——————————————-ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ
ತುರುವೇಕೆರೆ: ಖಿನ್ನತೆಯು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದಲ್ಲದೆ ದೈಹಿಕ ಆರೋಗ್ಯ ಮತ್ತು ವ್ಯಕ್ತಿಗಳ ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಮನೋರೋಗವನ್ನು ನಿರ್ಲಕ್ಷ್ಯ ಮಾಡಬಾರದು ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀನಾರಾಯಣ್ ತಿಳಿಸಿದರು.

ಪಟ್ಟಣದ ಲಯನ್ಸ್ ಭವನದಲ್ಲಿ ಬೆಂಗಳೂರು ನಿಮ್ಹಾನ್ಸ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವ್ಯಕ್ತಿಯ ಮಾನಸಿಕ ಯೋಗಕ್ಷೇಮದ ಪ್ರಾಮುಖ್ಯತೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.
ವಿಜ್ಞಾನ, ತಂತ್ರಜ್ಞಾನ ಮುಂದುವರೆದಂತೆಲ್ಲಾ ಯುವ ಪೀಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿಹೋಗಿದ್ದಾರೆ. ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚು ಆಲೋಚಿಸುವುದು, ಬದುಕೇ ಮುಗಿಯಿತು ಎಂದು ಆತ್ಮಹತ್ಯೆ ಮಾಡಿಕೊಳ್ಳುವುದು ನಡೆಯುತ್ತಿದೆ. ಇದಕ್ಕೆಲ್ಲಾ ಮಾನಸಿಕವಾಗಿ ಸದೃಢರಲ್ಲದಿರುವುದೇ ಕಾರಣವಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿದ್ದಲ್ಲಿ ಎಂತಹ ಸಮಸ್ಯೆಗಳನ್ನಾದರೂ ಎದುರಿಸಬಲ್ಲ ಶಕ್ತಿ ನಮ್ಮಲ್ಲಿ ಉಂಟಾಗುತ್ತದೆ. ಯುವ ಪೀಳಿಗೆ ಮಾನಸಿಕ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಿರುವುದು ದೇಶದ ಭವಿಷ್ಯದ ದೃಷ್ಟಿಯಿಂದ ಆತಂಕದ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಡಿ.ನಾಗರಾಜ್ ಮಾತನಾಡಿ, ಮಾನಸಿಕ ಆರೋಗ್ಯವನ್ನು ರಕ್ಷಿಸುವಂತಹ ಕಾರ್ಯಕ್ರಮವನ್ನು ತುರುವೇಕೆರೆ ತರುವಲ್ಲಿ ಅಂದಿನ ಶಾಸಕರು, ಲಯನ್ಸ್ ಕ್ಲಬ್ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಪಾತ್ರ ಬಹಳ ದೊಡ್ಡದು. ಅಂದು ಅವರುಗಳು ಮಾಡಿದ ಪ್ರಯತ್ನದಿಂದ ಇಂದು ತುರುವೇಕೆರೆ ತಾಲ್ಲೂಕಿನಲ್ಲಿ ಮಾನಸಿಕವಾಗಿ ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಮನೆಬಾಗಿಲಿನಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುವಂತಾಗಿದೆ ಎಂದರು.
ನಿಮ್ಹಾನ್ಸ್ ಮಾಜಿ ನಿರ್ದೇಶಕ ಡಾ.ಬಿ.ಎನ್.ಗಂಗಾಧರ್ ಮಾತನಾಡಿ, ಮಾನಸಿಕ ಆರೋಗ್ಯವನ್ನು ಬಲಪಡಿಸುವ ರಾಷ್ಟ್ರೀಯ ಪ್ರಯತ್ನಗಳ ಸಂದರ್ಭದಲ್ಲಿ, ಎಲ್ಲರ ಮಾನಸಿಕ ಯೋಗಕ್ಷೇಮವನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಸ್ಥಿತಿಗಳನ್ನು ಹೊಂದಿರುವ ಜನರ ಅಗತ್ಯಗಳನ್ನು ಪೂರೈಸುವುದು ಸಹ ಅತ್ಯಗತ್ಯ ಎಂದರು.
