ತುರುವೇಕೆರೆ: ಪಟ್ಟಣದ ಅಭಿವೃದ್ದಿಗೆ ಹಾಗೂ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿಯೊಂದಿಗೆ ಸಂಘ ಸಂಸ್ಥೆಗಳು, ನಾಗರೀಕರು ಕೈಜೋಡಿಸಬೇಕೆಂದು ಪಟ್ಟಣ ಪಂಚಾಯ್ತಿ ಕಂದಾಯ ನಿರೀಕ್ಷಕ ಪ್ರಶಾಂತ್ ಭದ್ರಣ್ಣನವರ್ ತಿಳಿಸಿದರು.
ತುರುವೇಕೆರೆ ರೋಟರಿ ಕ್ಲಬ್ ವತಿಯಿಂದ ಪಟ್ಟಣ ಪಂಚಾಯ್ತಿಗೆ ಪ್ಲಾಸ್ಟಿಕ್ ಘನತ್ಯಾಜ್ಯ ವಸ್ತು ಶೇಖರಣೆಗೆಂದು ನೀಡಲಾದ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಡಬ್ಬಿ ಸ್ವೀಕರಿಸಿ ಮಾತನಾಡಿದ ಅವರು, ಪಟ್ಟಣದ ಸರ್ವತೋಮುಖ ಅಭಿವೃದ್ದಿಯಲ್ಲಿ ನಾಗರೀಕರ ಪಾತ್ರ ಬಹಳ ದೊಡ್ಡದು. ಪಟ್ಟಣವನ್ನು ಸುಂದರವಾಗಿಟ್ಟುಕೊಳ್ಳುವುದರಿಂದ ನಾಗರೀಕರ ಆರೋಗ್ಯ ಚೆನ್ನಾಗಿರುತ್ತದೆ. ನಾಗರೀಕರೇ ಎಲ್ಲೆಂದರಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಡುವುದರಿಂದ ಪಟ್ಟಣದ ಅಂದ ಹದಗೆಡುತ್ತದೆ ಹಾಗೂ ನಮ್ಮ ನಿಮ್ಮೆಲ್ಲರ ಆರೋಗ್ಯವೂ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯ್ತಿ ಈಗಾಗಲೇ ತುರುವೇಕೆರೆಯನ್ನು ಸ್ವಚ್ಛವಾಗಿಡಲು ಪ್ರತಿ ವಾರ್ಡಿಗೆ ಕಸ ಸಂಗ್ರಹಣೆಗಾಗಿ ಪೌರಕಾರ್ಮಿಕರನ್ನು ಮನೆಬಾಗಿಲಿಗೆ ಕಳಿಸಿ ಕಸ ಸಂಗ್ರಹಿಸಲಾಗುತ್ತಿದೆ. ಇದಲ್ಲದೆ ಅಂಗಡಿ ಮುಂಗಟ್ಟು, ವ್ಯಾಪಾರಸ್ಥರಿಂದಲೂ ಸಹ ವಾಹನಗಳಲ್ಲಿ ಕಸ ಸಂಗ್ರಹ ಮಾಡಲಾಗುತ್ತಿದೆ. ಆದರೂ ವ್ಯಾಪಾರಸ್ಥರು, ನಾಗರೀಕರು ರಸ್ತೆಯ ಮೂಲೆಗಳಲ್ಲಿ ಕಸ ಎಸೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಪೌರಕಾರ್ಮಿಕರ ಬಳಿ ನಿಮ್ಮ ಮನೆಯ, ಅಂಗಡಿಯ ತ್ಯಾಜ್ಯ ವಸ್ತುಗಳನ್ನು ನೀಡಿ ನಿಮ್ಮ ಊರನ್ನು ಸ್ವಚ್ಛವಾಗಿಡಲು ಸಹಕರಿಸಿ ಎಂದರು.

ಪಟ್ಟಣ ಪಂಚಾಯ್ತಿಗೆ ಕಸ ಸಂಗ್ರಹಣೆಗೆ, ಪೌರಕಾರ್ಮಿಕರ ಆರೋಗ್ಯ ತಪಾಸಣೆ ಸೇರಿದಂತೆ ಹತ್ತಾರು ರೀತಿಯಲ್ಲಿ ಸಂಘ ಸಂಸ್ಥೆಗಳು ಸಾಕಷ್ಟು ಅಗತ್ಯ ಸಹಕಾರವನ್ನು ನೀಡುತ್ತಿವೆ. ಈ ಪೈಕಿ ರೋಟರಿ ಕ್ಲಬ್ ಮುಂಚೂಣಿಯಲ್ಲಿ ನಿಂತು ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಲು ಅನುಕೂಲವಾಗಲೆಂದು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಡಬ್ಬಿಯನ್ನು ನೀಡಿದ್ದು, ಪಟ್ಟಣ ಪಂಚಾಯ್ತಿ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಡಬ್ಬಿಗಳನ್ನು ಜನಸಂದಣಿ ಹೆಚ್ಚಿರುವ ಸ್ಥಳಗಳಲ್ಲಿ ಇಟ್ಟು ಪ್ಲಾಸ್ಟಿಕ್ ವಸ್ತುಗಳು, ಬಾಟಲ್ ಗಳನ್ನು ಈ ಸಂಗ್ರಹ ಡಬ್ಬಿಯಲ್ಲಿ ಹಾಕುವಂತೆ ನಾಗರೀಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಪಂ ಸದಸ್ಯ ಅಂಜನ್ ಕುಮಾರ್, ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್.ಉಮೇಶ್, ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್, ರೋಟರಿ ಪದಾಧಿಕಾರಿಗಳಾದ ಅಭಿನೇತ್ರಿ ನರಸಿಂಹಮೂರ್ತಿ, ಸಂತೋಷ್, ಉಪೇಂದ್ರ, ರಂಗನಾಥ್, ಪಪಂ ಅಧಿಕಾರಿ ನರಸಿಂಹಮೂರ್ತಿ, ಪೌರಕಾರ್ಮಿಕರ ಮೇಸ್ತ್ರೀ ಯೋಗೀಶ್ ಸೇರಿದಂತೆ ನಾಗರೀಕರು, ಪೌರಕಾರ್ಮಿಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




