ಬೀದರ್: ಸೈನಿಕ ಶಾಲೆ ಮಕ್ಕಳಿಗೆ ಶಿಕ್ಷಣದೊಂದಿಗೆ ಶಿಸ್ತನ್ನು ಕಲಿಸಿಕೊಡುತ್ತದೆ. ಒಬ್ಬ ಸೈನಿಕನಿಗೆ ಅಗತ್ಯವಾಗಿ ಬೇಕಾದ ಶಿಸ್ತನ್ನು ಮಕ್ಕಳಿಗೆ ಬಾಲ್ಯದಲ್ಲಿಯೇ ನೀಡುವುದು ಹೆಮ್ಮೆಯ ವಿಚಾರ. ನಿಮ್ಮ ಪೆರೇಡ್ ನೋಡಿ ತುಂಬಾ ಖುಷಿಯಾಯಿತು ಎಂದು ಸೈನಿಕ ಶಾಲೆಯ ಮಕ್ಕಳ ಶಿಸ್ತಿನ ಬಗ್ಗೆ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಖುಷಿ ವ್ಯಕ್ತಪಡಿಸಿದರು.

ನಗರದ ಬಿ.ವಿ. ಬಿ ಶಾಲಾ ಕಾಲೇಜಿನ ಆವರದಲ್ಲಿರುವ ಸೈನಿಕ ಶಾಲೆಯ 2ನೇ ಸಂಸ್ಥಾಪನಾ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾನು ಕೂಡಾ ಸೈನಿಕ ಶಾಲೆಯ ಪರೀಕ್ಷೆಯನ್ನು ಬರೆದಿದ್ದೆ ಆದರೆ ದುರಾದೃಷ್ಟವಶಾತ್ ನಾನು ಫಿಸಿಕಲ್ ಟೆಸ್ಟ್ ತೇರ್ಗಡೆಯಾಗಲಿಲ್ಲ. ಆದರೆ ನಿಮಗೆ ಸೈನಿಕ ಶಾಲೆಯಲ್ಲಿ ಓದುವ ಸೌಭಾಗ್ಯ ದೊರೆತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ದೇಶ ಕಾಯುವ ದೊಡ್ಡ ಜವಾಬ್ದಾರಿಗೆ ಸನ್ನದ್ಧರಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ರಜನೀಶ್ ವಾಲಿ ಮಾತನಾಡಿ, ಬೀದರ್ ನಲ್ಲಿ ಸೈನಿಕ ಶಾಲೆ ಪ್ರಾರಂಭಿಸ ಬೇಕೆಂಬುದು ನಮ್ಮ ಬಹುದಿನದ ಕನಸಾಗಿತ್ತು, ಆ ಕನಸು ನನಸಾಗಿ ಇಂದಿಗೆ ಎರಡು ವರ್ಷಗಳನ್ನ ಪೂರೈಸಿದೆ.
ನಾವೂ ಇವತ್ತು ಮಾಡಿರುವ ಕಾರ್ಯ ದೊಡ್ಡದಾಗಿ ಕಂಡರೂ ಸಹ ನಾವಿನ್ನು ಮಾಡಬೇಕಾದ ಕಾರ್ಯ ಬೆಟ್ಟದಷ್ಟಿದೆ, ಹಂತ ಹಂತವಾಗಿ ಆ ಕಾರ್ಯಗಳನ್ನು ಮಾಡುತ್ತಾ ನಮ್ಮ ಬೀದರ್ ಸೈನಿಕ ಶಾಲೆಯ ಕೀರ್ತಿಯನ್ನ ದೇಶದೆಲ್ಲೆಡೆ ಪಸರಿಸುವ ಕೆಲಸ ಮಾಡೋಣ ಎಂದರು.
