ಬೆಂಗಳೂರು: ಧರ್ಮ ಒಡೆಯುವ ಕೆಲಸಕ್ಕೆ ರಾಜ್ಯ ಸರಕಾರ ಕೈ ಹಾಕಿದೆ. ಇದೊಂದು ದುರಂತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಯಾವುದೇ ಜಾತಿ, ಸಮಾಜದವರು ಗಣತಿ ವೇಳೆ ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ನಮೂದಿಸಬೇಕು ಎಂದು ಬಿಜೆಪಿಯ ರಾಜಕೀಯ ಚಿಂತನಾ ಶಿಬಿರದಲ್ಲಿ ನಿರ್ಣಯಿಸಿದ್ದೇವೆ ಎಂದು ತಿಳಿಸಿದರು.
ಯಲಹಂಕದ ಸಿಂಗನಾಯಕನಹಳ್ಳಿಯ ರಮಡ ರೆಸಾರ್ಟ್‍ನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಜಕೀಯ ಚಿಂತನಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ವಿವರಿಸಿದರು.
ಜಾತಿ, ಉಪ ಜಾತಿಯನ್ನು ಆಯಾ ಸಮುದಾಯಕ್ಕೆ ಬಿಟ್ಟ ವಿಚಾರ; ಅದನ್ನು ಅವರು ತೀರ್ಮಾನಿಸಬೇಕು ಎಂದರು. ದೇಶ, ರಾಜ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಡಿ ಹಿಂದೂ ಎಂದು ಬರೆಸಲು ವಿನಂತಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಜಾತಿ ಜನಗಣತಿ ಮಾಡಲು ಮುಂದಾಗಿದೆ. ರಾಜ್ಯಗಳಿಗೆ ಜಾತಿ ಜನಗಣತಿ ಅಧಿಕಾರ ಇಲ್ಲದೇ ಇದ್ದರೂ 47 ಹೊಸ ಜಾತಿಗಳನ್ನು ಸೃಷ್ಟಿಸಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ನೇಕಾರ, ಕ್ರಿಶ್ಚಿಯನ್ ಪರಿಶಿಷ್ಟ ಜಾತಿ, ಪಂಗಡ ಎಂದು ಗೊಂದಲ ಸೃಷ್ಟಿ ಮಾಡಿದ್ದಾಗಿ ಆರೋಪಿಸಿದರು.
ಸಿದ್ದರಾಮಯ್ಯರ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂತರಾಜು ವರದಿ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈ ವರದಿ ಅವೈಜ್ಞಾನಿಕ ಎಂದು ನಾವು ವಿರೋಧಿಸಿದ್ದೆವು. ರಾಹುಲ್ ಗಾಂಧಿಯವರು ಹೇಳಿದ್ದಾರೆಂಬ ಕಾರಣಕ್ಕೆ ಕಾಂತರಾಜು ವರದಿಯನ್ನು ಸಿದ್ದರಾಮಯ್ಯನವರ ಸರಕಾರ ಕಸದ ಬುಟ್ಟಿಗೆ ಹಾಕಿತ್ತು ಎಂದು ಆಕ್ಷೇಪಿಸಿದರು. ಹಿಂದೆಯೂ ಸಿದ್ದರಾಮಯ್ಯರ ಸರಕಾರವು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದರು ಎಂದು ಟೀಕಿಸಿದರು.



