Ad imageAd image

ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ : ಇಂದು ಮಹತ್ವದ ಸಭೆ 

Bharath Vaibhav
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯ : ಇಂದು ಮಹತ್ವದ ಸಭೆ 
WhatsApp Group Join Now
Telegram Group Join Now

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವ ಕುರಿತಾಗಿ ರಾಜ್ಯ ಸರ್ಕಾರದಿಂದ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಎರಡು ಪ್ರಸ್ತಾವನೆಗಳಲ್ಲಿನ ಗೊಂದಲ ನಿವಾರಿಸುವ ಬಗ್ಗೆ ಪರಿಶಿಷ್ಟ ಪಂಗಡ ಇಲಾಖೆಯಲ್ಲಿ ಮಂಗಳವಾರ ಸಭೆ ಆಯೋಜಿಸಲಾಗಿದೆ.

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸುವ ಸಂಬಂಧ ಅನೇಕ ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕಳೆದ ಜುಲೈನಲ್ಲಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಎರಡು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಯಲ್ಲಿ ರಾಜ್ಯದಲ್ಲಿರುವ ಕುರುಬ ಸಮುದಾಯದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಉಲ್ಲೇಖಿಸಲಾಗಿತ್ತು.

ನಂತರ ಮತ್ತೊಂದು ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಅದರಲ್ಲಿ ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿರುವ ಗೊಂಡಾ ಸಮುದಾಯದವರನ್ನು ಕುರುಬ ಸಮುದಾಯದವರೆಂದೇ ಗುರುತಿಸಬೇಕೆಂದು ಉಲ್ಲೇಖಿಸಲಾಗಿದೆ.

ಒಂದೇ ತಿಂಗಳಲ್ಲಿ ಸಲ್ಲಿಕೆಯಾದ ಎರಡು ಪ್ರಸ್ತಾವನೆಯಲ್ಲಿ ಗೊಂದಲವಿದ್ದು, ಅದಕ್ಕೆ ಸ್ಪಷ್ಟನೆ ನೀಡುವಂತೆ ಮತ್ತು ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಒಳಗೊಂಡ ಜಿಲ್ಲಾವಾರು ಜನಸಂಖ್ಯೆ ಅಂಕಿ ಅಂಶ ನೀಡುವಂತೆ ಕೇಂದ್ರ ಬುಡಕಟ್ಟು ವ್ಯವಹಾರ ಸಚಿವಾಲಯ ಆಗಸ್ಟ್ 14ರಂದು ರಾಜ್ಯದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಲಾಗುತ್ತಿದೆ.

ಸಭೆಯಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರು, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಸಲಹೆಗಾರರು ಸೇರಿ ಇತರೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!