ಕಾಗವಾಡ : ಒಂದು ಹೆಜ್ಜೆ ಸ್ವಚ್ಛತೆಯ ಕಡೆಗೆ” ಎಂಬ ಘೋಷವಾಕ್ಯವನ್ನು ಅಂಗೀಕರಿಸಿಕೊಂಡು, ಕಾಗವಾಡದ ಶಿವಾನಂದ ಕಾಲೇಜಿನ ಎನ್ಸಿಸಿ ಘಟಕವು ಎನ್ ಸಿ ಸಿ ಅಧಿಕಾರಿಗಳಾದ ಲೇ.ಅಶೋಕ ಅಳಗುಂಡಿ ಅವರ ಮಾರ್ಗದರ್ಶನದಲ್ಲಿ ಮಂಗಾವತಿ ಗ್ರಾಮವನ್ನು ದತ್ತು ತೆಗೆದುಕೊಂಡು ಸಮುದಾಯ ಅಭಿವೃದ್ಧಿ ಉಪಕ್ರಮಕ್ಕೆ ಭಾವುಕ ಚಾಲನೆ ನೀಡಿದೆ. ಈ ಕಾರ್ಯಕ್ರಮದ ಮೂಲಕ ಗ್ರಾಮದಲ್ಲಿ ಸ್ವಚ್ಛತೆ, ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆ ವಿರೋಧಿ ಜಾಗೃತಿಗೆ ಬಲ ನೀಡಲಾಯಿತು.
ಈ ಮಹತ್ವದ ಉಪಕ್ರಮಕ್ಕೆ ಪ್ರಾರಂಭದ ಉತ್ಸಾಹ ನೀಡಿದವರು ಪ್ರಾಚಾರ್ಯ ಡಾ. ಎಸ್. ಪಿ. ತಳವಾರ. ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳು ಮತ್ತು ರಾಷ್ಟ್ರೀಯ ಸೇವೆಯ ಮಹತ್ವ ಬೋಧಿಸಿದರು.
ಈ ಸಂದರ್ಭದಲ್ಲಿ ಮಂಗಾವತಿ ಗ್ರಾಮದಲ್ಲಿನ ನಿವೃತ್ತ ಮತ್ತು ಕೆಲಸ ಮಾಡುತ್ತಿರುವ ನೌಕರರು ಗ್ರಾಮ ಕಲ್ಯಾಣ ಸಂಘ ಅಧ್ಯಕ್ಷರಾದ ಮತ್ತು ಗೋವಾದ ನಿವೃತ್ತ ಪ್ರಾಚಾರ್ಯರಾದ ಡಾ. ಆರ್. ಪಾಟೀಲ ಅವರು ಎನ್ಸಿಸಿ ಕೆಡೆಟ್ಗಳಿಗೆ ಸಮುದಾಯ ಅಭಿವೃದ್ಧಿಯ ಕುರಿತು ಉತ್ತಮ ಮಾಹಿತಿಯನ್ನು ನೀಡುತ್ತಾ ಪ್ರೋತ್ಸಾಹಿಸಿದರು.
ಅವರು ಗ್ರಾಮಾಭಿವೃದ್ಧಿಯಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದೆಂದು ಹೇಳಿದರು.ಶಿವಾನಂದ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎಸ್. ಎಸ್. ಬಾಗನೆ ಅವರು ತಮ್ಮ ಉಪನ್ಯಾಸದಲ್ಲಿ “ಶ್ರಮದಾನವೇ ನಿಜವಾದ ದೇಶ ಸೇವೆಯ ಮಾರ್ಗ” ಎಂದು ಹೇಳಿದರು.
ದೈನಂದಿನ ಜೀವನದಲ್ಲಿ ಸ್ವಚ್ಛತೆಯ ಅವಶ್ಯಕತೆ ಕುರಿತು ಮಾತನಾಡಿದರು.
