಂದ ಅವರು, ಇಂದು ಸಚಿವರು, ಶಾಸಕರು ಉದ್ಘಾಟನೆಗೆ ಬಂದಿದ್ದಾರೆಂದು ಉತ್ತಮ ಗುಣಮಟ್ಟದ ರುಚಿಯುಳ್ಳ ಇಡ್ಲಿ, ಕೇಸರಿಬಾತ್ ಮಾಡಲಾಗಿದೆ. ನಾಳೆಯಿಂದ ಬಡವರಿಗೆ, ನಾಗರೀಕರಿಗೆ ಅಷ್ಟೇ ಗುಣಮಟ್ಟ ಹಾಗೂ ರುಚಿಯುಳ್ಳ ಆಹಾರವನ್ನು ಒದಗಿಸಬೇಕು. ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ. ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಕಳಪೆ ಆಹಾರ ನೀಡಿದರೆ ಗುತ್ತಿಗೆದಾರರನ್ನು ಬದಲಿಸಿ ಬೇರೆ ಗುತ್ತಿಗೆದಾರರನ್ನು ನೇಮಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಶಾಸಕ ಎಂ.ಟಿ.ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಾಸಕ ಎಂ.ಟಿ.ಕೃಷ್ಣಪ್ಪ ಅವರನ್ನು ಪಟ್ಟಣ ಪಂಚಾಯ್ತಿ ವತಿಯಿಂದ ಸನ್ಮಾನಿಸಲಾಯಿತು. ಸಚಿವರು, ಶಾಸಕರು ಇಂದಿರಾ ಕ್ಯಾಂಟೀನ್ ಅಲ್ಲಿ ಇಡ್ಲಿ, ಕೇಸರಿಬಾತ್ ಸವಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಬೆಮೆಲ್ ಕಾಂತರಾಜು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾರಾಜಣ್ಣ, ಬೆಸ್ಕಾಂ ಮಾಜಿ ನಿರ್ದೇಶಕ ವಸಂತಕುಮಾರ್, ತುಮುಲ್ ನಿರ್ದೇಶಕ ಮಹಲಿಂಗಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಸ್ತಿಗೊಂಡನಹಳ್ಳಿ ದೇವರಾಜ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಪ್ರಭು, ಎಸ್ಪಿ ಅಶೋಕ್, ಯೋಜನಾ ನಿರ್ದೇಶಕ ಯೋಗಾನಂದ್, ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂಇ ಅಹಮದ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಪಪಂ ಅಧ್ಯಕ್ಷೆ ಶೀಲಾ, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಚಿದಾನಂದ್, ಮಧು, ಯಜಮಾನ್ ಮಹೇಶ್, ಸ್ವಪ್ನ, ಜಯಮ್ಮ, ಆಶಾ, ಸುರೇಶ್, ರುದ್ರೇಶ್, ಸೇರಿದಂತೆ ಪಪಂ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ನಾಗರೀಕರು ಉಪಸ್ಥಿತರಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!