ಬೆಳಗಾವಿ: ‘ಅಭಿವೃದ್ಧಿಯಲ್ಲಿ ತಾರತಮ್ಯ ನಿವಾರಿಸಬೇಕು ಇಲ್ಲವೇ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು’ ಎಂದು ಆಗ್ರಹಿಸಿ ಕಾಗವಾಡದ ಕಾಂಗ್ರೆಸ್ ಶಾಸಕ ಭರಮಗೌಡ (ರಾಜು) ಕಾಗೆ ಅವರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದರು.
ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ರಾಜ್ಯ ಬೇಡಿಕೆ ವಿಚಾರ ಪ್ರಸ್ತಾಪ ಮಾಡಲಾಗುವುದು.
ಹೋರಾಟದ ನೇತೃತ್ವ ನಾನೇ ವಹಿಸುವೆ. ಈ ಭಾಗದ ಎಲ್ಲ ಶಾಸಕರೂ ನನ್ನ ಜೊತೆ ಇದ್ದಾರೆ ಎಂದು ಪತ್ರ ಬರೆದಿದ್ದೇನೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಅಭಿವೃದ್ಧಿ ವಿಷಯದಲ್ಲಿ ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕ ತೀರ ಹಿಂದುಳಿದಿದೆ. ದಕ್ಷಿಣ ಭಾಗಕ್ಕೆ ತೋರಿಸುವ ವಿಶೇಷ ಕಾಳಜಿ ಉತ್ತರಕ್ಕೆ ಏಕಿಲ್ಲ? ಎಲ್ಲರೂ ಕನ್ನಡನಾಡಿನ ಮಕ್ಕಳೇ. ಆದರೂ ಏಕೆ ಹೀಗೆ ಮಲತಾಯಿ ಧೋರಣೆ’ ಎಂದೂ ಅವರು ಪ್ರಶ್ನಿಸಿದರು.ಶಾಸಕ ಕಾಗೆ ಅವರು ಈ ಹಿಂದೆಯೂ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು.




