ಸಿರುಗುಪ್ಪ : ನಗರದ ತಾಲೂಕು ಪಂಚಾಯಿತಿ ಕಛೇರಿಯಲ್ಲಿ ಜಿಲ್ಲಾ ಪಂಚಾಯಿತಿ, ಮೀನುಗಾರಿಕೆ ಇಲಾಖೆ, ಸಹಯೋಗದಲ್ಲಿ ಮಂಗಳವಾರ ಸಾಯಂಕಾಲ ನಡೆದ ಉಚಿತ ಮೀನುಮರಿ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಬಿ.ಎಮ್.ನಾಗರಾಜ ಅವರು ಫಲಾನುಭವಿ ರೈತರಿಗೆ ಮೀನುಮರಿಗಳ ವಿತರಣೆ ಮಾಡಿದರು.
ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಣ್ಣ ಅವರು ಮಾತನಾಡಿ 2025-26 ಜಿಲ್ಲಾ ಪಂಚಾಯಿತಿಯ ಯೋಜನೆಯಂತೆ ಕನಿಷ್ಟ 5ರಿಂದ 6 ಅಡಿ ಆಳವಿರುವ ಕೃಷಿ ಹೊಂಡಗಳಿಗೆ ಮೀನುಮರಿಗಳ ವಿತರಣೆ ಮಾಡಿದಲ್ಲಿ ರೈತರಿಗೆ ಜಮೀನು ಕೃಷಿಯ ಜೊತೆಗೆ ಮೀನುಕೃಷಿಯು ಆಗಲಿದೆಂಬ ಉದ್ದೇಶದಿಂದ ಮರಿಗಳ ವಿತರಣೆ ಮಾಡಲಾಗುತ್ತಿದೆ.
ಕೃಷಿ ಇಲಾಖೆಯ ಪ್ರಕಾರ ಒಟ್ಟು 156 ಕೃಷಿ ಹೊಂಡದಂತಹ ಕೆರೆಗಳಿರುವ ಮಾಹಿತಿಯಿದ್ದು, ಇಂದು ಸಾಂಕೇತಿಕವಾಗಿ ಮೊಟ್ಟ ಮೊದಲನೆಯದಾಗಿ ಶಾಸಕರಿಂದ 15ಜನ ರೈತರಿಗೆ ತಲಾ 500 ಗೆಂಡೆ ಮೀನುಮರಿಗಳ ಕಿಟ್ ವಿತರಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಇನ್ನುಳಿದ ಪಹಣಿ ಮತ್ತು ಸ್ವಂತ ಜಮೀನಿನಲ್ಲಿ ಕೃಷಿ ಹೊಂಡಗಳಿರುವ ರೈತರಿಗೆ ಸೂಕ್ತ ಮಾಹಿತಿ ನೀಡಿ ವಿತರಿಸಲಾಗುವುದು.
ಉದ್ದೇಶವಿಷ್ಟೇ ಮೀನು ಒಂದು ಉತ್ತಮ ಪೌಷ್ಟಿಕ ಆಹಾರವಾಗಿದ್ದು, ದಾನ್ಯಗಳ ಜೊತೆಗೆ ರೈತರಿಗೆ ಹಾಗೂ ಸಾರ್ವಜನಿಕರಿಗೆ ಪೌಷ್ಟಿಕವಾದ ಮೀನುಮಾಂಸ ದೊರೆಯಲೆಂಬುದಾಗಿದೆ.
ಬಳ್ಳಾರಿಯು ರಾಜ್ಯದಲ್ಲಿ ಅತಿಹೆಚ್ಚು ಮೀನು ಉತ್ಪನ್ನ ಮಾಡುವ ಜಿಲ್ಲೆಯಾಗಿದ್ದು. ತಾಲೂಕಿನಲ್ಲಿ ತುಂಗಾಭದ್ರ ನದಿಯುವ 60 ಕಿ.ಮೀ ಭಾಗದಲ್ಲಿ ಹರಿಯುತ್ತಿದೆ.
ಇನ್ನು ವೇದಾವತಿ ನದಿಯು ಹರಿಯುತ್ತಿದೆ. ಗುಂಡಿಗನೂರು ಮತ್ತು ಮಾಳಾಪುರ ಕೆರೆಗಳು, ಹಾಗೂ 170 ಖಾಸಗಿ ರೈತರ ಕೆರೆಗಳು ಸೇರಿ 145 ಹೆಕ್ಟೇರ್ ಮೀನುಗಾರಿಕೆ ಪ್ರದೇಶವಿದೆ. ಎಲ್ಲಾ ರೈತರು ಮೀನುಗಾರಿಕೆಯ ಸದುಪಯೋಗ ಪಡೆಯಬೇಕು ಎಂದರು.
ಇದೇ ವೇಳೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್‌ಕುಮಾರ್.ಎಸ್.ದಂಡಪ್ಪನವರ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಕುಮಾರಿ ಭಾವನಾ, ನಗರಸಭೆ ಸದಸ್ಯ ಹೆಚ್.ಗಣೇಶ ಸೇರಿದಂತೆ ಇನ್ನಿತರ ಮುಖಂಡರು ರೈತರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




