ತುರುವೇಕೆರೆ : ಪಟ್ಟಣದ ಹೊರವಲಯದಲ್ಲಿ ಸ್ಥಳೀಯ ಪಟ್ಟಣ ಪಂಚಾಯ್ತಿ ವತಿಯಿಂದ ನಿರ್ಮಿಸಲಾಗಿರುವ ಒಳಚರಂಡಿ ಘಟಕದ ಬಳಿ ಚಿರತೆ ಕಾಣಿಸಿಕೊಂಡಿದ್ದು ನಾಗರೀಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ತುರುವೇಕೆರೆ ತಾಲ್ಲೂಕಿನ ಗೋಣಿತುಮಕೂರು, ದೇವೀಹಳ್ಳಿ, ತಾಳಕೆರೆ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಚಿರತೆ ಕಾಣಿಸಿಕೊಂಡಿರುವುದು, ಮನುಷ್ಯರ ಮೇಲೆ ದಾಳಿ ನಡೆಸಿ ಗಾಯಗೊಳಿಸಿರುವುದು ಹಾಗೂ ನಾಯಿ, ಕುರಿ ಮುಂತಾದ ಪ್ರಾಣೀಗಳನ್ನು ಬಲಿ ಪಡೆದಿರುವುದು ಈಗಾಗಲೇ ವರದಿಯಾಗಿದ್ದು, ಪಟ್ಟಣ ಹಾಗೂ ತಾಲೂಕಿನ ಹಳ್ಳಿಗಳ ಜನತೆ ರಾತ್ರಿ ವೇಳೆ ಸಂಚರಿಸಲು ಭಯಪಡುವಂತಾಗಿರುವ ಸಂದರ್ಭದಲ್ಲಿ ಮತ್ತೊಮ್ಮೆ ತುರುವೇಕೆರೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಭಯ ಮತ್ತಷ್ಟು ಹೆಚ್ಚಳವಾಗಿದೆ.
ಪಟ್ಟಣ ಪಂಚಾಯ್ತಿ ಒಳಚರಂಡಿ ಘಟಕದ ಬಳಿ ಕಾರ್ಮಿಕರು ಜೆಸಿಬಿ ಯಂತ್ರದಲ್ಲಿ ಒಳಚರಂಡಿ ಕಾಮಗಾರಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲೇ ಚಿರತೆ ಎದುರಾಗಿದೆ. ಜೆಸಿಬಿ ಬಳಿಯೇ ಬಂದು ಕೆಲಕಾಲ ಸಂಚರಿಸಿದ ಚಿರತೆ ತದ ನಂತರದಲ್ಲಿ ತೋಟದ ಸಾಲಿನಲ್ಲಿ ಮರೆಯಾಗಿದೆ. ಚಾಲಕ ಪ್ರಾರಂಭದಲ್ಲಿ ಭಯಗೊಂಡರೂ ಧೈರ್ಯಗೆಡದೆ ಸಮಯಪ್ರಜ್ಞೆ ಮೆರೆದು ಜೆಸಿಬಿಯೊಳಗೆ ಸದ್ದಿಲ್ಲದೆ ಕುಳಿತು ಚಿರತೆಯ ಚಲನವಲನಗಳನ್ನು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಚಿರತೆ ಕಣ್ಮರೆಯಾದ ನಂತರ ಆ ಸ್ಥಳದಿಂದ ಚಾಲಕ ಪಟ್ಟಣದೊಳಕ್ಕೆ ಬಂದಿದ್ದಾನೆ. ಜೆಸಿಬಿ ಚಾಲಕನೊಂದಿಗೆ ಮತ್ತೊಬ್ಬ ಕಾರ್ಮಿಕರು ಇದ್ದರೆನ್ನಲಾಗಿದೆ.
ಜೆಸಿಬಿ ಚಾಲಕ ಸೆರೆ ಹಿಡಿದಿದ್ದ ಚಿರತೆ ಹೊರವಲಯದಲ್ಲಿ ಕಾಣಿಸಿಕೊಂಡ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಚಿರತೆ ಭಯದಿಂದ ಆ ಭಾಗದಲ್ಲಿನ ತೋಟ, ಜಮೀನಿನ ಮಾಲೀಕರು, ರೈತರು ತಮ್ಮ ತೋಟದ ಕಡೆ ತಲೆ ಹಾಕಿಲ್ಲ. ಅಲ್ಲದೆ ರೈತರು ಕೂಡಲೇ ಚಿರತೆ ಸೆರೆ ಹಿಡಿದು ನಾಗರೀಕರ ಜೀವ ರಕ್ಷಣೆ ಮಾಡಬೇಕೆಂದು ತಾಲೂಕು ಆಡಳಿತ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಮನವಿ ಮಾಡಿದ್ದಾರೆ.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




