ಬಳ್ಳಾರಿ: ಈ ತಿಂಗಳ 22ರಿಂದ ರಾಜ್ಯದಲ್ಲಿ ನಡೆಸಲು ಉದ್ದೇಶಿಸಿ ರುವ ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಜಾತಿ ಸಮೀಕ್ಷೆ ಮೂಲ ಉದ್ದೇಶವೇ ಬೇರೆಯಿದೆ. ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಮತ್ತು ಗಣತಿ ಹೆಸರಲ್ಲಿ ಹಣ ಲೂಟಿ ಮಾಡುವ ಹುನ್ನಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಂದಿದ್ದಾರೆಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದ್ದಾರೆ.
ಅವರು ಇಂದು ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ನಡೆಸಿ. ಹಿಂದುಳಿದ ವರ್ಗಗಳ ಶೈಕ್ಷಣಿಕ, ಆರ್ಥಿಕ, ಜಾತಿಯ ಮರುಗಣತಿಗೆ ಸರ್ಕಾರ ಮುಂದಾಗಿದೆ. ಬರುವ ಡಿಸೆಂಬರ್ ಒಳಗೆ ವರದಿ ನೀಡಲು ಆಯೋಗದ ಮುಖ್ಯಸ್ಥ ಮಧುಸೂಧನ ನಾಯಕ್ ಅವರಿಗೆ ವಹಿಸಿದ್ದಾರೆ. ಮಧುಸೂಧನ್ ಅವರು ಸಿದ್ದರಾಮಯ್ಯ ಅವರಿಗೆ ಬಹು ಆಪ್ತರು ಎಂಬುದನ್ನು ಮರೆಯಬೇಕಿಲ್ಲ.
ಕಳೆದ ಹತ್ತು ವರ್ಷಗಳ ಹಿಂದೆ 150 ಕೋಟಿ ರೂ ವೆಚ್ಚ ಮಾಡಿ 54 ಪ್ರಶ್ನೆಗಳ ಮೂಲಕ ಕಾಂತರಾಜ ಸಮಿತಿ ಸಮೀಕ್ಷೆ ವರದಿ ಮಾಡಿತ್ತು. ಅದು ಅವೈಜ್ಞಾನಿಕ ಎಂದು ಈಗ 60 ಪ್ರಶ್ನೆಗಳ ಮೂಲಕ ಸೆ. 22 ರಿಂದ 420 ಕೋಟಿ ರೂ ವೆಚ್ಚದಲ್ಲಿ ಸಮೀಕ್ಷೆ ನಡೆಯಲಿದೆ.ಹೀಗೆ ಸಮೀಕ್ಷೇಗಳ ಹೆಸರಿಲ್ಲಿ ಜನರ ದುಡ್ಡನ್ನು ಲೂಟಿ ಮಾಡಲು ರಾಜ್ಯ ಕಾಂಗ್ರೇಸ್ ಸರ್ಕಾರ ಮುಂದಾಗಿದೆ ಎಂದು ರಾಮುಲು ಕಿಡಿಕಾರಿದರು.




