Ad imageAd image

ಡಿಜಿಟಲ್ ಜಾಹೀರಾತು ಫಲಕಕ್ಕೆ ಲಾರಿ ಢಿಕ್ಕಿ : ತಪ್ಪಿದ ಅನಾಹುತ

Bharath Vaibhav
ಡಿಜಿಟಲ್ ಜಾಹೀರಾತು ಫಲಕಕ್ಕೆ ಲಾರಿ ಢಿಕ್ಕಿ : ತಪ್ಪಿದ ಅನಾಹುತ
WhatsApp Group Join Now
Telegram Group Join Now

ಬಾಣಸಂದ್ರ ರಸ್ತೆ ನೇರಕ್ಕೆ ಫಲಕ ನಿರ್ಮಾಣಕ್ಕೆ ಪಪಂ ಅನುಮತಿ ಸರಿಯೇ..??

ಪ್ರಮುಖ ವೃತ್ತಗಳಲ್ಲಿ ಅಪಘಾತಗಳ ಸರಮಾಲೆ ಕಣ್ಮುಚ್ಚಿ ಕುಳಿತ ತಾಲೂಕು ಆಡಳಿತ..!

ತುರುವೇಕೆರೆ : ಪಟ್ಟಣದ ವಾಣಿಜ್ಯ ಸಂಕೀರ್ಣ ವೃತ್ತದಲ್ಲಿ ಬಾಣಸಂದ್ರ ರಸ್ತೆಯಿಂದ ಬಂದ ಆಲೂಗೆಡ್ಡೆ ತುಂಬಿದ್ದ ಲಾರಿಯೊಂದು ನೇರವಾಗಿ ಡಿಜಿಟಲ್ ಜಾಹೀರಾತು ಫಲಕಕ್ಕೆ ಗುದ್ದಿ (ಢಿಕ್ಕಿ) ಫಲಕ ಜಖಂಗೊಳಿಸಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಅದೃಷ್ಟವಶಾತ್ ಇದೇ ಡಿಜಿಟಲ್ ಜಾಹೀರಾತು ಫಲಕದ ಕೆಳಗೆ ಹೂವಿನ ವ್ಯಾಪಾರಸ್ಥರು ಪ್ರತಿನಿತ್ಯ ವ್ಯಾಪಾರ ಮಾಡುತ್ತಿದ್ದು, ಬೆಳಗಿನ ಜಾವವಾದ್ದರಿಂದ ವ್ಯಾಪಾರಸ್ಥರಾರೂ ಅಲ್ಲಿರಲಿಲ್ಲ. ಇದ್ದಿದ್ದರೆ ದೊಡ್ಡ ಅನಾಹುತ, ಸಾವು ನೋವು ಸಂಭವಿಸುವ ಸಾಧ್ಯತೆಗಳಿತ್ತು. ಇದಲ್ಲದೆ ಫಲಕದ ಹಿಂಭಾಗ ಆಟೋ ನಿಲ್ದಾಣ, ಅದರ ಹಿಂದೆ ಶಾಲೆಯ ಕಾಂಪೌಂಡ್, ಕಾಂಪೌಂಡ್ ಒಳಗೆ ವಿದ್ಯುತ ಪರಿವರ್ತಕ ಸಹ ಇತ್ತು. ಫಲಕಕ್ಕೆ ಢಿಕ್ಕಿ ಹೊಡೆದ ಲಾರಿಯು ಫಲಕದ ಬೃಹತ್ ಕಂಬ ಹಾಗೂ ಪಕ್ಕದಲ್ಲಿದ್ದ ಮರದ ಕಾರಣ ಲಾರಿ ನಿಂತಿದೆ. ಇಲ್ಲವಾಗಿದ್ದಲ್ಲಿ ಶಾಲಾ ಕಾಂಪೌಂಡ್ ಒಡೆದು ವಿದ್ಯುತ್ ಪರಿವರ್ತಕಕ್ಕೆ ಢಿಕ್ಕಿ ಹೊಡೆಯುವ ಸಾಧ್ಯತೆಗಳಿದ್ದವು. ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ಡಿಜಿಟಲ್ ಫಲಕವು ಬಾಗಿದ್ದು ವಿದ್ಯುತ್ ತಂತಿಯ ಮೇಲೆ ಬಿದ್ದಿದೆ. ಆಲೂಗೆಡ್ಡೆ ಮೂಟೆಗಳನ್ನು ಹೊತ್ತಿದ್ದ ಲಾರಿಯು ರಾಜಸ್ಥಾನ ನೋಂದಣಿಯದ್ದಾಗಿದ್ದು, ಮೈಸೂರಿಗೆ ತೆರಳುತ್ತಿತ್ತು ಎನ್ನಲಾಗಿದ್ದು, ಲಾರಿ ಚಾಲಕನು ನಿದ್ರೆಯ ಮಂಪರಿನಲ್ಲಿ ಫಲಕಕ್ಕೆ ಗುದ್ದಿದ್ದಾನೋ ಅಥವಾ ಫಲಕದಲ್ಲಿನ ಬೆಳಕು ಲಾರಿ ಚಾಲಕನ ದೃಷ್ಟಿಗೆ ತಗುಲಿ ಚಾಲಕ ನಿಯಂತ್ರಣ ಕಳೆದುಕೊಂಡು ಲಾರಿ ನೇರ ಫಲಕಕ್ಕೆ ಢಿಕ್ಕಿ ಹೊಡೆಯಿತೋ ಕಾರಣ ತಿಳಿಯದಾಗಿದೆ.

