ಚೇಳೂರು : ಗ್ರಾಮ ಪಂಚಾಯತಿ ವತಿಯಿಂದ 15ನೇ ಹಣಕಾಸು ಯೋಜನೆಯಡಿ ತಾಲೂಕಿನ ನಾರೆಮದ್ದೇಪಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವಪುರ ಗ್ರಾಮದ ದಲಿತರ ಕೇರಿಯಲ್ಲಿ ಕೈಗೊಂಡಿರುವ ಸಿಸಿ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಬೀದಿಯ ಕೊನೆಯಲ್ಲಿರುವ ವೃದ್ಧ ದಂಪತಿಯ ಮನೆಯ ಮುಂದೆ ರಸ್ತೆ ಕಾಮಗಾರಿ ಪೂರ್ಣಗೊಳಿಸದಿರುವುದರಿಂದ ಕೊಳಚೆ ಹಾಗೂ ಮಳೆ ನೀರು ನಿಂತು ಅವ್ಯವಸ್ಥೆಯ ಆಗರವಾಗಿದೆ.

ಇದರಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುವಂತಾಗಿದೆ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಈ ಬೀದಿಯಲ್ಲಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ವೃದ್ಧ ದಂಪತಿಗಳಾದ ಮ್ಯಾಕಲ ನರಸಿಂಹಪ್ಪ,ನರಸಮ್ಮ ಅವರ ಮನೆಯ ಮುಂಭಾಗದ ವರೆಗೆ ರಸ್ತೆ ನಿರ್ಮಿಸಿ, ಉಳಿದ ಕೆಲವೇ ಅಡಿಗಳ ಕಾಮಗಾರಿಯನ್ನು ಪೂರ್ಣಗೊಳಿಸದೆ ಹಾಗೆಯೇ ಬಿಡಲಾಗಿದೆ. ಇದರ ಪರಿಣಾಮವಾಗಿ, ಇಡೀ ಬೀದಿಯ ಉಪಯೋಗಿಸಿದ ಕೊಳಚೆ ನೀರು ಮತ್ತು ಮಳೆ ನೀರು ಈ ದಂಪತಿಗಳ ಮನೆಯ ಮುಂದೆ ನಿಂತು ‘ಕೆರೆ’ಯಂತಾಗಿದೆ.
ಚರಂಡಿ ನಿರ್ಮಿಸದೆ ಅವೈಜ್ಞಾನಿಕ ಕಾಮಗಾರಿ : ಸಿಸಿ ರಸ್ತೆ ನಿರ್ಮಾಣದ ಮೊದಲು ಬೀದಿಯ ನೀರಿನ ಸಮರ್ಪಕ ವಿಲೇವಾರಿಗಾಗಿ ಚರಂಡಿ ನಿರ್ಮಿಸಬೇಕಿತ್ತು. ಆದರೆ, ಅಧಿಕಾರಿಗಳು ಯಾವುದೇ ಚರಂಡಿ ನಿರ್ಮಾಣ ಮಾಡದೆ ಕೇವಲ ಸಿಸಿ ರಸ್ತೆ ಕಾಮಗಾರಿ ಮಾಡಿ ಕೈತೊಳೆದುಕೊಂಡಿದ್ದಾರೆ. ಈ ಅವೈಜ್ಞಾನಿಕ ಕಾಮಗಾರಿಯಿಂದಾಗಿ ನೀರು ಮುಂದೆ ಹರಿಯದೆ ದಂಪತಿಗಳ ಮನೆಯ ಮುಂದೆಯೇ ನಿಲ್ಲುವಂತಾಗಿದೆ.
ಸೊಳ್ಳೆ ಕಾಟದಿಂದ ಜ್ವರ, ಆಸ್ಪತ್ರೆಗೆ ದಾಖಲು : ರಾತ್ರಿ ಸಮಯದಲ್ಲಿ ನಿಂತ ನೀರಿನಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಇದರ ಪರಿಣಾಮವಾಗಿ ವೃದ್ಧೆ ನರಸಿಂಹಪ್ಪ ಅವರಿಗೆ ಜ್ವರ ಬಂದು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ಬಂದೊದಗಿದೆ.
ಈ ಕುರಿತು ಮಾತನಾಡಿರುವ ವೃದ್ಧ ದಂಪತಿಗಳು, “ಇತ್ತೀಚಿಗೆ ನಮ್ಮ ಬೀದಿಯಲ್ಲಿ ಸಿಸಿ ರಸ್ತೆ ಮಾಡುವಾಗ, ಕಾಮಗಾರಿ ಮಾಡಿಸುವ ಸದಸ್ಯರನ್ನು ಕೇಳಿದ್ದಕ್ಕೆ, 15 ದಿನ ಕಾಲಾವಕಾಶ ಕೊಡಿ, ರಸ್ತೆ ಹಾಕಿಸಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಮೂರು ತಿಂಗಳು ಕಳೆದರೂ ಯಾರೂ ಬಂದಿಲ್ಲ. ಇದರಿಂದ ನಮ್ಮ ಮನೆಯ ಮುಂದೆ ಮಳೆ ನೀರು ಮತ್ತು ಚರಂಡಿ ನೀರು ನಿಂತು ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದೇವೆ” ಎಂದು ಕಣ್ಣೀರು ಹಾಕಿದರು.
ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಮಧ್ಯಪ್ರವೇಶಿಸಿ, ಅರ್ಧಕ್ಕೆ ನಿಂತಿರುವ ಸಿಸಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಿ, ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ದಲಿತರ ಕೇರಿಯ ನಿವಾಸಿಗಳು ಆಗ್ರಹಿಸಿದ್ದಾರೆ.
ವರದಿ :ಯಾರಬ್. ಎಂ.




