ತುರುವೇಕೆರೆ : ದಾನಗಳಲ್ಲಿ ವಿದ್ಯಾದಾನ ಶ್ರೇಷ್ಠ ಎಂಬ ಮಾತೊಂದಿತ್ತು. ಆದರೆ ಪ್ರಸ್ತುತ ಸಮಾಜದಲ್ಲಿ ಶಿಕ್ಷಣ ಹಣ ಮಾಡುವ ಉದ್ಯಮವಾಗಿದೆ. ನೈತಿಕ, ಅನೈತಿಕ ನಡುವೆ ಭ್ರಷ್ಟತೆಯ ಪೆಡಂಭೂತ ಬಂದು ಕುಳಿತಿದ್ದು ಶಿಕ್ಷಣ ವ್ಯವಸ್ಥೆಯನ್ನು ಹದಗೆಡಿಸಿದೆ ಎಂದು ಲೇಖಕ ತುರುವೇಕೆರೆ ಪ್ರಸಾದ್ ವಿಷಾಧಿಸಿದರು.
ಪಟ್ಟಣದ ಗ್ಲೋಬಲ್ ಎಂಬಸ್ಸಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಸ್ಕೃತಿ ಉತ್ಸವ ಹಾಗೂ ಪ್ರಥಮ ಬಿಕಾಂ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಾರಂಪರಿಕ ಗುರುಕುಲ ಪದ್ಧತಿಯಿಂದ ಬ್ರಿಟಿಷರ ಮೆಕಾಲೆ ಶಿಕ್ಷಣ ವ್ಯವಸ್ಥೆಯಲ್ಲಿ ಮುಳುಗಿ ಹೋಗಿದ್ದೇವೆ. ಹಿಂದೆ ವಿದ್ಯಾರ್ಥಿಗಳಿಗೆ ಶಿಷ್ಟ, ದುಷ್ಟ ಮಾರ್ಗಗಳ ಪೈಕಿ ಯಾವ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಆಯ್ಕೆಯಿತ್ತು. ಆದರೆ ಈಗ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಈ ಮಾರ್ಗಗಳಲ್ಲಿ ಭ್ರಷ್ಟತೆಯ ಸಂಗಮವಾಗಿದೆ. ಈ ತ್ರಿವೇಣಿ ಸಂಗಮದ ಸುಳಿಯಲ್ಲಿ ಸಿಲುಕದೆ ಛಲದಿಂದ ಅಧ್ಯಯನವೆಂಬ ನದಿಯಲ್ಲಿ ಈಜಿ ಯಶಸ್ಸಿನ ದಡ ಸೇರಬೇಕಿದೆ ಎಂದರು.
ವಿದ್ಯಾಬ್ಯಾಸ ಮುಗಿದು ಉದ್ಯೋಗಕ್ಕೆ ಸೇರಿ ಸಂಪಾದನೆ ಮಾಡುವುದಷ್ಟೇ ಜೀವನವಲ್ಲ. ಗುರಿಯಿಲ್ಲದ ಜೀವನ ನಮ್ಮ ಬದುಕನ್ನು ಅಸ್ತವ್ಯಸ್ಥಗೊಳಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಶ್ಚಿತ ಗುರಿಯೊಂದಿಗೆ ಹೆಜ್ಜೆಯನ್ನಿಡಬೇಕು, ಆ ಗುರಿಗೆ ತಕ್ಕಂತೆ ರೋಲ್ ಮಾಡೆಲ್ ಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಬದುಕಿನ ಘಟ್ಟಗಳು ಬದಲಾದಂತೆ ಕಾಲಕ್ಕೆ ತಕ್ಕ ಹಾಗೇ ನಮ್ಮ ಆದ್ಯತೆ ಹಾಗೂ ರೋಲ್ ಮಾಡೆಲ್ ಗಳು ಬದಲಾಗಬೇಕು. ಯುವ ಸಮೂಹಕ್ಕೆ ಹೆಚ್ಚು ಆಕರ್ಷಣೆ ಎಂದರೆ ಸಿನಿಮಾ ಹಾಗೂ ರಾಜಕೀಯ ಕ್ಷೇತ್ರ. ಈ ಕ್ಷೇತ್ರದ ಪ್ರಮುಖರು ತಮ್ಮ ರೋಲ್ ಮಾಡೆಲ್ಗಳಾಗಿದ್ದರೆ ಯಾವುದೇ ತಪ್ಪಿಲ್ಲ. ಮುಂದೆ ನೀವೂ ಸಹ ಅವರಂತೆ ನಟ, ನಟಿಯರಾಗಬಹುದು, ರಾಜಕಾರಣಿಯಾಗಿ ಸಮಾಜ ಸೇವೆಯಲ್ಲೂ ತೊಡಗಬಹುದು. ಈ ಆಯ್ಕೆ ನಿಮ್ಮದೇ ಆಗಿರಬೇಕು ಎಂದರು.