ಪಟ್ಟಣದ ಬಾಣಸಂದ್ರ ರಸ್ತೆ, ಮಾಯಸಂದ್ರ ರಸ್ತೆ, ತಹಸೀಲ್ದಾರ್ ಕಛೇರಿ ವೃತ್ತದಲ್ಲಿ ಬೀದಿ ಬದಿಯಲ್ಲಿ ನೂರಾರು ಮಂದಿ ವ್ಯಾಪಾರ ಮಾಡುತ್ತಿರುವುದು, ರಸ್ತೆಯ ಇಕ್ಕೆಲಗಳಲ್ಲೇ ವಾಹನಗಳು ಪಾರ್ಕಿಂಗ್ ಮಾಡುವುದು, ಪಾದಚಾರಿ ಮಾರ್ಗಗಳು ಖಾಸಗಿ ಅಂಗಡಿಗಳ ನಾಮಫಲಕ, ಅಂಗಡಿ ಸಾಮಾನು ಇಡಲು ಬಳಕೆಯಾಗಿರುವುದು ಪ್ರಮುಖ ರಸ್ತೆಗಳು ಕಿರಿದಾಗಲು ಕಾರಣವಾಗಿದೆ. ಪಟ್ಟಣದಲ್ಲಿ ಸಂಚಾರಿ ವ್ಯವಸ್ಥೆ ಹದಗೆಟ್ಟು ಅಪಘಾತಗಳು ಸಂಭವಿಸುತ್ತಿದ್ದರೂ ಜನಪ್ರತಿನಿಧಿಗಳಾಗಲೀ, ಅಧಿಕಾರಿಗಳಾಗಲೀ, ಪೊಲೀಸ್ ಇಲಾಖೆಯಾಗಲೀ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಕಣ್ಣು ಕಾಣದವರಂತೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿರುವುದು ಶೋಚನೀಯ ಸಂಗತಿಯಾಗಿದೆ.

