ಬೆಂಗಳೂರು:ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸಲಾಗಿದ್ದು, ಶೇ.33ರಷ್ಟು ಅಂಕ ಪಡೆದವರನ್ನು ತೇರ್ಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆಯಬೇಕು. ಪ್ರತಿ ವಿಷಯದಲ್ಲೂ ಲಿಖಿತ/ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ನಿಯಮವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಅನ್ವಯ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.




