ಸೇಡಂ : ಪುರಸಭೆಯ ವ್ಯಾಪ್ತಿಯಲ್ಲಿ ಬಿ. ಖಾತಾ ಪಡೆಯಬೇಕಾದರೆ 10% ಲಂಚ ನೀಡಬೇಕಾದಂತಹ ಪರಿಸ್ಥಿತಿ ಕಲಬುರಗಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ಅಪ್ಪಾಜಿ ಗಂಭೀರ ಆರೋಪ ಮಾಡಿದ್ದಾರೆ.
ಇತ್ತೀಚೆಗೆ ಸರಕಾರ ಎ ಮತ್ತು ಬಿ (ಈ-ಖಾತಾ) ಖಾತಾ ನೀಡಲು ಸೂಚಿಸಿತ್ತು. ಅದರಂತೆ ಸಾವಿರಾರು ಜನ ಈ ಖಾತಾಗಳಿಗಾಗಿ ಅರ್ಜಿ ಸಲ್ಲಿಸಿದ್ದರು. ಕೆಲ ಮಾನದಂಡಗಳ ಪ್ರಕಾರ ಈ ಖಾತಾ ಪುರಸಭೆ ವತಿಯಿಂದ ನೀಡಲಾಗಿದೆ.
ಆದರೆ ಸೇಡಂ ಪುರಸಭೆಯಲ್ಲಿ ಮಾನದಂಡಗಳನ್ನು ಬದಿಗೊತ್ತಿ ಲಂಚ ನೀಡಿದವರಿಗೆ ಮಾತ್ರವೇ ಈ ಖಾತಾ ನೀಡಲಾಗಿದೆ ಎಂಬ ಅನುಮಾನ ಮೂಡಿದೆ. ಕೆಲ ಸರ್ವೆ ನಂಬರಗಳಲ್ಲಿನ ವಿಭಜಿತ ಗುಂಟಾ ಜಮೀನುಗಳ ಕೆಲ ಮಾಲೀಕರಿಗೆ ಈ ಖಾತಾ ನೀಡಿ, ಇನ್ನುಳಿದ ಕೆಲವರಿಗೆ ನೀಡದೆ ನಿರಾಕರಿಸಲಾಗುತ್ತಿದೆ. ಇದರಲ್ಲಿ ನೇರವಾಗಿ ಪುರಸಭೆ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ ಹಾಗೂ ಆರ್.ಒ ಸೇರಿದಂತೆ ಅನೇಕ ಅಧಿಕಾರಿಗಳು ಶಾಮೀಲಾಗಿದ್ದು, ದುಡ್ಡು ಕೊಟ್ಟವರಿಗೆ ಮಾತ್ರ ಈ ಖಾತಾ ನೀಡಿ, ಸರಕಾರದ ಮಾನದಂಡಗಳನ್ನ ಮೂಲೆಗುಂಪು ಮಾಡಿ ಮೋಸ ಎಸಗುತ್ತಿದ್ದಾರೆ.
ಅಲ್ಲದೆ ಲಕ್ಷಾಂತರ ರೂಪಾಯಿ ಲಂಚ ಪಡೆದು ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ. ಸರಕಾರ ತನ್ನ ಬೊಕ್ಕಸ ತುಂಬಿಕೊಳ್ಳಲು ಈ ಖಾತಾ ಜಾರಿ ಮಾಡಿದೆ ಆದರೆ ಇಲ್ಲಿ ಅಧಿಕಾರಿಗಳ ಬೊಕ್ಕಸ ತುಂಬುತ್ತಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯ ಅವಶ್ಯಕತೆ ಇದೆ. ಕೂಡಲೇ ಪೌರಾಢಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತನಿಖೆಗೆ ಆದೇಶಿಸಬೇಕು. ಸಂಬಂಧಿಸಿದ ಅಧಿಕಾರಿಗಳೆಲ್ಲರನ್ನೂ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಖರ್ಗೆ ಉಸ್ತುವಾರಿ: ಕಲಬುರಗಿ ಜಿಲ್ಲೆಯ ಉಸ್ತುವಾರಿ ಹೊತ್ತ ಪ್ರಿಯಾಂಕ ಖರ್ಗೆ ಅವರ ಜಿಲ್ಲೆಯಲ್ಲೇ ಇಂತಹ ಭ್ರಷ್ಟಾಚಾರ ನಡೆಯುತ್ತಿದೆ. ಅಷ್ಟೇ ಅಲ್ಲ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಪ್ರತಿನಿಧಿಸುವ ತವರು ಕ್ಷೇತ್ರ ಇದಾಗಿದೆ. ಲಂಚ ಕೊಟ್ಟವರ ಕಣ್ಣಿಗೆ ತುಪ್ಪ, ಕೊಡದವರ ಕಣ್ಣಿಗೆ ಬೆಣ್ಣೆ ಸವರುವ ಅಧಿಕಾರಿಗಳಿಂದ ಸಾರ್ವಜನಿಕರು ಪರದಾಡುವಂತಾಗಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