ಇಂದು ಬಾಣಸಂದ್ರ ರಸ್ತೆಯಿಂದ ಬಂದ ಲಾರಿಯು ಡಿಜಿಟಲ್ ಜಾಹೀರಾತು ಫಲಕಕ್ಕೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ಇದೇ ಮೊದಲೇನಲ್ಲ. ಈ ರೀತಿಯ ಅಪಘಾತಗಳು ಇದೇ ವೃತ್ತದಲ್ಲಿ ಸಾಕಷ್ಟು ಬಾರಿ ನಡೆದಿದೆ. ಆದರೂ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಪಟ್ಟಣ ಪಂಚಾಯ್ತಿ, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡಿಲ್ಲ. ಈ ಹಿಂದೆ ಇದೇ ವಾಣಿಜ್ಯ ಸಂಕೀರ್ಣ, ತಾಲೂಕು ಕಛೇರಿ ಮಧ್ಯೆ ಇರುವ ರಸ್ತೆ ವಿಭಜಕಕ್ಕೆ ಡಸ್ಟರ್ ಕಾರೊಂದು ಸಂಜೆ ವೇಳೆ ಜನಸಂದಣಿ ಹೆಚ್ಚು ಇದ್ದಾಗಲೇ ಡಿವೈಡರ್ ಗೆ ಢಿಕ್ಕಿ ಹೊಡೆದಿತ್ತು. ಕೆಲವು ತಿಂಗಳ ಹಿಂದೆ ತಿಪಟೂರು ರಸ್ತೆಯಿಂದ ಬಂದ ಆಫೆ ಆಟೋ ಒಂದು ನಿಯಂತ್ರಣ ತಪ್ಪಿ ರಾಘವೇಂದ್ರ ಭವನ್ ಹೋಟೆಲ್ ಮುಂಭಾಗ ಪಟ್ಟಣ ಪಂಚಾಯ್ತಿ ಹಾಕಿದ್ದ ಕಬ್ಬಿಣದ ಕಂಬಗಳಿಗೆ ಢಿಕ್ಕಿ ಹೊಡೆದು, ಕಂಬ ಮುರಿದುಕೊಂಡು ಬಂದು ಹೋಟೆಲ್ ಮುಂಭಾಗ ನಿಂತಿತ್ತು. ಸತ್ಯಗಣಪತಿ ಜಾತ್ರೆ ವೇಳೆ ಮಾಯಸಂದ್ರ ರಸ್ತೆಯಿಂದ ಬಂದ ಲಾರಿಯೊಂದು ಬ್ರೇಕ್ ಫೇಲ್ ಮುನ್ನುಗ್ಗಿ ಬಂದರೂ ಚಾಲಕನ ಸಮಯಪ್ರಜ್ಞೆಯಿಂದ ಇದೇ ವೃತ್ತದಲ್ಲಿ ಲಾರಿ ಆಫ್ ಆಗಿ ನಿಂತಿದ್ದರಿಂದ ಪ್ರಾಣಾಪಾಯ ಆಗಿರಲಿಲ್ಲ.

ಇಷ್ಟೊಂದು ಅಪಘಾತಗಳು ಮಾಯಸಂದ್ರ, ಬಾಣಸಂದ್ರ ವೃತ್ತ, ತಿಪಟೂರು, ದಬ್ಭೇಘಟ್ಟ ವೃತ್ತದಲ್ಲಿ ನಡೆಯುತ್ತಿದ್ದರೂ ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಕಣ್ಮುಚ್ಚಿ ಕುಳಿತಿರುವುದು ನಾಗರೀಕರ ಆಕ್ರೋಶಕ್ಕೆ ಕಾರಣವಾಗಿದೆ. ಯಾವುದೇ ಪಟ್ಟಣ, ನಗರಗಳಲ್ಲಿ ರಸ್ತೆಗೆ ಎದುರಾಗಿ ಜಾಹೀರಾತು ಫಲಕಗಳಿಗೆ ಸ್ಥಳೀಯ ಆಡಳಿತ ಪರವಾನಗಿ ನೀಡಿಲ್ಲ. ಆದರೆ ತುರುವೇಕೆರೆ ಪಟ್ಟಣ ಪಂಚಾಯ್ತಿಯು ಬಾಣಸಂದ್ರ ರಸ್ತೆಗೆ ನೇರವಾಗಿ ಡಿಜಿಟಲ್ ಜಾಹೀರಾತು ಫಲಕ ಸ್ಥಾಪಿಸಲು ಅನುಮತಿ ನೀಡಿದೆ ಎನ್ನಲಾಗಿದೆ. ಡಿಜಿಟಲ್ ಫಲಕದಿಂದ ಹೊರಬರುವ ಬೆಳಕಿನ ಪ್ರತಿಫಲನಗಳು ನೇರವಾಗಿ ವಾಹನ ಚಾಲಕರ ಕಣ್ಣಿಗೆ ರಾಚುವುದರಿಂದ ಚಾಲಕ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿರುತ್ತದೆ. ಇಂತಹ ಸಾಮಾನ್ಯ ವಿಚಾರವನ್ನು ಅರಿಯದೆ ರಸ್ತೆಗೆ ನೇರವಾಗಿ ಫಲಕ ಅಳವಡಿಕೆಗೆ ಅನುಮತಿ ನೀಡಿದ್ದು ಪಟ್ಟಣ ಪಂಚಾಯ್ತಿಯ ತಪ್ಪಾಗಿದೆ. ಬೀದಿಬದಿಯಲ್ಲೇ ವ್ಯಾಪಾರಸ್ಥರು ಹೂವು, ಹಣ್ಣು, ಅಂಗಡಿ ಇಟ್ಟು ಜೀವನೋಪಾಯಕ್ಕಾಗಿ ವ್ಯಾಪಾರ ಮಾಡುತ್ತಿದ್ದು, ಈ ರೀತಿ ವಾಹನಗಳು ಏಕಾಏಕಿ ನುಗ್ಗಿ ಬಂದರೆ ಅವರ ಜೀವದ ಗತಿ ಏನು? ಎಂಬುದನ್ನು ಚಿಂತಿಸಬೇಕಿದೆ.

