ತುರುವೇಕೆರೆ: ತಾಲೂಕಿನ ಮಾಚೇನಹಳ್ಳಿಯ ಪುರಾತನ ಶ್ರೀ ಆಂಜನೇಯಸ್ವಾಮಿಯ ದೇವಸ್ಥಾನವು ಜೀರ್ಣೋದ್ಧಾರಗೊಂಡು ಉದ್ಘಾಟನೆ ಸಿದ್ದವಾಗಿದ್ದು, ದೇವಸ್ಥಾನದ ಮುಂಭಾಗದಲ್ಲಿ ಗರುಡಗಂಭವನ್ನು ಸೋಮವಾರ ಪ್ರತಿಷ್ಠಾಪಿಸಿ ಧಾರ್ಮಿಕ ಪೂಜಾಕೈಂಕರ್ಯಗಳನ್ನು ನಡೆಸಲಾಯಿತು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರೇಣುಕಾರಾಧ್ಯ ಮಾತನಾಡಿ, ಮಾಚೇನಹಳ್ಳಿ ಗ್ರಾಮದಲ್ಲಿ ಸುಮಾರು 350-400 ವರ್ಷಗಳಿಗೂ ಹಳೆಯದಾದ ಆಂಜನೇಯಸ್ವಾಮಿ ದೇವಾಲಯವಿದ್ದು ಶಿಥಿಲಗೊಂಡಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದ ಸಮಾನ ಮನಸ್ಕರು ಒಗ್ಗೂಡಿ ಸಮಿತಿ ರಚಿಸಿಕೊಂಡು ಭಕ್ತರು, ಗ್ರಾಮಸ್ಥರ ಸಹಕಾರದೊಂದಿಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಲಾಗಿದೆ. ದೇವಾಲಯದ ಜೀರ್ಣೋದ್ದಾರ ಕಾರ್ಯ ಪೂರ್ಣಗೊಂಡಿದ್ದು ಇದೇ ಅಕ್ಟೋಬರ್ 23 ಹಾಗೂ 24 ರಂದು ಶ್ರೀ ಆಂಜನೇಯಸ್ವಾಮಿಯ ನೂತನ ದೇವಾಲಯ ಉದ್ಘಾಟನೆ, ಶಿಲಾರೋಹಣ, ಶಿಖರಕ್ಕೆ ಕಲಶಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

ಅಕ್ಟೋಬರ್ 23 ರಂದು ಸಂಜೆ ಗಣಪತಿ ಪೂಜೆ, ಗಂಗಾ ಪೂಜೆ, ಗೋಪೂಜೆ ನಡೆಸಿ ಈಚನೂರಿನ ಶ್ರೀ ಕೋಡಿಬಸವೇಶ್ವರ ಸ್ವಾಮಿ ಹಾಗೂ ಗ್ರಾಮದೇವತೆ ಶ್ರೀ ಕಾಳಿಕಾಂಬ ದೇವಿಯ ಪುರಪ್ರವೇಶದ ನಂತರ ಪೂಜಾ ಕೈಂಕರ್ಯ ಪ್ರಾರಂಭವಾಗಲಿದೆ. ದೇವಾಲಯದ ಆವರಣದಲ್ಲಿ ಪುಣ್ಯಾಹ, ಧ್ವಜಾರೋಹಣ, ರಕ್ಷೆಘ್ನ ಹೋಮ, ವಾಸ್ತು ಪೂಜೆ, ಪ್ರವೇಶ ಬಲಿ, ಅಂಕುರಾರ್ಪಣ, ರಕ್ಷಾಬಂಧನ ನಡೆಯಲಿದೆ. ರಾತ್ರಿ ಕಲಶಾರಾಧನೆ, ಅಷ್ಟದಿಕ್ಪಾಲಕರ ಪೂಜೆ, ಏಕಾದಶಾ ರುದ್ರ, ಸಪ್ತಸಭಾ ದೇವತೆ, ಮೃತ್ಯುಂಜಯ, ರಾಮಾಸೀತಾಲಕ್ಷ್ಮಣ ಸಮೇತ ಆಂಜನೇಯ ಕಲಶ ಸ್ಥಾಪನೆ ನೆರವೇರಲಿದೆ.
ಅಕ್ಟೋಬರ್ 24 ರಂದು ಶ್ರೀ ಆಂಜನೇಯಸ್ವಾಮಿಗೆ ಜಲಾಧಿವಾಸ, ಧಾನ್ಯಾಧಿವಾಸ, ಪುಷ್ಪಾಧಿವಾಸ, ವಸ್ತ್ರಾಧಿವಾಸ, ಕ್ಷೀರಾಧಿವಾಸ, ಧದ್ನಾಧಿವಾಸ, ಶಯನಾಧಿವಾಸ ಸೇವೆ, ಬೆಳಗಿನ ಜಾವ ಬ್ರಾಹ್ಮೀ ಮಹೂರ್ತದಲ್ಲಿ ಕುಪ್ಪೂರು ತಮ್ಮಡಿಹಳ್ಳಿ ಮಠದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶೀಕೇಂದ್ರ ಮಹಾಸ್ವಾಮೀಜಿಗಳ ಅಮೃತಹಸ್ತದಿಂದ ಶ್ರೀ ಆಂಜನೇಯಸ್ವಾಮಿಯ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಮಹಾರುದ್ರಾಭಿಷೇಕ ನೆರವೇರಲಿದೆ. ಸಂಜೆ ಶಿಖರ ಕಲಶಾರೋಹಣ, ಬಲಿಹರಣ, ವಟುಗಳಿಗೆ ದೀಕ್ಷಾಸಂಸ್ಕಾರ, ರಾತ್ರಿ 8 ಗಂಟೆಗೆ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ ನಡೆಯಲಿದ್ದು, ರಾತ್ರಿ 10 ಗಂಟೆಗೆ ಬೆಟ್ಟದಹಳ್ಳಿ ಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಪೂರ್ಣಾಹುತಿ ಕಾರ್ಯಕ್ರಮ ನೆರವೇರಲಿದೆ. ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರೇಣುಕಾರಾಧ್ಯ, ಕಾರ್ಯದರ್ಶಿ ಸಿದ್ದೇಶ್, ದಯಾನಂದ್, ಗಿರೀಶ್, ಬಸವ, ದರ್ಶನ್, ವಿನಯ್, ಮಹೇಂದ್ರ ಕುಮಾರ್, ದೀಪು, ಜಯಕುಮಾರ್, ರವಿಪಾಟೀಲ್, ಶಿಲ್ಪಿ ಉಮೇಶ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




