ತುರುವೇಕೆರೆ : ಸಂಘದ ಅಭ್ಯುದಯದಲ್ಲಿ ಷೇರುದಾರರ ಸಹಕಾರ ಅತ್ಯಗತ್ಯ ಎಂದು ತುಮುಲ್ ನಿರ್ದೇಶಕ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ತಾಲ್ಲೂಕಿನ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗೀಹಳ್ಳಿ ಸಹಕಾರ ಸಂಘ ದಿನದಿಂದ ದಿನಕ್ಕೆ ಅತ್ಯುತ್ತಮ ರೀತಿಯಲ್ಲಿ ಪ್ರಗತಿಯನ್ನು ಹೊಂದುತ್ತಿದೆ, ಇದಕ್ಕೆ ಈ ಭಾಗದ ರೈತರು, ಹಾಲು ಉತ್ಪಾದಕರ ಸಹಕಾರವೇ ಕಾರಣವಾಗಿದೆ. ಸಂಘದಲ್ಲಿ 490 ಷೇರುದಾರರಿದ್ದು, 49 ಸಾವಿರ ಷೇರು ಬಂಡವಾಳವನ್ನು ಸಂಘ ಹೊಂದಿದೆ. ಸಂಘದಲ್ಲಿ ಎಎಂಸಿಎಸ್ ತಂತ್ರಾಂಶವಿದ್ದು, ಎಫ್ಎಟಿ, ಎಸ್.ಎನ್.ಎಫ್. ಆಧಾರದ ಮೇಲೆ ಪಾರದರ್ಶಕವಾಗಿ ರೈತ ಉತ್ಪಾದಕರು ನೀಡುವ ಹಾಲಿಗೆ ದರ ನೀಡಲಾಗುತ್ತಿದೆ. ಸಂಘದಿಂದ 10 ಲಕ್ಷ ರೂಗಳನ್ನು ಡಿಸಿಸಿ ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. 2024-25 ನೇ ಸಾಲಿನಲ್ಲಿ ತಾಲ್ಲೂಕಿನ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ 5 ಲಕ್ಷದ 40 ಸಾವಿರ ರೂ ನಿವ್ವಳ ಲಾಭ ಗಳಿಸಿದ್ದು, ಸಂಘದ ಪ್ರಗತಿ ಹರ್ಷ ತಂದಿದೆ ಎಂದರು.

ಸಂಘದಲ್ಲಿ ಪ್ರಸ್ತುತ 175 ಮಂದಿ ಹಾಲು ಉತ್ಪಾದಕರಿದ್ದು, ಪ್ರತಿನಿತ್ಯ 2780 ಲೀಟರ್ ಹಾಲನ್ನು ಶೇಖರಿಸಲಾಗುತ್ತಿದೆ. 2024-25 ರಲ್ಲಿ ಒಂದು ಕೋಟಿ 99 ಲಕ್ಷದ 8 ಸಾವಿರದ 668 ರೂ ಮೌಲ್ಯದ ಹಾಲನ್ನು ಒಕ್ಕೂಟಕ್ಕೆ ಮಾರಾಟ ಮಾಡಲಾಗಿದೆ. ಇದಲ್ಲದೆ 43 ಲಕ್ಷದ 22 ಸಾವಿರದ 560 ರೂ ಮೌಲ್ಯದ ಪಶು ಆಹಾರವನ್ನು ಕೊಂಡು ಉತ್ಪಾದಕರಿಗೆ ಮಾರಾಟ ಮಾಡಲಾಗಿದೆ. ಒಟ್ಟಾರೆ 2024-25 ನೇ ಸಾಲಿನಲ್ಲಿ 15 ಲಕ್ಷದ 97 ಸಾವಿರದ 432 ರೂ ವ್ಯಾಪಾರ ಲಾಭ ಸಂಘಕ್ಕೆ ಬಂದಿದ್ದು, ಇದರಲ್ಲಿ ಸಂಘದ ಖರ್ಚುವೆಚ್ಚವನ್ನು ಕಳೆದು ಸಂಘವು ಈ ಸಾಲಿನಲ್ಲಿ 5 ಲಕ್ಷದ 40 ಸಾವಿರದ 628 ರೂ ನಿವ್ವಳ ಲಾಭವನ್ನು ಗಳಿಸಿದೆ. ಈ ಲಾಭದಲ್ಲಿ ಶೇ. 65 ರಷ್ಟನ್ನು ಅಂದರೆ 2 ಲಕ್ಷದ 18 ಸಾವಿರದ 436 ರೂಗಳನ್ನು ಬೋನಸ್ ರೂಪದಲ್ಲಿ ಉತ್ಪಾದಕರಿಗೆ ನೀಡಲಾಗುತ್ತದೆ ಎಂದರು.