ಇದಲ್ಲದೆ ಪಟ್ಟಣ ಪಂಚಾಯ್ತಿಯು ಕೋಟ್ಯಾಂತರ ರೂ ಖರ್ಚು ಮಾಡಿ ವಾಣಿಜ್ಯ ಸಂಕೀರ್ಣ ನಿರ್ಮಿಸಿದ್ದು, ತಿಂಗಳ ಹಿಂದೆ ಅಂಗಡಿ ಮಳಿಗೆಗಳ ಹರಾಜು ಪ್ರಕ್ರಿಯೆಯನ್ನು ನಡೆಸಿದೆ. ಉತ್ತಮ ಮೊತ್ತಕ್ಕೆ ಎಲ್ಲಾ ಅಂಗಡಿಗಳು ಹರಾಜಾಗಿದೆ. ಆದರೆ ಪಟ್ಟಣ ಪಂಚಾಯ್ತಿ ವಾಣೀಜ್ಯ ಸಂಕೀರ್ಣದ ಸುತ್ತ ಇರುವ ಬೀದಿಬದಿ ವ್ಯಾಪಾರಸ್ಥರ ತೆರವು ಕಾರ್ಯಾಚರಣೆ ಮಾಡಿಸದ ಕಾರಣ ಹರಾಜಿನಲ್ಲಿ ಅಂಗಡಿ ಪಡೆದವರು ಚಿಂತಿತರಾಗಿದ್ದಾರೆ. ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ವಾಣಿಜ್ಯ ಸಂಕೀರ್ಣ ಉದ್ಘಾಟನೆಯಾಗಿ, ಹರಾಜು ಪ್ರಕ್ರಿಯೆ ನಡೆದರೂ ವ್ಯಾವಾರ ವಹಿವಾಟು ನಡೆಯುವ ಸೌಭಾಗ್ಯ ಇನ್ನೂ ಒದಗಿ ಬಂದಿಲ್ಲ. ಪಟ್ಟಣ ಪಂಚಾಯ್ತಿ ಬೀದಿಬದಿ ವ್ಯಾಪಾರಸ್ಥರಿಗಾಗಿ ಸಂತೆ ಮೈದಾನದಲ್ಲಿ ಸ್ಥಳಾವಕಾಶ ಮಾಡಿಕೊಟ್ಟಿದ್ದರೂ ವ್ಯಾಪಾರಸ್ಥರು ಅಲ್ಲಿಗೆ ಹೋಗಲು ಸಿದ್ದರಿಲ್ಲ. ಒಟ್ಟಾರೆ ಟ್ರಾಫಿಕ್ ಸಮಸ್ಯೆ, ಬೀದಿ ಬದಿ ವ್ಯಾಪಾರಸ್ಥರ ಸ್ಥಳದ ಸಮಸ್ಯೆ, ಕಿರಿದಾದ ರಸ್ತೆಗಳು, ಜನಪ್ರತಿನಿಧಿ, ಅಧಿಕಾರಿಗಳ ನಿರ್ಲಕ್ಷ್ಯ ಎಲ್ಲವೂ ಸೇರಿ ನಾಗರೀಕರು ಭಯದಿಂದ ರಸ್ತೆಯಲ್ಲಿ ಸಂಚರಿಸುವಂತಾಗಿದೆ.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!