ಸಿರುಗುಪ್ಪ : ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನುಗಳ ಸೇವಾ ಸಮಿತಿ, ವಕೀಲರ ಸಂಘ, ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ಹಿರಿಯ ನಾಗರೀಕರ ದಿನಾಚರಣೆಯ ಕಾರ್ಯಕ್ರಮವನ್ನು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಅಶೋಕ್.ಆರ್.ಹೆಚ್, ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಧಾರ್ಮಿಕವಾಗಿ, ನೈತಿಕವಾಗಿ ಸಮಾಜ ಹಿಂದುಳಿದಿದೆ.
ಇದರಿಂದಾಗಿ ಹಿರಿಯ ನಾಗರೀಕರ ಘನತೆಗೆ ಧಕ್ಕೆಯುಂಟಾಗುತ್ತಿದೆ. ಅವರ ರಕ್ಷಣೆಗಾಗಿ ಕಾನೂನಿನ ಬೆಂಬಲ ಮತ್ತು ಬಲದ ಅವಶ್ಯಕತೆಯಿದೆ.
ನಾಗರೀಕರಿಗೆ ಕಾನೂನಿನ ಅರಿವು ಮೂಡಿಸುವುದು ನ್ಯಾಯಾಂಗ ಹಾಗೂ ವಕೀಲರ ಕರ್ತವ್ಯವಾಗಿರುತ್ತದೆ.
ಆದ್ದರಿಂದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಿರಿಯ ನಾಗರೀಕರ ದಿನಾಚರಣೆಯನ್ನು ಹಮ್ಮಿಕೊಂಡಿದ್ದೇವೆ.
ಇದರ ಉದ್ದೇಶ ಹಿರಿಯ ನಾಗರೀಕರ ಪ್ರಾಮುಖ್ಯತೆ ಮತ್ತು ಅವರ ಹಕ್ಕುಗಳ ಮಾಹಿತಿ ಸಮಾಜಕ್ಕೆ ತಿಳಿಸಬೇಕಾಗಿದೆ.
ಸಮಾಜದಲ್ಲಿ ಹಾಗೂ ಕೌಟುಂಬಿಕವಾಗಿ ಅವರು ಅನುಭವಿಸಬೇಕಾದ ಕೆಲವು ಹಕ್ಕುಗಳೊಂದಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯುವುದು ಸಹ ಹಿರಿಯರ ಹಕ್ಕಾಗಿದ್ದು, ಎಲ್ಲರೂ ಸೌಲಭ್ಯಗಳ ಸದುಪಯೋಗ ಪಡೆಯಬೇಕೆಂದರು.
ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಮಾತನಾಡಿ ಆಧುನಿಕ ಜೀವನದಲ್ಲಿ ತಮ್ಮ ತಂದೆ ತಾಯಿಯರನ್ನು ಸಲಹುವ ಜವಾಬ್ದಾರಿ ನಮ್ಮದಾಗಿದೆ.
ಜೊತೆಗೆ ಚಿಕ್ಕಂದಿನಿಂದಲೇ ನಮ್ಮ ಮಕ್ಕಳಿಗೆ ಹಿರಿಯರ ಪಾಲನೆ ಅರಿವು ಮೂಡಿಸಿದಾಗ ಮಾತ್ರ ನಾವು ಮುಂದಿನ ದಿನಗಳಲ್ಲಿ ವೃದ್ದಾಶ್ರಮಕ್ಕೆ ತೆರಳುವ ಅನಿವಾರ್ಯತೆ ಬರುವುದಿಲ್ಲ ಎಂದರು.
ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಮಾತನಾಡಿ ಸಾಮಾಜಿಕ ಸ್ಥಳಗಳಲ್ಲಿ ಅವರಿಗಾಗಿ ಮೀಸಲಿರುವ ಕೆಲವು ಸ್ಥಾನಮಾನಗಳನ್ನು ನೀಡುವ ಮೂಲಕ ಹಿರಿಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಅದರಂತೆ ಸರ್ಕಾರಿ ಕಚೇರಿಗಳಲ್ಲೂ ಅವರನ್ನ ಆತ್ಮೀಯವಾಗಿ ಬರಮಾಡಿಕೊಂಡು ಆಸನ, ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಅವರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕೆಂದರು.
ಹಾಸ್ಯ ಕಲಾವಿದ, ನಿವೃತ್ತ ಶಿಕ್ಷಕರಾದ ಜೆ.ನರಸಿಂಹಮೂರ್ತಿ ಅವರು ದಿನಾಚರಣೆಯ ಸಂಪನ್ಮೂಲ ಭಾಷಣ ನೀಡಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರೀಕರಿಗೆ ಕಂದಾಯ ಇಲಾಖೆಯಿಂದ ಸಂಧ್ಯಾ ಸುರಕ್ಷಾ ಯೋಜನೆ ಆದೇಶದ ಪ್ರತಿಯನ್ನು ನೀಡಲಾಯಿತು.
ಇದೇ ವೇಳೆ ಸಹಾಯಕ ಸರ್ಕಾರಿ ಅಭಿಯೋಜಕರಾದ ಶಿವರಾಜ್, ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ವಕೀಲರ ಸಂಘದ ಉಪಾಧ್ಯಕ್ಷ ಷರೀಫ್‌ಸಾಬ್.ಎಮ್, ತಾಲೂಕು ಪಂಚಾಯಿತಿ ಇ.ಓ. ಪವನ್‌ಕುಮಾರ್.ಎಸ್.ದಂಡಪ್ಪನವರ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪ್ರದೀಪ್ ಸೇರಿದಂತೆ ಹಿರಿಯ ವಕೀಲರು, ನಾಗರೀಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