ಸೈನಿಕ ಶಾಲೆಯ ಪ್ರಾಂಶುಪಾಲರಾದ ಡಾ.ಶ್ರೀಲತಾ ಸ್ವಾಮಿ ಅವರು ಮಾತನಾಡಿ, ಸೈನಿಕ ಶಾಲೆಯ ಪ್ರಾರಂಭವೇ ಒಂದು ರೋಚಕತೆಯಿಂದ ಕೂಡಿತ್ತು. ಅರ್ಜಿ ಹಾಕುವ ಕೊನೆಯ ದಿನ ರಾತ್ರಿ 11.59ಕ್ಕೆ ನಾವೂ ಅರ್ಜಿ ಸಲ್ಲಿಸಿ ಈ ಶಾಲೆಯ ಅನುಮತಿಯನ್ನ ಪಡೆದು ಪ್ರಾರಂಭಂಬಿಸಿದ್ದೇವೆ.
ನಮ್ಮ ಶಾಲೆ ಇಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವುದರಲ್ಲಿ ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಿ.ವಿ. ಬಿ ಆವರಣದ ಶಾಲಾ ಕಾಲೇಜಿನ ಸಂಚಾಲಕರಾದ ಡಾ. ರಜನೀಶ್ ವಾಲಿ ಅವರ ಪಾತ್ರ ಮಹತ್ತರವಾಗಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಶೈನಿ ಪ್ರದೀಪ್ ಗುಂಟಿ ಮಾತನಾಡಿ, ನಾವೆಲ್ಲರೂ ಈ ದೇಶದ ಸ್ವಾತಂತ್ರಕ್ಕಾಗಿ ತಮ್ಮ ರಕ್ತವನ್ನೇ ಸಮರ್ಪಿಸಿದ ಮಹಾನ್ ದೇಶ ಭಕ್ತರು ಜನಿಸಿದ ಭೂಮಿಯಲ್ಲಿ ಜನಿಸಿದ್ದಕ್ಕೆ ಹೆಮ್ಮೆ ಪಡಬೇಕು. ಯಾರಾದರೂ ದೊಡ್ಡ ಹುದ್ದೆಯಲ್ಲಿರುವ ಅಧಿಕಾರಿಗಳನ್ನ ನೀವು ಎಲ್ಲಿ ಓದಿದ್ದು ಎಂದು ಪ್ರಶ್ನಿಸಿದಾಗ ಅವರಲ್ಲಿ ಬಹುತೇಕರು ನೀಡುವ ಉತ್ತರ ಬಿಜಾಪುರ ಸೈನಿಕ ಶಾಲೆ, ಅದು ಸೈನಿಕ ಶಾಲೆಗಿರುವ ಶಕ್ತಿ. ನಾಳೆ ನೀವು ಕೂಡಾ ದೇಶದ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿ ಶಾಲೆಯ ಕೀರ್ತಿಯನ್ನ ಹೆಚ್ಚಿಸಬೇಕು. ನಿಮ್ಮ ಸುತ್ತ ಮುತ್ತ ಎಲ್ಲಾದರೂ ತಪ್ಪು ಕಂಡಲ್ಲಿ ನೀವು ಅದನ್ನ ಪ್ರಶ್ನಿಸಿ, ತಪ್ಪನ್ನು ತಡೆಯುವಂತವರಾಗಬೇಕು ಎಂದರು.
ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಬಿ. ವಿ. ಭೂಮರೆಡ್ಡಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಠಲ ರೆಡ್ಡಿ, ಬಸವೇಶ್ವರ ಬಿ. ಎಡ್ ಕಾಲೇಜಿನ ಪ್ರಾಂಶುಪಾಲ ಮಲ್ಲಿಕಾರ್ಜುನ ಕಣಕಟ್ಟೆ, ಬಿ. ವಿ. ಭೂಮರೆಡ್ಡಿ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ದೀಪಾ ರಾಘಾ ಮತ್ತು ಇನ್ನಿತರರು ಉಪಸ್ಥಿತರಿದ್ದರು
ವರದಿ: ಸಂತೋಷ ಬಿಜಿ ಪಾಟೀಲ