ಈ ಸಂಧರ್ಭದಲ್ಲಿ ಸಂಪೂರ್ಣ ಮಂಗಾವತಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಜರುಗಿಸಲಾಯಿತು. ಎನ್ಸಿಸಿ ಕೆಡೆಟ್ಗಳು ನಾಲ್ಕು ಗಂಟೆಗಳ ಕಾಲ ಶ್ರಮದಾನ ಮಾಡುತ್ತಾ ರಸ್ತೆ, ಶಾಲಾ ಪರಿಸರ ಹಾಗೂ ಸಾರ್ವಜನಿಕ ಸ್ಥಳಗಳನ್ನು ಶುದ್ಧಗೊಳಿಸಿದರು. ಜೊತೆಗೆ, ಪ್ಲಾಸ್ಟಿಕ್ ಬಳಕೆ ವಿರೋಧಿ ಜಾಗೃತಿಕುರಿತುಜಾಥಾಸಹಆಯೋಜಿಸಲಾಯಿತು.
ಈ ಜಾಥಾದಲ್ಲಿ ವಿದ್ಯಾರ್ಥಿಗಳು ಘೋಷವಾಕ್ಯಗಳು ಹಾಗೂ ಫಲಕಗಳ ಮೂಲಕ “ಪ್ಲಾಸ್ಟಿಕ್ ಮುಕ್ತ ಗ್ರಾಮ”, “ಸ್ವಚ್ಛ ಗ್ರಾಮ, ಸುಂದರ ಗ್ರಾಮ”, “ನಮ್ಮ ಆರೋಗ್ಯ, ನಮ್ಮ ಹೊಣೆಗಾರಿಕೆ” ಮುಂತಾದ ಸಂದೇಶಗಳನ್ನು ನೀಡಿದರು.
ಈ ಕಾರ್ಯಕ್ರಮಕ್ಕೆ ಮಂಗಾವತಿಯ ನಿವೃತ್ತ ಮತ್ತು ಕೆಲಸ ಮಾಡುತ್ತಿರುವ ನೌಕರರು ಗ್ರಾಮ ಕಲ್ಯಾಣ ಸಂಘದ ಅಶೋಕ್ ದೇಸಿಂಗೆ, ಕೆ.ಕೆ. ಸುಂಥೆ, ಪ್ರೊ. ಜೆ.ಕೆ. ಪಾಟೀಲ್ ಹಾಗೂ, ಗ್ರಾಮ ಪಂಚಾಯತ್, ಮತ್ತು ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಲಭಿಸಿತು. ಇವರ ಸಹಕಾರದಿಂದ ಈ ಅಭಿಯಾನ ಮತ್ತಷ್ಟು ಯಶಸ್ವಿಯಾಗಿ ನಡೆಯಿತು. ಕಾರ್ಯಕ್ರಮದ ಕೊನೆಗೆ ಎನ್ಸಿಸಿ ಘಟಕವು ಮುಂದಿನ ದಿನಗಳಲ್ಲಿ ಮಂಗಾವತಿ ಗ್ರಾಮದಲ್ಲಿ ಇನ್ನೂ ಹಲವು ಸಮಾಜಮುಖಿ ಉಪಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವುದಾಗಿ ಘೋಷಣೆ ನೀಡಿತು. ಈ ಸಂಪೂರ್ಣ ಉಪಕ್ರಮದಿಂದ ಗ್ರಾಮಸ್ಥರಲ್ಲಿ ಹೊಸ ಉತ್ಸಾಹ ಮೂಡಿದ್ದು, ಎನ್ಸಿಸಿ ಕೆಡೆಟ್ಗಳಿಗೆ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವದ ಸಂಸ್ಕಾರ ಬೇಕಾಗಿರುವುದು ಸ್ಪಷ್ಟವಾಗಿದೆ ಎಂದು ಈ ಅಭಿಯಾನದಿಂದ ಮನವರಿಕೆ ಆಯಿತು.
ವರದಿ : ಚಂದ್ರಕಾಂತ ಕಾಂಬಳೆ




