——————————–ಜಿಲ್ಲಾ ನ್ಯಾಯಾಧೀಶರಿಂದ ಗೌರವ ಸಮರ್ಪಣೆ
ಸಾರ್ವಜನಿಕ ಆಸ್ತಿ-ಪಾಸ್ತಿ ಸಂರಕ್ಷಣೆಯ ಕರ್ತವ್ಯದ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಣೆ ಮೂಲಕ ಚಾಮರಾಜನಗರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ನೂತನವಾಗಿ ನಿರ್ಮಿಸಿರುವ ರಾಜ್ಯದಲ್ಲಿಯೇ ಅತೀ ಎತ್ತರದ ಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಜಿ. ಪ್ರಭಾವತಿ ಅವರು ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಈ ಬಾರಿ ಜಿಲ್ಲೆಯಲ್ಲಿ ಹುತಾತ್ಮರ ದಿನವನ್ನು ವಿಶೇಷವಾಗಿ ಆಚರಿಸುವ ಸಲುವಾಗಿ ರಾಜ್ಯದಲ್ಲಿಯೇ ಅತಿ ಎತ್ತರದ (ದೇಶದಲ್ಲಿ ೨ನೇಯದು) ಪೊಲೀಸ್ ಸ್ಮಾರಕವನ್ನು ಚಾಮರಾಜನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕವಾಯತು ಮೈದಾನದಲ್ಲಿ ಖ್ಯಾತ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಒಡೆತನದ ಕ್ಯಾಂಪಾ ಕೋಲಾ ಬೇವರೇಜ್ ಕಂಪನಿ ನೆರವಿನೊಂದಿಗೆ ನೂತನವಾಗಿ ನಿರ್ಮಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ. ಕವಿತಾ ಅವರು ಹೇಳಿದರು.
ಈ ಸಂದರ್ಭದಲ್ಲಿ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕರಾದ ಬಿ. ಭಾಸ್ಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಪೊಲೀಸ್ ಅಧಿಕಾರಿಗಳು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹುತಾತ್ಮರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ೩ ಸುತ್ತು ಗುಂಡು ಹಾರಿಸಲಾಯಿತು. ೨ ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಬಳಿಕ ಪೊಲೀಸ್ ಬ್ಯಾಂಡ್ನಿಂದ ಶತಶತಮಾನಗಳ ಚಿರನೂತನ ‘ಅಬಾಯ್ಡ್ ವಿತ್ ಮಿ’ ಗೀತೆ ನುಡಿಸಲಾಯಿತು.
ವರದಿ: ಸ್ವಾಮಿ ಬಳೇಪೇಟೆ