ನಿಮ್ಹಾನ್ಸ್ ಸಮುದಾಯ ಆರೋಗ್ಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ಮಾತನಾಡಿ, 2009 ರಿಂದ ನಮ್ಮ ನಿಮ್ಹಾನ್ಸ್ ಸಂಸ್ಥೆಯು ತಾಲೂಕು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತುರುವೇಕೆರೆ ತಾಲೂಕಿನಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸಾ ಸೇವೆಯನ್ನು ಒದಗಿಸುತ್ತಾ ಬಂದಿದೆ. ತಾಲೂಕಿನಲ್ಲಿ ಸುಮಾರು 300 ಕ್ಕೂ ಅಧಿಕ ಮಂದಿ ಮಾನಸಿಕ ರೋಗಿಗಳಿದ್ದು, ಈ ಪೈಕಿ ಸುಮಾರು 200 ಮಂದಿಗೆ ಆರೋಗ್ಯ ಇಲಾಖೆಯ ಮಾನಸಿಕ ಆಪ್ತ ಸಮಾಲೋಚಕರಾದ ಹರೀಶ್ ಅವರು ಮನೆಬಾಗಿಲಿಗೆ ತೆರಳಿ ಚಿಕಿತ್ಸೆ, ಮಾರ್ಗದರ್ಶನ ನೀಡಿ ಬರುತ್ತಿರುವುದನ್ನು ಸಂಸ್ಥೆ ಶ್ಲಾಘಿಸುತ್ತದೆ. ಮಾನಸಿಕ ಆರೋಗ್ಯದ ಬಗ್ಗೆ ಮಾಹಿತಿಗಾಗಿ 14416 ಗೆ ಉಚಿತವಾಗಿ ಕರೆ ಮಾಡಿ ಸಲಹೆ ಸೂಚನೆಗಳನ್ನು ಪಡೆಯಬಹುದಾಗಿದೆ ಎಂದರು.
ಸಮಾರಂಭದಲ್ಲಿ ತುರುವೇಕೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ಪರಮೇಶ್ವರಯ್ಯ, ಕಾರ್ಯದರ್ಶಿ ಡಾ.ಎ.ನಾಗರಾಜ್, ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಧನಪಾಲ್, ನಿಮ್ಹಾನ್ಸ್ ಸಮುದಾಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕಿ ಡಾ.ಆರತಿಜಗನ್ನಾಥನ್, ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕ ಡಾ.ಶನಿವಾರಂ ರೆಡ್ಡಿ, ಮನೋವೈದ್ಯರಾದ ಡಾ.ಸ್ಮಿತಾ ದೇಶಪಾಂಡೆ, ಡಾ.ಜನಾರ್ಧನ್, ನಿಮ್ಹಾನ್ಸ್ ಪ್ರಾಧ್ಯಾಪಕ ಡಾ.ಹೇಮಂತ್ ಭಾರ್ಗವ್, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ.ರವೀಂದ್ರ ನಾಯಕ್, ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ರಂಗನಾಥ್, ಶಿಶು ಅಭಿವೃದ್ದಿ ಯೋಜನಾಧಿಕಾರಿ ವೆಂಕಟಪ್ಪ, ತಾಲೂಕು ಆರೋಗ್ಯ ಕೇಂದ್ರದ ಮಾನಸಿಕ ಆಪ್ತಸಮಾಲೋಚಕ ಡಿ.ಎಂ. ಹರೀಶ್, ವಿಕಲಚೇತನ ಇಲಾಖೆಯ ಎಂಆರ್ಡಬ್ಲ್ಯೂ ಶಿವಶಂಕರ್, ನಿಮ್ಹಾನ್ಸ್ ಸಿಬ್ಬಂದಿಗಳಾದ ದೇವಯ್ಯ, ಪೂನಂ ಸಿಂಗ್, ಮೇಘನಾ, ರೂಪಾ, ಯಶೋಧ, ಭವ್ಯ, ಶ್ರೀನಿವಾಸ್ ಸೇರಿದಂತೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ




