
ತುರುವೇಕೆರೆ : ಭಾರತ ದೇಶ ಮಾತ್ರವಲ್ಲ ಇಡೀ ಜಗತ್ತಿನಲ್ಲಿ ಮಾನವೀಯತೆ, ಸಂಸ್ಕಾರ ನೆಲೆಸಲು, ಶಾಂತಿ ಸೌಹಾರ್ದತೆಯಿಂದ ಬಾಳ್ವೆ ನಡೆಸಲು ವಾಲ್ಮೀಕಿ ಮಹರ್ಷಿಗಳು ರಚಿಸಿದ ರಾಮಾಯಣ ಎಂಬ ಮಹಾಕಾವ್ಯ ಮೂಲ ಕಾರಣವಾಗಿದೆ ಎಂದು ತಹಸೀಲ್ದಾರ್ ಕುಂಇ ಅಹಮದ್ ತಿಳಿಸಿದರು.
ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಾಲ್ಮೀಕಿ ಮಹರ್ಷಿಗಳು ಮರ್ಯಾದಾ ಪುರುಷೋತ್ತಮ ಎಂಬ ಬಿರುದಾಂಕಿತ ಶ್ರೀರಾಮಚಂದ್ರನ ಜೀವನ ಚರಿತ್ರೆಯನ್ನು ರಾಮಾಯಣದ ಮೂಲಕ ನಮ್ಮ ಕಣ್ಣಿಗೆ ಕಟ್ಟುವ ಹಾಗೆ ಚಿತ್ರಿಸಿಕೊಟ್ಟಿದ್ದಾರೆ. ಸಾಮಾಜಿಕ, ಮಾನವೀಯ ಚಿಂತನೆಯ ಮೂಲಕ ಎಲ್ಲರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದ ಅವರು, ರತ್ನಾಕರ ಎಂಬ ವ್ಯಕ್ತಿಯು ನಾರದ ಮಹರ್ಷಿಯ ಆರ್ಶೀವಾದದಿಂದ ವಾಲ್ಮೀಕಿ ಮಹರ್ಷಿಯಾಗಿ ಬದಲಾಗಿ ಅಪಾರ ಜ್ಞಾನ ಸಂಪತ್ತನ್ನು ಪಡೆದು ರಾಮಾಯಣ ಎಂಬ ಮಹಾಕಾವ್ಯವನ್ನು ರಚಿಸಿ, ಆ ಕಾವ್ಯದ ಮೂಲಕ ಇಂದಿಗೂ ಜನಸಾಮಾನ್ಯರ ಬದುಕಿನಲ್ಲಿ ಆದರ್ಶನೀಯ ಪೂಜನೀಯ ವ್ಯಕ್ತಿಯಾಗಿ ಸ್ಥಾನ ಪಡೆದಿರುವುದು ದೈವಸಂಕಲ್ಪ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಮಾತನಾಡಿ, ಮಹರ್ಷಿ ವಾಲ್ಮೀಕಿಯವರ ರಾಮಾಯಣವೇ ಈಗಿನ ಸಂವಿಧಾನಕ್ಕೆ ಸ್ಪೂರ್ತಿಯಾಗಿದೆ. ಶಾಂತಿ, ಸೌಹಾರ್ದತೆ, ಸಹಬಾಳ್ವೆ, ದಾಂಪತ್ಯ, ಸಹೋದರತೆ, ಪಿತೃವಾಕ್ಯ ಪರಿಪಾಲನೆ, ರಾಮರಾಜ್ಯ, ಏಕಪತ್ನೀವ್ರತ, ಸಾಮಾಜಿಕ ಸಮಾನತೆ, ಮಾನವೀಯ ಮೌಲ್ಯಗಳು, ಸಂಸ್ಕಾರ, ಭಕ್ತಿ, ಸಮಾಜ ಹೇಗಿರಬೇಕು, ಕುಟುಂಬ ಹೇಗಿರಬೇಕು ಎಂಬ ಪರಿಕಲ್ಪನೆಯನ್ನು ರಾಮಾಯಣದ ಮೂಲಕ ಈ ಸಮಾಜಕ್ಕೆ ನೀಡಿದ್ದಾರೆ. ಮಹರ್ಷಿ ವಾಲ್ಮೀಕಿಯವರ ಜಯಂತಿ ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಅವರ ಆದರ್ಶಗಳು, ಸಂದೇಶಗಳು ಇಡೀ ಸಮಾಜದ ಪ್ರತಿಯೊಂದು ಸಮುದಾಯಕ್ಕೂ ಮಾರ್ಗರ್ದರ್ಶಿಯಾಗಿದೆ ಎಂದರು.
ಪಟ್ಟಣದ ಶ್ರೀ ಉಡುಸಲಮ್ಮ ದೇವಸ್ಥಾನದಿಂದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದವರೆಗೆ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಜಾನಪದ ಕಲಾತಂಡಗಳು, ಮಂಗಳೂರಿನ ಶಿವಕುಮಾರ್ ಕಲಾತಂಡದ ಹುಲಿವೇಷದ ಕುಣಿತದೊಂದಿಗೆ ಕರೆತರಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ತುಮುಲ್ ನಿರ್ದೇಶಕ ಮಹಲಿಂಗಯ್ಯ ವಹಿಸಿದ್ದರು. ಶಿಕ್ಷಕಿ ಜಲಜಾಕ್ಷಿ ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಮಾಜದ ನಿವೃತ್ತ ನೌಕರರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ವಸಂತಕುಮಾರ್, ಗೌರವಾಧ್ಯಕ್ಷ ಶಂಕರಯ್ಯ, ಉಪಾಧ್ಯಕ್ಷ ಕೃಷ್ಣಪ್ಪ, ಕಾರ್ಯದರ್ಶಿ ಮುದ್ದುಮಾರನಹಳ್ಳಿ ಶಿವಣ್ಣ, ಸಹಕಾರ್ಯದರ್ಶಿ ಮುನಿರಾಜು, ನಿವೃತ್ತ ಎಇಒ ಸೋಮಶೇಖರಯ್ಯ, ಪಪಂ ಅಧ್ಯಕ್ಷೆ ಶೀಲಾಶಿವಪ್ಪನಾಯಕ, ಪಪಂ ಸದಸ್ಯೆ ಜಯಮ್ಮ, ಜಿಪಂ ಮಾಜಿ ಸದಸ್ಯರಾದ ಎ.ಬಿ.ಜಗದೀಶ್, ಲೀಲಾವತಿಗಿಡ್ಡಯ್ಯ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆಂಪರಾಜು, ಪಪಂ ಮಾಜಿ ಅಧ್ಯಕ್ಷ ವಿಜಯೇಂದ್ರಕುಮಾರ್, ಪಶುವೈದ್ಯಾಧಿಕಾರಿ ರೇವಣಸಿದ್ದಪ್ಪ, ನಿವೃತ್ತ ಪ್ರಾಂಶುಪಾಲ ಆನಂದರಾಜು, ಕೊಪ್ಪನಾಗೇಶ್, ಮಂಜುನಾಥ್, ದೊಡ್ಡೇನಹಳ್ಳಿ ಸ್ವಾಮಿ, ನರಸಿಂಹಮೂರ್ತಿ, ಕಾಂತರಾಜು ಸೇರಿದಂತೆ ವಾಲ್ಮೀಕಿ ಸಮಾಜದ ಬಾಂದವರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




