ತುರುವೇಕೆರೆ : ಕರ್ನಾಟಕ ರತ್ನ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರ 75 ನೇ ಜನ್ಮದಿನದ ಅಮೃತ ಮಹೋತ್ಸವದ ಸಂದರ್ಭದಲ್ಲಿ ತಾಲೂಕು ಡಾ.ವಿಷ್ಣು ಸೇವಾ ಸಮಿತಿ ವತಿಯಿಂದ ಸೆಪ್ಟಂಬರ್ 18 ರಂದು ಸಾಮಾಜಿಕ ಸೇವೆ ಹಾಗೂ ವಿಷ್ಣುಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಟಿ.ಎಸ್.ಕೃಷ್ಣಮೂರ್ತಿ (ಕಿಟ್ಟಿ) ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಳೆದ ಹಲವಾರು ವರ್ಷಗಳಿಂದ ಡಾ.ವಿಷ್ಣು ಸೇನಾ ಸಮಿತಿಯು ತಾಲ್ಲೂಕಿನಲ್ಲಿ ವಿವಿಧ ಸಮಾಜಮುಖಿ ಕಾರ್ಯಕ್ರಮವನ್ನು ನಡೆಸುತ್ತಾ ಬಂದಿದೆ. ಇದರಲ್ಲಿ ಪ್ರಮುಖವಾಗಿ ಸಮಿತಿಯ ಪ್ರಮುಖ ಧ್ಯೇಯೋದ್ದೇಶವಾದ ಸರ್ಕಾರಿ ಶಾಲೆ ಉಳಿಸಿ, ಬೆಳೆಸಿ ಕಾರ್ಯಕ್ರಮದಡಿಯಲ್ಲಿ ತಾಲೂಕಿನ ಸಾಕಷ್ಟು ಸರ್ಕಾರಿ ಶಾಲೆಗಳಿಗೆ ಪಾಠೋಪಕರಣ ವಿತರಣೆ, ಮಕ್ಕಳಿಗೆ ನೋಟ್ ಪುಸ್ತಕ, ಪೆನ್ನು, ಟೈ, ಬೆಲ್ಟ್ ಸೇರಿದಂತೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಗಿದೆ. ಕನ್ನಡ ಶಾಲೆಯ ಉಳಿವು ನಮ್ಮ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಪೋಷಕರಲ್ಲಿ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಮನವಿ ಮಾಡುತ್ತಲೇ ಬಂದಿದ್ದೇವೆ ಎಂದರು.
ಸೆಪ್ಟಂಬರ್ ೧೮ರಂದು ಡಾ.ವಿಷ್ಣುವರ್ಧನ್ ಅವರ 75 ನೇ ಹುಟ್ಟುಹಬ್ಬವನ್ನು ಸೇವೆ ಹಾಗೂ ಮನರಂಜನೆ ಮೂಲಕ ಆಚರಿಸಲು ಸಮಿತಿ ನಿರ್ಧರಿಸಿದೆ. ವಿಷ್ಣುವರ್ಧನ್ ಜನ್ಮದಿನದ ಅಂಗವಾಗಿ ಬೆಳಿಗ್ಗೆ 11 ಗಂಟೆಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಟೈ, ಬೆಲ್ಟ್ ವಿತರಿಸಲಾಗುವುದು. ಸಂಜೆ ತುರುವೇಕೆರೆಯ ರಾಘವೇಂದ್ರ ಭವನ್ ಹೋಟೆಲ್ ಮುಂಭಾಗ ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಸ್ವರ್ಣ ಮೆಲೋಡೀಸ್ ಅವರಿಂದ ವಿಷ್ಣುಗಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ವಿಷ್ಣುಗಾನ ಕಾರ್ಯಕ್ರಮದಲ್ಲಿ ವಿಷ್ಣುವರ್ಧನ್ ಅವರ ಬಗ್ಗೆ ಲೇಖಕ ಎಲ್.ಎನ್.ಪ್ರಸಾದ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಪಪಂ ಅಧ್ಯಕ್ಷೆ ಶೀಲಾಶಿವಪ್ಪನಾಯಕ, ಶಿವಶಕ್ತಿ ಕಲಾವಿದರು ಸಂಸ್ಥೆಯ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ಅವರುಗಳು ಡಾ.ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿಷ್ಣುಗಾನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಷ್ಣುವರ್ಧನ್ ಅಭಿಮಾನಿಗಳು, ಕಲಾವಿದರು, ನಾಗರೀಕರು ಆಗಮಿಸಬೇಕೆಂದು ಕೋರಿದರು.
ಗೋಷ್ಟಿಯಲ್ಲಿ ವಿಷ್ಣು ಸೇನಾ ಸಮಿತಿ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಮಂಜುನಾಥ್, ಸಿದ್ದಲಿಂಗಸ್ವಾಮಿ, ಪರಮೇಶ್, ಸತೀಶ್, ಸ್ವರ್ಣ ಮೆಲೋಡಿಸ್ ನ ಸ್ವರ್ಣಕುಮಾರ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




