ಗುರುಮಠಕಲ್: ಸರ್ಕಾರ ಸುತ್ತೋಲೆ ಹೊರಡಿಸಿ ಸೆ.20 ರಿಂದ ಅ.7ವರೆಗೆ ದಸರಾ ರಜೆ ಘೋಷಣೆ ಮಾಡಿದ್ದರೂ ಅದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಪಾಲಿಸದೇ ಶಾಲೆ ನಡೆಸುತ್ತಿರುವುದು ಆದೇಶಕ್ಕೆ ಬೆಲೆ ಕೊಡದ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವಂತೆ ಜಯ ಕರ್ನಾಟಕ ಸಂಘಟನೆಯ ತಾಲ್ಲೂಕು ಅಧ್ಯಕ್ಷ ನಾಗೇಶ ಗದ್ದಿಗಿ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸರ್ಕಾರ ರಜೆ ಘೋಷಣೆ ಮಾಡಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಶಾಲೆಗಳು ನಡೆಸುತ್ತಿರುವುದರಿಂದ ಸರ್ಕಾರದ ಆದೇಶದ ಉಲ್ಲಂಘನೆ ಆಗಿದ್ದು, ಶಿಕ್ಷಣ ಸಂಸ್ಥೆಗಳಿಗೆ ಸಂಸ್ಕೃತಿ ಪರಂಪರೆಯ ಜ್ಞಾನವೂ ಇಲ್ಲದಂತೆ ವರ್ತಿಸಿರುವುದು ಸಂಸ್ಥೆಗಳ ಶಿಕ್ಷಣ ಪ್ರಸಾರ ಕಾರ್ಯವನ್ನು ಪ್ರಶ್ನಿಸುವಂತಾಗಿದೆ.
‘ಶಾಸಗಿ ಶಾಲೆಗಳು ಸರ್ಕಾರದ ಆದೇಶ ಚಾಚು ತಪ್ಪದೆ ಪಾಲಿಸುತ್ತೇವೆ ಎಂದು ಲಿಖಿತವಾಗಿ ಬರೆದು ಪರವಾನಿಗೆ ಪಡೆಯುವ ಖಾಸಗಿ ಶಾಲೆಗಳು ನಂತರ ತಮ್ಮದೇ ಕಾನೂನು ಜಾರಿ ಮಾಡಿಕೊಂಡು ಸರ್ಕಾರದ ಆದೇಶವನ್ನು ಉಲ್ಲಂಘಿಸುವುದು ನಿರಂತರ ನಡೆಯುತ್ತಲಿದ್ದು ಈದೀಗ ದಸರಾ ರಜೆಯ ವಿಷಯದಲ್ಲಿಯೂ ಮುಂದುವರೆಸಿದೆ.
ಶಾಲೆಗಳಿಗೆ ದಸರಾ ರಜೆಯ ವೇಳೆ ಇರುವುದರಿಂದ ಕುಟುಂಬ ಸಮೇತ ತಮ್ಮೂರಿಗೆ ತೆರಳಬೇಕು ಎನ್ನುವ ಪಾಲಕರಿಗೆ ಭ್ರಮನಿರಸನವಾಗಿದೆ. ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ರಜೆ ಇಲ್ಲ, ಶಾಲೆಗೆ ಬರಲೇಬೇಕು ಎಂದು ಒತ್ತಡ ಹಾಕುತ್ತಾರೆ. ಮಕ್ಕಳಿಗೆ ಮೊದಲೇ ಪುಸ್ತಕದ ಹೊರೆ ಹೊರಿಸಿ ಅವರ ಸರ್ವಾಂಗೀಣ ವಿಕಾಸಕ್ಕೆ ಸೀಮಿತಗೊಳಿಸಿದ್ದು ಈಗ ರಜೆಯ ಕಾಲದಲ್ಲಿಯೂ ಅವರಿಗೆ ಸಂಸ್ಕೃತಿಕ, ಆಚರಣೆ ಆಚಾರ ವಿಚಾರಗಳಲ್ಲಿ ಭಾಗಿಯಾಗದಂತೆ ಮಾಡುತ್ತಿರುವುದು ಶಿಕ್ಷಣ ಸಂಸ್ಥೆಗಳ ದುಂಡಾವರ್ತನೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ರಜೆ ಕೊಡಬೇಕಾದ ಸಂದರ್ಭದಲ್ಲಿ ಶಾಲೆಯಲ್ಲಿ ಪರೀಕ್ಷೆಗಳನ್ನು ನಿಗದಿಪಡಿಸಿ, ನಿಮ್ಮ ಮಕ್ಕಳು ಶಾಲೆ ಬಿಟ್ಟರೆ ಗೈರು ಹಾಜರಿ ಹಾಕುವ ಬೆದರಿಕೆ ಅಲ್ಲದೇ ಮಕ್ಕಳ ಮೇಲೆ ಪರೀಕ್ಷೆಯ ಭೂತ ಸವಾರಿ ಮಾಡುವಂತೆ ಮಾಡಿರುವುದು ಅಪರಾಧ ಅಷ್ಟೇ ಅಲ್ಲದೇ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶಿಕ್ಷಣ ರೂಪಿಸಬೇಕಾದ ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶ ಉಲ್ಲಂಘನೆ ಮಾಡುವುದಲ್ಲದೇ ಮಕ್ಕಳಿಗೆ ರಜೆಯನ್ನು ಸಜೆಯಾಗಿಸಿರುವುದಕ್ಕೆ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ವರದಿ : ರವಿ ಬುರನೋಳ್




