—————————ಸಮಾಜದ ವಿವಿಧ ಸ್ತರದ ವೃತ್ತಿ ಬಾಂದವರನ್ನು ಗೌರವಿಸುವ ರೋಟರಿ
ತುರುವೇಕೆರೆ: ಸಾಮಾಜಿಕ ಸೇವೆಯ ಜೊತೆಗೆ ಸಮಾಜದ ಎಲ್ಲಾ ವೃತ್ತಿಬಾಂದವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿರುವ ರೋಟರಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ವೈದ್ಯ ಡಾ.ಚೇತನ್ ತಿಳಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ, ಸರ್.ಎಂ.ವಿಶ್ವೇಶ್ವರಯ್ಯ ಜನ್ಮದಿನಾಚರಣೆ, ರಾಷ್ಟ್ರೀಯ ಪ್ರವಾಸ ದಿನ ಹಾಗೂ ರೋಟರಿ ಸದಸ್ಯರ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸಂಘಜೀವಿ, ಪ್ರತಿಯೊಬ್ಬರೂ ಒಬ್ಬರ ನೆರವಿಲ್ಲದೆ ಬದುಕುವುದಕ್ಕೆ ಸಾಧ್ಯವಿಲ್ಲ.
ನಮ್ಮ ಬದುಕಿನಲ್ಲಿ ಶಿಕ್ಷಕ, ವೈದ್ಯ, ಎಂಜಿನಿಯರ್, ಟೈಲರ್, ಬಡಗಿ, ಪೌರಕಾರ್ಮಿಕ, ಕ್ಷೌರಿಕ ಸೇರಿದಂತೆ ಸಮಾಜದ ವಿವಿಧ ಸ್ತರಗಳ ಜನರು ಬೇಕೆ ಬೇಕು. ಅವರು ಮಾಡಿದ ಕೆಲಸಕ್ಕೆ ಇಂತಿಷ್ಟು ಶುಲ್ಕ ನೀಡಿ ಅವರ ಸೇವೆಯನ್ನು ಪಡೆಯುತ್ತೇವೆ. ಅವರ ಸೇವೆಯನ್ನು ಗೌರವಿಸುವ ಕೆಲಸವನ್ನು ಮಾಡುವ ಮಂದಿ ಬಹಳ ಕಡಿಮೆ. ಆದರೆ ರೋಟರಿ ಸಂಸ್ಥೆ ಅವರ ಸೇವೆಯನ್ನು ಗುರುತಿಸಿ ಗೌರವಿಸುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್.ಉಮೇಶ್ ವಹಿಸಿದ್ದರು. ರೋಟರಿ ಸಂಸ್ಥೆಗೆ ನೂತನ ಸದಸ್ಯರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ರೋಟರಿ ಸದಸ್ಯರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಛಾಯಾಗ್ರಾಹಕರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುನಿಲ್, ಲೋಕೋಪಯೋಗಿ ಇಲಾಖೆ ಎಇಇ ಕಣ್ಮಣಿ, ಇಂಜಿನಿಯರ್ ಸತ್ಯನಾರಾಯಣ್, ನಿವೃತ್ತ ಶಿಕ್ಷಕರಾದ ನಂಜುಂಡಪ್ಪ, ಪುಟ್ಟಲಕ್ಷ್ಮಮ್ಮ, ಶಿಕ್ಷಕ ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು.
ರೋಟರಿ ಆರೋಗ್ಯ ಭಾಗ್ಯ ಸಮಿತಿ ನಿರ್ದೇಶಕ ಅಭಿನೇತ್ರಿ ನರಸಿಂಹಮೂರ್ತಿ, ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್, ರೋಟರಿ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತ, ಮಾಜಿ ಅಧ್ಯಕ್ಷ ಅರಳೀಕೆರೆ ಲೋಕೇಶ್, ಕಾರ್ಯದರ್ಶಿ ಸುನಿಲ್ ಸಿ.ಆರ್., ಖಜಾಂಚಿ ಪ್ರಸನ್ನಕುಮಾರ್, ರೋಟರಿ ಪದಾಧಿಕಾರಿಗಳಾದ ಶೋಭಾಉಮೇಶ್, ಲತಾರಾಜಕುಮಾರ್, ತುಕಾರಾಮ್, ಸಂತೋಷ್, ಉಪೇಂದ್ರ ಮುಂತಾದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




