ಬಾಗಲಕೋಟ:- ಜಿಲ್ಲೆಯಲ್ಲಿ ಕಬ್ಬಿನ ಬೆಲೆ ನಿಗದಿಗಾಗಿ ರೈತರು ನಡೆಸುತ್ತಿರುವ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.
ಮುಧೋಳದಲ್ಲಿ ಇಂದು ಸಂಪೂರ್ಣ ಸ್ಥಬ್ಧತೆ ಕಾಣುವ ಸಾಧ್ಯತೆ ಇದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳು ಹಾಗೂ ವ್ಯವಹಾರ ಸಂಸ್ಥೆಗಳು ಬಂದ್ ಆಗುವ ಸಾಧ್ಯತೆಯಿದೆ.
ಜಿಲ್ಲಾಧಿಕಾರಿ ಹಾಗೂ ಎಸ್‌ಪಿಗಳ ಸಂಧಾನ ಪ್ರಯತ್ನಗಳು ನಿರಂತರ ವಿಫಲವಾಗಿದ್ದು, ರೈತರ ಅಸಮಾಧಾನ ಹೆಚ್ಚಾಗಿದೆ.
ಕಬ್ಬಿಗೆ ಪ್ರತಿಟನ್ ₹3500 ಬೆಲೆ ನಿಗದಿ ಆಗುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ರೈತರು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೋರಾಟಗಾರರು ಮುಧೋಳದಲ್ಲಿ ಭಾರೀ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ನಿರ್ಧರಿಸಿದ್ದಾರೆ.
ಕಾರ್ಖಾನೆ ಮಾಲೀಕರ ಮಧ್ಯೆ ಒಮ್ಮತದ ಕೊರತೆಯಿಂದ ಪರಿಸ್ಥಿತಿ ಗೊಂದಲಮಯವಾಗಿದ್ದು, ಚಳುವಳಿ ಮತ್ತಷ್ಟು ಉಗ್ರಗೊಂಡಿದೆ. ರೈತರ ಹೋರಾಟಕ್ಕೆ ವ್ಯಾಪಾರಿಗಳು ಹಾಗೂ ವಿವಿಧ ಸಂಘಟನೆಗಳು ಸಹ ಬೆಂಬಲ ಸೂಚಿಸಿರುವುದರಿಂದ ಚಳುವಳಿ ಬಲಿಷ್ಠಗೊಂಡಿದೆ.
ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಮುಧೋಳದಲ್ಲಿ ಭದ್ರತೆಗಾಗಿ ಪೊಲೀಸ್ ಇಲಾಖೆಯು ಹದ್ದಿನ ಕಣ್ಣು ಇಟ್ಟಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚುವರಿ ಸಿಬ್ಬಂದಿಯನ್ನು ವಿವಿಧ ಜಿಲ್ಲೆಗಳಿಂದ ಕರೆತರಲಾಗಿದೆ.