ಸಿನಿಮಾ ಹಾಗೂ ರಾಜಕೀಯ ಕ್ಷೇತ್ರ ಎಂದರೆ ಮೂಗುಮುರಿಯುವವರೇ ಹೆಚ್ಚು. ಪ್ರತಿಯೊಂದು ಕ್ಷೇತ್ರದಲ್ಲೂ ಒಳ್ಳೆಯದು, ಕೆಟ್ಟದು ಇದ್ದೇ ಇರುತ್ತದೆ. ಅದೇ ರೀತಿ ಚಿತ್ರರಂಗದಲ್ಲಿ ಡಾ.ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ಅಮಿತಾಭ್ ಬಚ್ಚನ್, ಶಾರುಖ್ ಖಾನ್ ಬಹಳ ಕಷ್ಟದಿಂದ ಮೇಲೆ ಬಂದವರಾಗಿದ್ದಾರೆ. ಅತ್ಯಲ್ಪ ಅವಧಿಯಲ್ಲಿ ಸಾಧನೆ ಮಾಡಿದ ಪುನೀತ್ ರಾಜ್ ಕುಮಾರ್ ಯುವಕರ ಆದರ್ಶವಾಗಬಾರದೇಕೆ? ರಾಜಕೀಯ ಕ್ಷೇತ್ರದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ, ರಾಮಕೃಷ್ಣ ಹೆಗಡೆ, ವಾಜಪೇಯಿ ಅವರಂತಹವರು ನಿಸ್ವಾರ್ಥತೆ, ಪ್ರಾಮಾಣಿಕತೆಯಿಂದ ಅಧಿಕಾರ ನಡೆಸಿ ಸಮಾಜದ ಸೇವೆ ಮಾಡಿದ್ದಾರೆ. ಇವರೆಲ್ಲರೂ ನಮಗೆ ಆದರ್ಶವಾದರೆ ತಪ್ಪಿಲ್ಲ ಎಂದರು.
ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪ್ರಸ್ತುತ ವಿದ್ಯಮಾನಗಳಿಗೆ ಪ್ರತಿಕ್ರಯಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ವ್ಯವಸ್ಥೆ ಹದಗೆಟ್ಟಿದೆ ನಮಗೇಕೆ? ಎಂದು ಕೂತರೆ ಅದನ್ನು ಸರಿಪಡಿಸುವವರಾರು? ವ್ಯವಸ್ಥೆ ಮತ್ತಷ್ಟು ಹದಗೆಡುತ್ತದೆ. ಹದಗೆಟ್ಟಿರುವ ವ್ಯವಸ್ಥೆಯನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಯುವಸಮೂಹದ ರಾಜಕೀಯ ಪ್ರವೇಶ ಅನಿವಾರ್ಯ. ಭ್ರಷ್ಟತೆ ತಾಂಡವವಾಡುತ್ತಿರುವ ರಾಜಕೀಯ ಕ್ಷೇತ್ರದಲ್ಲಿ ಯುವ ಸಮೂಹ ಹೊಸ ಸಂಚಲನವನ್ನು ಮೂಡಿಸಬೇಕು. ಸದೃಢ ದೇಶ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯವಾಗಿದೆ. ಪ್ರಸ್ತುತ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರಿಗೂ ಮೀಸಲಾತಿ ನೀಡಿದ್ದು, ವಿದ್ಯಾರ್ಥಿನಿಯರು ರಾಜಕೀಯ ಪ್ರವೇಶ ಮಾಡಿ ಇಂದಿರಾ ಗಾಂಧಿ, ಸುಷ್ಮ ಸ್ವರಾಜ್, ಪ್ರಿಯಾಂಕಾ ಗಾಂಧಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಅವರಂತೆ ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಗ್ಲೋಬಲ್ ಎಂಬಸ್ಸಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಗಂಗಾಧರ ದೇವರಮನೆ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




