ಮೊಳಕಾಲ್ಮುರು: ಬಡವರ ಹಸಿವು ನೀಗಿಸಬೇಕಿದ್ದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಕಳ್ಳಕಾಕರ ಪಾಲಾಗುತ್ತಿದೆ. ಆದರೆ ಪೊಲೀಸರ ಭರ್ಜರಿ ಬೇಟೆಯಿಂದ ಕಳ್ಳರು ಲಾಕ್ ಆಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡಿಪುರ ಗ್ರಾಮದಲ್ಲಿ ಸರ್ಕಾರಿ ಸಮುದಾಯ ಭವನದಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಅನ್ಯ ರಾಜ್ಯಕ್ಕೆ ಲಾರಿಯಲ್ಲಿ ಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ಮೊಳಕಾಲ್ಮೂರು ಪೊಲೀಸ್ ಠಾಣೆಯ ಪಿಎಸ್ ಐ ಮಹೇಶ್ ಲಕ್ಷ್ಮಣ್ ಹೊಸಪೇಟೆ ಅಕ್ರಮ ದಾಸ್ತಾನು ಕೇಂದ್ರದ ಮೇಲೆ ರೈಡ್ ಮಾಡಿದ್ದಾರೆ.

ಪೊಲೀಸರ ದಾಳಿ ವೇಳೆ ಅಪಾರ ಪ್ರಮಾಣದಲ್ಲಿ ಅಕ್ಕಿ ಇರುವುದು ಪತ್ತೆಯಾಗಿದೆ, ತಾಲೂಕಿನಲ್ಲಿ ಈಗಾಗಲೇ ಸಾಕಷ್ಟು ಕಡೆ ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಮತ್ತೆ ಮತ್ತೆ ತಾಲೂಕಿನಲ್ಲಿ ಅಕ್ರಮ ಅಕ್ಕಿ ಸಾಗಾಣಿಕೆಯ ಹೊಸ ಪ್ರಕರಣಗಳು ಬಯಲಿಗೆ ಬರುತ್ತಿರುವುದು ನಿಜಕ್ಕೂ ಕೂಡ ದುರದೃಷ್ಟಕರ ಸಂಗತಿ, ಮೊಳಕಾಲ್ಮುರು ತಾಲೂಕಿನಲ್ಲಿ ಬಡ ಜನರೇ ಹೆಚ್ಚು ಇದ್ದಾರೆ , ಇಂತಹ ತಾಲೂಕಿನಲ್ಲಿ ಬಡವರ ಹಸಿವು ನೀಗಿಸಬೇಕಾದ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವುದು ಇಲ್ಲಿನ ಅಧಿಕಾರಿಗಳಿಗೆ ತಿಳಿದೇ ಇಲ್ಲವೇ!? ಅಥವಾ ಎಲ್ಲವು ಗೊತ್ತಿದ್ದೂ ಅಕ್ರಮ ಅಕ್ಕಿ ಸಾಗಾಣಿಕೆಗೆ ಅಧಿಕಾರಿಗಳೇ ಕಳ್ಳ ಕಾಕರಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎನ್ನುವ ಅನುಮಾನ ಜನರಲ್ಲಿ ಮೂಡಿದೆ. ಜನ ಇರುವ ಪ್ರದೇಶಗಳಲ್ಲಿಯೇ ಅಕ್ರಮ ಅಕ್ಕಿ ಸಂಗ್ರಹ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಟ್ಟಿನಲ್ಲಿ ಬಡವರ ಕೂಲಿ ಕಾರ್ಮಿಕರ ಅನ್ನಕ್ಕೂ ಕೂಡ ಕನ್ನ ಆಗುತ್ತಿರುವುದು ಎತ್ತ ಸಾಗುತ್ತಿದೆ ಸಮಾಜ ಎನ್ನುವಂತಾಗಿದೆ.
ವರದಿ: ಪಿ.ಎಂ. ಗಂಗಾಧರ