ತುಮಕೂರು ಜಿಲ್ಲೆಯಲ್ಲಿ ಗುಣಮಟ್ಟದ ಹಾಲು ಉತ್ಪಾದನೆಯಲ್ಲಿ ತುರುವೇಕೆರೆ ಪ್ರಥಮ ಸ್ಥಾನದಲ್ಲಿದೆ. ತಾಲ್ಲೂಕಿನಲ್ಲಿ 130 ಸಂಘಗಳಿದ್ದು, 110 ಸಂಘಗಳು ಸ್ವಂತ ಕಟ್ಟಡವನ್ನು ಹೊಂದಿದೆ. ನಾನು ಅಧ್ಯಕ್ಷನಾಗಿದ್ದ 5 ವರ್ಷದ ಅವಧಿಯಲ್ಲೇ 53 ಕಟ್ಟಡವನ್ನು ನಿರ್ಮಿಸಲಾಗಿದೆ. 22 ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು, ಆದರೆ ಈಗ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ತಾಲ್ಲೂಕಿನಲ್ಲಿ 21 ಚಿಲ್ಲಿಂಗ್ ಸೆಂಟರ್ ಗಳನ್ನು ತೆರೆಯಲಾಗಿದೆ. 2 ಕೋಟಿ ವೆಚ್ಚದಲ್ಲಿ ಸಭಾ ಕಛೇರಿ ನಿರ್ಮಿಸಲಾಗಿದೆ ಎಂದ ಅವರು, ಹಾಲು ಉತ್ಪಾದಕರ ಅನುಕೂಲಕ್ಕಾಗಿ ಒಕ್ಕೂಟದಿಂದ ಹಲವು ಯೋಜನೆ ರೂಪಿಸಲಾಗಿದೆ. ಈ ಬಾರಿ 2 ಲಕ್ಷ ರಾಸುಗಳಿಗೆ ಉಚಿತವಾಗಿ ವಿಮೆ ಮಾಡಿಸುವ ಉದ್ದೇಶದಿಂದ ಒಕ್ಕೂಟದ ಆಯವ್ಯಯದಲ್ಲಿ 30 ಕೋಟಿ ರೂ ಮೀಸಲಿಡಲಾಗಿದೆ. ಉತ್ಪಾದಕರು ಅಕಾಲಿಕ ಮರಣ ಹೊಂದಿದರೆ 50 ಸಾವಿರ ನೆರವು, ಉತ್ಪಾದಕರ ಹೆಣ್ಣು ಮಕ್ಕಳಿಗೆ ವ್ಯಾಸಂಗಕ್ಕೆ ಅನುಕೂಲವಾಗಲೆನ್ನುವ ದೃಷ್ಟಿಯಿಂದ ಉಚಿತ ಮಹಿಳಾ ಹಾಸ್ಟೆಲ್ ವ್ಯವಸ್ಥೆಯನ್ನು ಸಹ ಮಾಡಲಾಗಿದೆ ಎಂದರು.
ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ತುಮುಲ್ ಒಕ್ಕೂಟದ ಅಧ್ಯಕ್ಷ ಮಹಲಿಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ ಅವರನ್ನು ಸಂಘದ ವತಿಯಿಂದ ಮೈಸೂರು ಪೇಟ ತೊಡಿಸಿ ಶಾಲು ಹೊದಿಸಿ ಗೌರವಿಸಲಾಯಿತು. ಸಂಘಕ್ಕೆ ಅತಿ ಹೆಚ್ಚು ಲೀಟರ್ ಹಾಲು ಮಾರಾಟ ಮಾಡಿದ ರೈತ ಉತ್ಪಾದಕರನ್ನು ಸನ್ಮಾನಿಸಲಾಯಿತು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿದ್ದಲಿಂಗಪ್ಪ, ಉಪಾಧ್ಯಕ್ಷ ನಂಜೇಗೌಡ, ನಿರ್ದೇಶಕರಾದ ಹೊನ್ನಪ್ಪ, ಪ್ರಕಾಶ್, ಉದಯ್ ಕುಮಾರ್, ವೇಣುಗೋಪಾಲ್, ಮಹೇಶ್, ತೋಪೇಗೌಡ, ಮೋಹನ್ ಕುಮಾರ್, ಕುಮಾರ, ಕೆಂಪಮ್ಮ, ಪ್ರೇಮಾ, ವಿಸ್ತರಣಾಧಿಕಾರಿ ಎಸ್.ದಿವಾಕರ್, ಗ್ರಾಪಂ ಮಾಜಿ ಅಧ್ಯಕ್ಷ ದೇವರಾಜ್, ಮುಖ್ಯ ಕಾರ್ಯನಿರ್ವಾಹಕ ಕೆ.ಎಸ್.ಪ್ರಭುಸ್ವಾಮಿ, ಸಹಾಯಕ ರವಿಕಿರಣ್, ಹಾಲು ಪರೀಕ್ಷಕ ಪುನೀತ್ ಸೇರಿದಂತೆ ಸಂಘದ ಷೇರುದಾರರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




