ಈ ಆಟದ ಫಲಿತಾಂಶ ಖಂಡಿತ ಒಂದೇ ದಿಕ್ಕಿನಲ್ಲಿ ಇರುತ್ತದೆ. ಲಾಭ ಕಾಂಗ್ರೆಸ್ ನ ಸಿದ್ದರಾಮಯ್ಯನವರಿಗೆ ಅಥವಾ ಡಿಕೆ ಶಿವಕುಮಾರ್ ಅವರಿಗೆ ಅಥವಾ ಸ್ವಲ್ಪ ಹೆಚ್ಚು ಕಡಿಮೆಯಾಗಿ ಸರ್ಕಾರ ಉರುಳಿದರೆ ಬಿಜೆಪಿ ನಾಯಕರುಗಳಿಗೆ. ನಷ್ಟ ಮಾತ್ರ ನಮಗೆ, ನಿಮಗೆ ಮತ್ತು ಎಲ್ಲಾ ಸಾರ್ವಜನಿಕರಿಗೆ…..
ಸ್ವಾತಂತ್ರ್ಯ ಬಂದಾಗಿನಿಂದ ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಅವರಿಂದ ಸಿದ್ದರಾಮಯ್ಯನವರೆಗೆ ಮತ್ತೆ ಮತ್ತೆ ಜನ ಆಸೆ ಕಣ್ಣಿನಿಂದ ನೋಡುತ್ತಲೇ ಇದ್ದಾರೆ. ಬಡವರ ಬದುಕು ಹಸನಾಗಬಹುದು, ಸಮ ಸಮಾಜ ನಿರ್ಮಾಣವಾಗಬಹುದು, ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಅವಶ್ಯಕತೆಗಳು ಈಡೇರಬಹುದು ಎಂದು…….
ಇಲ್ಲಿಯವರೆಗೆ ಸಹಜವಾಗಿಯೇ ಜಗತ್ತಿನಲ್ಲಿ ಆಗುತ್ತಿರುವ ಒಂದಷ್ಟು ಅಭಿವೃದ್ಧಿ, ತಾಂತ್ರಿಕ ಪ್ರಗತಿ ಎಲ್ಲರ ಕಾಲದಲ್ಲೂ ಕರ್ನಾಟಕದಲ್ಲಿಯೂ ಆಗುತ್ತಲೇ ಇದೆ. ಅದರ ಪರಿಣಾಮವನ್ನು, ಲಾಭವನ್ನು ಜನ ಅನುಭವಿಸುತ್ತಿದ್ದಾರೆ.
ಅಷ್ಟನ್ನು ಹೊರತುಪಡಿಸಿ ಜನರ ಒಟ್ಟು ಜೀವನ ಮಟ್ಟ ಸುಧಾರಣೆಯ ದೃಷ್ಟಿಯಿಂದ ನೋಡುವುದಾದರೆ ಖಂಡಿತವಾಗಲೂ ಅಭಿವೃದ್ಧಿ ಆಶಾದಾಯಕವಾಗಿಲ್ಲ. ಕೇವಲ ಕೆಲವೇ ರಾಜಕಾರಣಿಗಳು, ಅಧಿಕಾರಿಗಳು, ಕೆಲವೇ ಕೆಲವು ಉದ್ಯಮಿಗಳು, ವ್ಯಾಪಾರಸ್ಥರು, ದಲ್ಲಾಳಿಗಳು, ಕೆಲವು ವೃತ್ತಿಪರರು ಮಾತ್ರ ಈ ವ್ಯವಸ್ಥೆಯ ಸಂಪೂರ್ಣ ಲಾಭ ಪಡೆದು ಉತ್ತಮ ಜೀವನ ಮಾಡುತ್ತಿದ್ದಾರೆ.
