ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಭಾನುವಾರ ವಾಯುಗುಣಮಟ್ಟವು ‘ಗಂಭೀರ’ ಮಟ್ಟದಲ್ಲಿ ಮಲಿನಗೊಂಡಿದ್ದು, ದೆಹಲಿ ನಗರದ ಸುತ್ತಮುತ್ತ ವಾಯುಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 421ಕ್ಕೆ ಏರಿಕೆಯಾಗಿದೆ. ಅಲ್ಲದೇ ನಗರದಲ್ಲಿ ಗೋಚರತೆ ಗುಣಮಟ್ಟವೂ ಕ್ಷೀಣಿಸಿದೆ.
ದೀಪಾವಳಿಯ ವೇಳೆ ಕಳಪೆ ಹಾಗೂ ಅತಿ ಕಳಪೆ ಮಟ್ಟದಲ್ಲಿದ್ದ ವಾಯುಗುಣಮಟ್ಟವು ಇದೀಗ ಗಂಭೀರ ಮಟ್ಟದಲ್ಲಿದ್ದು, ಹೆಚ್ಚು ಆತಂಕಕ್ಕೆ ಕಾರಣವಾಗಿದೆ.
ಇನ್ನು ಈ ಗಂಭೀರ ಪರಿಸ್ಥಿತಿ ಬಗ್ಗೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ವಾದ್ರಾ ಕಳವಳ ವ್ಯಕ್ತಪಡಿಸಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಕ್ಕೆ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ. ಮಾಲಿನ್ಯ ನಿಯಂತ್ರಿಸಲು ಸರ್ಕಾರ ಕೈಗೊಳ್ಳುವ ಕ್ರಮಕ್ಕೆ ನಮ್ಮ ನೆರವೂ ಇರಲಿದೆ ಎಂದು ಹೇಳಿದ್ದಾರೆ.




