ವಿಜಯಪುರ: ರಾಜ್ಯದಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು,ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿನ್ನೆ ಸಂಜೆ ಮುಸುಕುದಾರಿ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಗೆ ನಾಡ ಪಿಸ್ತೂಲ್ ಮತ್ತು ಮಾರಕಾಸ್ತ್ರಗಳನ್ನು ತೋರಿಸಿ ಸಿಬ್ಬಂದಿಯ ಕೈಕಾಲು ಕಟ್ಟಿ ಹಾಕಿ ಬ್ಯಾಂಕ್ ದರೋಡೆ ಮಾಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಖಜಾನೆಯಲ್ಲಿದ್ದ ₹8 ಕೋಟಿ ನಗದು, 50 ಕೆ.ಜಿ ಚಿನ್ನಾಭರಣವನ್ನು ದೋಚಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಇನ್ನಷ್ಟೇ ಪೊಲೀಸರಿಂದ ಈ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಯಬೇಕಿದೆ.
ವಿಜಯಪುರ ಜಿಲ್ಲೆ ಚಡಚಣ ಪಟ್ಟಣದ ಪಂಢರಪುರ ಮುಖ್ಯರಸ್ತೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇನ್ಫಿಯಾ ಶಾಖೆಯಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಇನ್ನೇನು ಕೆಲಸ ಮುಗಿಸಿ ಮನೆಗೆ ಹೊರಡಲು ಸಿದ್ಧವಾಗುತ್ತಿದ್ದ ವೇಳೆ ಸುಮಾರು 7-8 ಮಂದಿ ಮುಸುಕುಧಾರಿಗಳು ಬ್ಯಾಂಕ್ ಒಳನುಗ್ಗಿದ್ದಾರೆ ಎನ್ನಲಾಗಿದೆ.
ಹೀಗೆ ದರೋಡೆ ಮಾಡಿದ ಹಣ ಮತ್ತು ಚಿನ್ನವನ್ನು ಬ್ಯಾಂಕ್ ಬಳಿಯೇ ನಿಲ್ಲಿಸಿದ್ದ ತಮ್ಮ ವಾಹನಗಳಲ್ಲಿ ತುಂಬಿಸಿಕೊಂಡು ದರೋಡೆಕೋರರು ಮಹಾರಾಷ್ಟ್ರದ ಕಡೆಗೆ ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ.ಈ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.