ಆದರೆ ಇನ್ನೂ ಬಹಳಷ್ಟು ಜನ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇನ್ನೂ ಕೆಲವು ಕೆಳ ಮಧ್ಯಮ ಮತ್ತು ಮಧ್ಯಮ ವರ್ಗದವರ ಬದುಕೇನು ನೆಮ್ಮದಿಯಾಗಿಲ್ಲ. ಜೀವನಪೂರ್ತಿ ಒಂದಲ್ಲಾ ಒಂದು ಕಷ್ಟದಲ್ಲಿಯೇ ಕಳೆಯುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮದುವೆ, ಮನೆ ಇಂತಹ ವಿಷಯಗಳಿಗೆ ಇಡೀ ಜೀವನವನ್ನೇ ಸವೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತಾವು ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಕನಸು ನನಸಾಗದೇ ಇಹಲೋಕ ತ್ಯಜಿಸುತ್ತಿದ್ದಾರೆ……
ವಸ್ತು ಸಂಸ್ಕೃತಿ, ಕೊಳ್ಳುಬಾಕ ಸಂಸ್ಕೃತಿ, ಗ್ರಾಹಕ ಸಂಸ್ಕೃತಿ, ಕಾರ್ಪೊರೇಟ್ ಸಂಸ್ಕೃತಿ ಈ ಸಮಾಜವನ್ನು ಆಕ್ರಮಿಸಿಕೊಂಡು ಸಾಮಾನ್ಯ ಜನರ ಜೀವನ ಮಟ್ಟವೇ ಕುಸಿಯುವಂತಾಗಿದೆ. ಏಕೆಂದರೆ ಆಡಳಿತ ವ್ಯವಸ್ಥೆ ಸಂಪತ್ತಿನ ಹಂಚಿಕೆಯನ್ನು ಉತ್ತಮ ರೀತಿಯಲ್ಲಿ ಮಾಡಬೇಕಾಗಿತ್ತು. ಅದು ಸಾಧ್ಯವಾಗಿಲ್ಲ. ಅದಕ್ಕೆ ಎರಡು ಬಹುದೊಡ್ಡ ಅಡೆತಡೆಗಳೆಂದರೆ ಜಾತಿ ವ್ಯವಸ್ಥೆ ಮತ್ತು ಭ್ರಷ್ಟಾಚಾರ. ಇದಕ್ಕೆ ಕಳಶಪ್ರಾಯವಿದ್ದಂತೆ ಅಧಿಕಾರಕ್ಕಾಗಿ ಕಿತ್ತಾಟ ಜಾತಿ. ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇದೆ. ಇದು ಹೊಸದೇನು ಅಲ್ಲ.
ಪಕ್ಷದ ಯಾರೋ ನಾಲ್ಕೈದು ಜನ ಅಧಿಕಾರದ ಮುಖ್ಯಸ್ಥಾನಕ್ಕಾಗಿ ಹೋರಾಡುತ್ತಾ, ಅದೊಂದು ಖಾಸಗಿ ಆಸ್ತಿ ಎಂಬಂತೆ ಅದನ್ನೇ ಜೀವನದ ಪರಮೋಚ್ಚ ಗುರಿಯಾಗಿಸಿ ತಂತ್ರ, ಕುತಂತ್ರ, ಪ್ರತಿತಂತ್ರ ಹಣೆಯುತ್ತಿರುವುದರಿಂದ ವಾಸ್ತವದಲ್ಲಿ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ.
ಜನರಿಗೆ, ಅವರ ನೆಮ್ಮದಿಗೆ ಬೇಕಾದ ಆಡಳಿತಾತ್ಮಕ ವ್ಯವಸ್ಥೆ ಸಾಧ್ಯವಾಗುತ್ತಿಲ್ಲ. ಎಲ್ಲೋ ಕೆಲವು ಬಲಿಷ್ಠರಿಗೆ ಅಥವಾ ತಂತ್ರಗಾರರಿಗೆ ಮಾತ್ರ ಈ ವ್ಯವಸ್ಥೆಯಲ್ಲಿ ಒಂದಷ್ಟು ಅನುಕೂಲಗಳಿರುವುದು ಬಿಟ್ಟರೆ ಸಾಮಾನ್ಯ ಜನರಿಗೆ, ಅಸಹಾಯಕರಿಗೆ, ಅಮಾಯಕರಿಗೆ, ಮುಗ್ಧರಿಗೆ, ತಮ್ಮ ಪಾಡಿಗೆ ತಾವು ಇರುವವರಿಗೆ ಈ ವ್ಯವಸ್ಥೆ ಕಬ್ಬಿಣದ ಕಡಲೆಯಂತೆ ಕಾರ್ಯನಿರ್ವಹಿಸುತ್ತದೆ. ಇದನ್ನು ಸರಳೀಕರಣಗೊಳಿಸಬೇಕಾದ ರಾಜಕೀಯ ವ್ಯವಸ್ಥೆ ಕುರ್ಚಿ ಕಿತ್ತಾಟದಲ್ಲಿಯೇ ಐದು ವರ್ಷಗಳನ್ನು ಕಳೆದರೆ ಅಭಿವೃದ್ಧಿ ಹೇಗೆ ಸಾಧ್ಯ.
ಕುರಿ ಕಾಯುತ್ತಿದ್ದ ವ್ಯಕ್ತಿಯೊಬ್ಬ ರಾಜ್ಯದ ಮುಖ್ಯಮಂತ್ರಿಯಾಗಿ, ಸಾಮಾನ್ಯ ರೈತರ ಮಗನೊಬ್ಬ ಉಪಮುಖ್ಯಮಂತ್ರಿಯಾಗಿ ಎಷ್ಟೆಲ್ಲಾ ಅಧಿಕಾರ ಅನುಭವಿಸಿದ ನಂತರವೂ ಕುರ್ಚಿಗಾಗಿಯೇ ಹೋರಾಡುತ್ತಿರುವುದನ್ನು ನೋಡಿದರೆ ಸಾಮಾನ್ಯ ಜನರ ಬದುಕಿನ ಬಗೆಗಿನ ನಿರಾಸಕ್ತಿ ನಿಜಕ್ಕೂ ಸೋಜಿಗವೆನಿಸುತ್ತದೆ. ಎಲ್ಲ ಒಳ್ಳೆಯ ಅಂಶಗಳನ್ನು ಸಾರ್ವಜನಿಕರಿಗೆ ಬೋಧನೆ ಮಾಡುತ್ತಾರೆ. ಆದರೆ ತಾವು ಮಾತ್ರ ಪಟ್ಟಭದ್ರ ಹಿತಾಸಕ್ತಿಗಳಂತೆ ಅಧಿಕಾರದ ಸುತ್ತಲೇ ಸುತ್ತುತ್ತಿರುವುದು ಎಂತಹ ಘೋರ ಅನ್ಯಾಯ.
