ಬೀದರ್: ಬೆಂಗಳೂರು ದರೋಡೆ ಪ್ರಕರಣ ಬೆನ್ನಲ್ಲೇ ಜಿಲ್ಲೆಯ ಬಸವಕಲ್ಯಾಣದಲ್ಲಿ ಮತ್ತೊಂದು ದರೋಡೆ ಕೇಸ್ ಬೆಳಕಿಗೆ ಬಂದಿದೆ.
ಸಸ್ತಾಪುರ ಬಂಗ್ಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಗುಂತಕರ ಗುಂಪು ಕಾರು ಪಂಚರ್ ಮಾಡಿ ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಲೂಟಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಸಾಂಗವಿ ಜಿಲ್ಲೆಯ ಯೇಥಗಾಂವ್ ಗ್ರಾಮದ ಆರು ಜನರು ತಮ್ಮ ಸಂಬಂಧಿಕರ ಮದುವೆ ರಿಶಪ್ಶನ್‌ಗಾಗಿ ಹೈದ್ರಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದರು.
ಪ್ರವೀಣ ನಾಥ ಜರಗ ತಮ್ಮ ಕುಟುಂಬದವರ ಜತೆ ಜ.18ರಂದು ರಾತ್ರಿ ಗ್ರಾಮದಿಂದ ಹೊರಟಿದ್ದು, ಬುಧವಾರ ಬೆಳಗ್ಗೆ 5ರ ಸುಮಾರಿಗೆ ಸಸ್ತಾಪುರದ ದರ್ಗಾ ಬಳಿ ಎನ್‌ಎಚ್ 65ರಲ್ಲಿ ಡಿವೈಡರ್ ಬಳಿ ನಿಂತಿದ್ದ ವ್ಯಕ್ತಿ ಜಾಕ್ ಎಸೆದಿದ್ದು, ಟೈರ್ ಸಿಡಿದು ಕಾರು ನಿಂತಿದೆ.
ನಂತರ ಏಳೆಂಟು ಜನ ಖದೀಮರು ಕಾರು ಸುತ್ತುವರೆದು, ಅದರಲ್ಲಿದ್ದ ಪ್ರಯಾಣಿಕರಿಗೆ ಚಾಕು ಮತ್ತು ಬಡಿಗೆ ತೋರಿಸಿ 23.90 ಲಕ್ಷ ರೂ. ಮೌಲ್ಯದ 223 ಗ್ರಾಂ ಚಿನ್ನಾಭರಣ ಮತ್ತು 1.60 ಲಕ್ಷ ರೂ. ನಗದು ದರೋಡೆ ಮಾಡಿದ್ದಾರೆ.
ಮುಖಕ್ಕೆ ಮಾಸ್ಕ ಹಾಕಿಕೊಂಡಿದ್ದ ದರೋಡೆಕೊರರು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪ್ರವೀಣ ನಾಥ ಜರಗ ಅವರ ದೂರಿನ ಮೇರೆಗೆ ಬಸವಕಲ್ಯಾಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ತನಿಖೆ ಮುಂದುವರೆಸಿದ್ದಾರೆ.




