ತುರುವೇಕೆರೆ : ಕ್ರೀಡೆಯಲ್ಲೂ ರಾಜಕೀಯ ಬೆರೆತುಹೋಗಿರುವುದರಿಂದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾಧಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಶಾಸಲಾ ಶಿಕ್ಷಣ ಇಲಾಖೆ, ಸ್ವಾಮಿ ವಿವೇಕಾನಂದ ಪಪೂ ಕಾಲೇಜು ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 2025-26 ನೇ ಸಾಲಿನ ತುರುವೇಕೆರೆ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಪ್ರತಿಭಾವಂತರಿಗೆ ಹೆಚ್ಚು ಅವಕಾಶಗಳು ಸಿಗುವಂತಾಗಬೇಕು. ಆದರೆ ಕ್ರೀಡೆಯಲ್ಲೂ ರಾಜಕೀಯ ಹಸ್ತಕ್ಷೇಪವಿರುವ ಕಾರಣ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳು ಅವಕಾಶ ವಂಚಿತರಾಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಮಂದಿ ಪ್ರತಿಭಾವಂತ ಆಟಗಾರರಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆದರೆ ಅಲ್ಲಿಂದ ಮುಂದೆ ರಾಷ್ಟ್ರವನ್ನು ಪ್ರತಿನಿಧಿಸುವ, ಆ ಮೂಲಕ ಕ್ರೀಡಾ ಪ್ರಾತಿನಿಧ್ಯದ ಮೂಲಕ ಉದ್ಯೋಗ ಪಡೆದು ತಮ್ಮ ಬದುಕನ್ನು ಯಶಸ್ವಿಗೊಳಿಸಿಕೊಳ್ಳುವ ಅವಕಾಶ ಲಭ್ಯವಾಗಬೇಕಿದೆ ಎಂದರು.
ಪ್ರಸ್ತುತ ಗ್ರಾಮೀಣ ಸೊಬಗನ್ನು ಮೈಗೂಡಿಸಿಕೊಂಡಿರುವ ದೇಶೀ ಸೊಗಡಿನ ಕಬ್ಬಡಿಯು ಹಿಂದೆ ಹಳ್ಳಿಗಾಡಿನ ಪ್ರಸಿದ್ದ ಆಟವಾಗಿತ್ತು. ಆ ಕಬ್ಬಡಿ ಪಂದ್ಯಗಳನ್ನು ನೋಡುವುದೇ ಒಂದು ಹಬ್ಬ. ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರೊ. ಕಬ್ಬಡಿ ಪ್ರಾರಂಭವಾಗಿರುವುದರಿಂದ ಕಬ್ಬಡಿಗೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು, ಸಾಕಷ್ಟು ಮಂದಿ ಹಳ್ಳಿಗಾಡಿನ ಗ್ರಾಮೀಣ ಕಬ್ಬಡಿ ಪ್ರತಿಭೆಗಳಿಗೆ ಅವಕಾಶ ಲಭ್ಯವಾಗುತ್ತಿದೆ ಎಂದ ಅವರು, ತಾಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಂಡಿರುವುದು ಸಂತಸ ತಂದಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆಟಗಾರರು ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು. ಆಟಗಾರರು ಕೇವಲ ತಾಲೂಕು ಮಟ್ಟಕ್ಕೆ ಸೀಮಿತವಾಗದೆ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಕ್ರೀಡೆಗಳಲ್ಲಿ ಪಾಲ್ಗೊಂಡು ಪೋಷಕರಿಗೆ, ತಾಲೂಕಿಗೆ ಕೀರ್ತಿ ತರಬೇಕೆಂದು ಆಶಿಸಿದರು.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿದ್ದ ಕ್ರೀಡಾಕೂಟದ ಉದ್ಘಾಟನೆ ಎರಡು ಗಂಟೆ ತಡವಾಗಿ 11 ಗಂಟೆಗೆ ಆರಂಭವಾಯಿತು. ಉತ್ಸಾಹದಿಂದ ಕ್ರೀಡಾಕೂಟಕ್ಕೆ ಆಗಮಿಸಿದ್ದ ಕ್ರೀಡಾಪಟುಗಳು ಆಯೋಜಕರು ಕಾರ್ಯಕ್ರಮ ವಿಳಂಬ ಮಾಡಿದ್ದರಿಂದ ಬಿಸಿಲಿನಲ್ಲಿ ಬಳಲುವಂತಾಯಿತು. ಸಮಾರಂಭದಲ್ಲಿ ತುಮುಲ್ ನಿರ್ದೇಶಕ ಮಹಲಿಂಗಯ್ಯ ಧ್ವಜಾರೋಹಣ ನೆರವೇರಿಸಿದರು. ಸರ್ಕಾರಿ ಪಪೂ ಕಾಲೇಜಿನ ಪ್ರಾಂಶುಪಾಲ ಅನಂತರಾಮು ಕ್ರೀಡಾ ಜ್ಯೋತಿ ಸ್ವೀಕರಿಸಿದರು. ಸ್ವಾಮಿ ವಿವೇಕಾನಂದ ಪಪೂ ಕಾಲೇಜಿನ ಪ್ರಾಂಶುಪಾಲ ರಾಜ ಈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಪಾಪಣ್ಣ, ದೇವರಮನೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಂಗಾಧರ ದೇವರಮನೆ, ಕಸಾಪ ನಗರ ಘಟಕ ಅಧ್ಯಕ್ಷ ನಂಜೇಗೌಡ, ರೋಟರಿ ಅಧ್ಯಕ್ಷ ಉಮೇಶ್, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್ ಸೇರಿದಂತೆ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಕ್ರೀಡಾಪಟುಗಳು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