ಈಗ ಅವರಿಬ್ಬರೂ ಏರಿರುವ ಎತ್ತರದಲ್ಲಿ ಸೋಲು ಎನ್ನುವ ಮಾತೇ ಇಲ್ಲ. ಇನ್ನೇನಿದ್ದರೂ ಆ ಎತ್ತರದಲ್ಲಿಯೇ ಮಾಜಿಗಳಾಗಬಹುದೇ ಹೊರತು ಇಬ್ಬರಿಗೂ ಅನ್ಯಾಯದ ಮಾತೇ ಇಲ್ಲ. ಹೊಸ ರಕ್ತವನ್ನು, ಹೊಸ ವಿಚಾರಗಳನ್ನು, ಹೊಸ ಪೀಳಿಗೆಯನ್ನು ಮಾರ್ಗದರ್ಶನದ ಮೂಲಕ ಮುನ್ನಡೆಸಬೇಕಾದ ಸಂದರ್ಭದಲ್ಲಿ ಯಾರೇ ಆಗಲಿ ಕುರ್ಚಿಗೆ ಅಂಟಿಕೊಳ್ಳುವುದು ಸ್ವಾರ್ಥದ ಪರಮಾವಧಿ.
ಇದು ಕೇವಲ ಈ ಇವರಿಬ್ಬರಿಗೆ ಮಾತ್ರವಲ್ಲ, ರಾಷ್ಟ್ರಮಟ್ಟದಲ್ಲಿಯೂ, ಇತರ ಎಲ್ಲಾ ರಾಜ್ಯಗಳ ಮಟ್ಟದಲ್ಲಿಯೂ, ಎಲ್ಲರಿಗೂ ಅನ್ವಯಿಸುತ್ತದೆ. ತ್ಯಾಗವಿಲ್ಲದೆ ಸಮಾಜ ಕಟ್ಟಲು ಸಾಧ್ಯವೇ ಇಲ್ಲ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಸಾರ್ವಜನಿಕ ಅಧಿಕಾರದ ಕುರ್ಚಿ ಯಾರ ಸ್ವಂತ ಆಸ್ತಿಯೂ ಅಲ್ಲ. ದಯವಿಟ್ಟು ಹೊಸ ಹೊಸ ಪ್ರಯೋಗಗಳಿಗೆ, ಚಿಂತನೆಗಳಿಗೆ, ವ್ಯಕ್ತಿಗಳಿಗೆ ಅವಕಾಶ ಮಾಡಿಕೊಡಿ….
ಧರ್ಮಗಳಂತೆ ಪ್ರಜಾಪ್ರಭುತ್ವದ ಮೌಲ್ಯಗಳು ಸಹ ಕೊಳೆತು ನಾಾರಲು ಬಿಡಬೇಡಿ. ಜನರೂ ಸಹ ಜಾಗೃತರಾಗಿ. ಅದೇ ಪಕ್ಷದ ಅದೇ ಮುಖಂಡರುಗಳಿಗೆ ಮಣೆ ಹಾಕುತ್ತಾ ನಿಮ್ಮ ಸಮಾಧಿಗೆ ನೀವೇ ಅಡಿಗಲ್ಲು ಹಾಕಬೇಡಿ. ಒಂದಷ್ಟು ಸಂವೇದನೆಯಿಂದ ಯೋಚಿಸಿ.
ಮಾಧ್ಯಮಗಳು ಕೃತಕವಾಗಿ ಸೃಷ್ಟಿಸಿದ ಸುದ್ದಿಗಳ ವ್ಯಾಪಾರ ಮಾಡುತ್ತಾ, ರೋಚಕ ತಿರುವುಗಳನ್ನು ನೀಡುತ್ತಾ, ನಮ್ಮನ್ನು ಹುಚ್ಚು ಕುತೂಹಲಕ್ಕೆ ತಳ್ಳುವ ಸಂಚಿಗೆ ಬಲಿಯಾಗದಿರಿ.
ಧನ್ಯವಾದಗಳು
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ಲೇಖನ:ರಾಜು ಮುಂಡೆ ,ಬೆಳಗಾವಿ




